‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಘೋಷವಾಕ್ಯದಡಿಯಲ್ಲಿ ಭರ್ಜರಿ ಹೂಡಿಕೆ!

Update: 2022-11-06 03:54 GMT

ವಿಧಾನಸೌಧದ ಹೆಬ್ಬಾಗಿಲಿನಿಂದ ಬೊಮ್ಮಣ್ಣನವರು ಏದುಸಿರು ಬಿಟ್ಟು ಓಡುತ್ತಾ ಬರುತ್ತಿದ್ದರು. ನೋಡಿದರೆ, ಸ್ಪೋರ್ಟ್ಸ್ ಬಟ್ಟೆ, ಶೂ ಧರಿಸಿಕೊಂಡಿದ್ದರು.

‘‘ಏನ್ ಸಾರ್ ಇದು ....’’ ಪತ್ರಕರ್ತ ಎಂಜಲು ಕಾಸಿ ಅಚ್ಚರಿಯಿಂದ ಕೇಳಿದ.

‘‘ಜಿಮ್ಮು ಕಣ್ರೀ...ಜಿಮ್ಮು....ನೋಡಿ ಹೇಗೆ ಬಾಡಿ ಬಂದಿದೆ ಅಂತ....’’ ಬೊಮ್ಮಣ್ಣ ತನ್ನ  ಮಾಂಸ ಖಂಡಗಳನ್ನು ಪ್ರದರ್ಶಿಸಿದ್ದರು. ಮೈಕೈ ಮಾಂಸ ಖಂಡಗಳು ಉಬ್ಬಿದ್ದವು.

‘‘ಅದೇನು ಸಾರ್...ಹಾಗೆ ಬಾತಿರೋದು...? ಯಾರೋ ಯದ್ವಾತದ್ವಾ ಬಾರಿಸಿರೋ ಹಾಗಿದೆ....’’ ಕಾಸಿ ಆತಂಕದಿಂದ ಕೇಳಿದ.

‘‘ಹೇ...ಬಾತಿರೋದು ಅಲ್ಲ....ಮೂರು ದಿನಗಳ ಜಿಮ್ ಸಹವಾಸ ಕಣ್ರೀ...ತೋಳುಗಳಲ್ಲಿ  ಉಬ್ಬಿರುವ ಮಾಂಸಖಂಡಗಳು ಕಣ್ರೀ...ಹೂಡಿಕೆ ... ಹೂಡಿಕೆ...ಹೂಡಿಕೆ...’’ ಎಂದು ಕಣ್ಣು ಮಿಟುಕಿಸಿದರು.

ಕಾಸಿ ಅರ್ಥವಾಗದೆ ‘‘ಮೂರು ದಿನದ ಜಿಮ್‌ನಲ್ಲಿ ಬಾಡಿ ಇಷ್ಟೊಂದು ಉಬ್ಬಿರೋದಾ....? ಅದೇನು ಸರ್ ಹೊಸದಾಗಿ ಜಿಮ್ ಅಭ್ಯಾಸ...?’’ ಕೇಳಿದ.

‘‘ರೀ...ಜಾಗತಿಕ ಹೂಡಿಕೆ ಕಣ್ರೀ..ಉದ್ಯಮಿಗಳಿಂದ ಭಾರೀ ಹೂಡಿಕೆ....ಕರ್ನಾಟಕದಲ್ಲಿ....’’ ಎಂದು ಮತ್ತೊಮ್ಮೆ ಮಾಂಸ ಖಂಡಗಳನ್ನು ಪ್ರದರ್ಶಿಸಿದರು.

ಕಾಸಿಗೆ ಈಗ ಅರ್ಥವಾಗ ತೊಡಗಿತು. ‘‘ರೆಟ್ಟೆ, ಕೈ ಕಾಲುಗಳೆಲ್ಲ ಹೂಡಿಕೆಯಿಂದ ಬಾತಿರೋದಾ ಸಾರ್...’’ ಕಾಸಿ ಕೇಳಿದ.

‘‘ಹೂಂ ಕಣ್ರೀ...ಭಾರೀ ಹೂಡಿಕೆ....ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ....ಕರ್ನಾಟಕದ ಮೇಲೆ ಹೂಡಿದ್ದೇ ಹೂಡಿದ್ದು....’’ ಬೊಮ್ಮಣ್ಣ ಮೀಸೆ ತಿರುಗಿಸಿದರು.

‘‘ಯಾವ ಯಾವ ಕಂಪೆನಿಯೋರೆಲ್ಲ ಹೂಡಿಕೆ ಮಾಡಿದ್ದಾರೆ ಸಾರ್...?’’

‘‘ಶಿವಸೇನೆ ಆ್ಯಂಡ್ ಕಂಪೆನಿ ಬೆಳಗಾವಿಯಲ್ಲಿ  ಹತ್ತು ವಿವಿಧ ಭಾಷಾ ಹೆಸರಿನ ಗಲಭೆಗಳಿಗೆ ಹೂಡಿಕೆ ಮಾಡಿದ್ದಾರೆ....ಅದರಿಂದ ಕನಿಷ್ಠ ನಮಗೆ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ....ಮುಂದಿನ ಚುನಾವಣೆಯ ಹೊತ್ತಿಗೆ ಅದರಿಂದ ಬರುವ ಲಾಭ ಎಷ್ಟು ಎನ್ನುವುದು ಗೊತ್ತಾಗಲಿದೆ....’’

‘‘ಇನ್ಯಾವ್ಯಾವ ಕಂಪೆನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲಿವೆ....ಸಾರ್...’’ ಕಾಸಿ ಆಸಕ್ತಿಯಿಂದ ಕೇಳಿದ.

‘‘ಉತ್ತರ ಪ್ರದೇಶದ ವಿವಿಧ ದ್ವೇಷ ಕಂಪೆನಿಗಳು ಕರ್ನಾಟಕದ ಬಗ್ಗೆ ಭಾರೀ ಆಸಕ್ತಿ ತೋರಿಸಿವೆ. ಸ್ವತಃ ಅಲ್ಲಿನ ಮುಖ್ಯಮಂತ್ರಿಯವರೇ ಹೂಡಿಕೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಬಾರಿಯ ಜಿಮ್ಮಿನಲ್ಲಿ  ತಮ್ಮ ಕಂಪೆನಿಯ ಬೇರೆ ಬೇರೆ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ದ್ವೇಷದ ಬೆಳೆಯಾಗಿದ್ದು, ಅದರ ಬೇರೆ ಬೇರೆ ತಳಿಯ ಬೀಜಗಳನ್ನು ಕಸಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಈಗಾಗಲೇ ಕರಾವಳಿಗೆ ಅವರು ಆಗಮಿಸಿ ಅಲ್ಲಿನ ಮಣ್ಣು ಪರೀಕ್ಷೆ ಮಾಡಿ ಹೋಗಿದ್ದು, ಆ ಮಣ್ಣಿಗೆ ಪೂರಕವಾಗಿರುವ ದ್ವೇಷೋದ್ಯಮವನ್ನು ತೆರೆಯಲು ಅವರು ಆಸಕ್ತಿ ಹೊಂದಿದ್ದಾರೆ....’’ ಬೊಮ್ಮಣ್ಣನವರು ವಿವರಿಸಿದರು.

ಕಾಸಿ ರೋಮಾಂಚನಗೊಂಡ. ಹೀಗಾದಲ್ಲಿ ಕರ್ನಾಟಕ ಕೆಲವೇ ದಿನಗಳಲ್ಲಿ ಔದ್ಯಮಿಕವಾಗಿ ಭಾರೀ ಸಾಧನೆ ಮಾಡಬಹುದು ಎನ್ನುವುದು ಸ್ಪಷ್ಟವಾಯಿತು. ‘‘ವಿದೇಶಗಳಿಂದ ಹೂಡಿಕೆಗಳಾಗಿವೆಯೆ?’’ ಆಸಕ್ತಿಯಿಂದ ಕೇಳಿದ.

‘‘ಮುಖ್ಯವಾಗಿ ಕೋಮುಗಲಭೋದ್ಯಮದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಬದಲು ಆಧುನಿಕ ಶಸತ್ಸಾಸ್ತ್ರಗಳ ಹೂಡಿಕೆಗೆ ಕೆಲವು ದೇಶಗಳು ಆಸಕ್ತಿಯನ್ನು ವಹಿಸಿವೆ. ಈ ನಿಟ್ಟಿನಲ್ಲಿ ಇಸ್ರೇಲ್‌ನ ಕಂಪೆನಿಗಳು ಕರ್ನಾಟಕದಲ್ಲಿ ಭಾರೀ ಹೂಡಿಕೆಯನ್ನು ಮಾಡುವುದಕ್ಕೆ ಆಸಕ್ತಿ ಹೊಂದಿವೆ.. ಹಾಗೆಯೇ ಕರ್ನಾಟಕದಲ್ಲಿ ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಘೋಷವಾಕ್ಯದೊಂದಿಗೆ ದ್ವೇಷೋದ್ಯಮವನ್ನು ಬೆಳೆಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಲವು ಉದ್ದಿಮೆಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಯೋಜನೆಯನ್ನು ಹಾಕಿದ್ದೇವೆ. ಈ ಉದ್ಯಮವನ್ನು ಯಶಸ್ವಿಗೊಳಿಸಲು ಕರ್ನಾಟಕದಿಂದಲೂ ಒಂದು ರೈಲನ್ನು ನಾವು ಅಯೋಧ್ಯೆಗೆ ಹೊರಡಿಸಲಿದ್ದೇವೆ....’’ ಬೊಮ್ಮಣ್ಣನವರು ಯೋಜನೆಯನ್ನು ಮುಂದಿಟ್ಟರು.

‘‘ಬೇರೆ ಯಾರೆಲ್ಲ ಈ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಸಾರ್...?’’ ಕಾಸಿ ಅತ್ಯಾಸಕ್ತಿ ವಹಿಸಿದ.

‘‘ದೇಶದಲ್ಲಿರುವ ಬೇರೆ ಬೇರೆ ತನಿಖಾ ಸಂಸ್ಥೆಗಳು ಪರೋಕ್ಷ ಹೂಡಿಕೆಗೆ ಆಸಕ್ತಿ ವಹಿಸಿವೆ. ಗುಜರಾತ್, ಉತ್ತರಪ್ರದೇಶದ ಕಂಪೆನಿಗಳು ಬಿತ್ತುವ ದ್ವೇಷೋದ್ಯಮ ಉತ್ಪಾದನೆಗಳನ್ನು ರಫ್ತು ಮಾಡುವುದಕ್ಕೆ ಈ ತನಿಖಾ ಸಂಸ್ಥೆಗಳು ತಮ್ಮ ಕಂಪೆನಿಗಳಿಂದ ಬೇರೆ ಬೇರೆ ರೀತಿಯ ನೆರವುಗಳನ್ನು ನೀಡಲಿವೆ. ಕೇಂದ್ರ ಸರಕಾರ ಈ ಸಂಸ್ಥೆಗಳಿಗೆ ಅನುದಾನಗಳನ್ನು ನೀಡಲಿವೆ....’’

‘‘ಸರ್...ಸರಕಾರ ಯಾವ ಯಾವ ರೀತಿಯಲ್ಲಿ  ಹೂಡಿಕೆಗೆ ಬೆಂಬಲ ನೀಡಲಿದೆ?’’

‘‘ನೋಡಿ...ದ್ವೇಷೋದ್ಯಮದಲ್ಲಿ  ಯಾವುದೇ ರೀತಿಯಲ್ಲಿ ನಾಶನಷ್ಟವಾದಾಗ ಸರಕಾರ ಬೆಂಬಲ ಬೆಲೆಯನ್ನು ನೀಡಿ ನಷ್ಟವಾಗದಂತೆ ನೋಡಿಕೊಳ್ಳುತ್ತದೆ...ಮುಖ್ಯವಾಗಿ ಪರಿಹಾರ ಬೆಲೆ...ಬೆಂಬಲ ಬೆಲೆ ನೀಡುವಾಗ ನಿರ್ದಿಷ್ಟ ಸಮುದಾಯಗಳಿಗೆ ವಿಶೇಷ ಮೀಸಲಾತಿಯನ್ನು ನೀಡಲಾಗುತ್ತದೆ...ಹಾಗೆಯೇ ಬೆಂಕಿ ಬಿದ್ದಲ್ಲಿಗೆ ಸುರಿಯುವುದಕ್ಕೆ ಬೇಕಾದ ಎಣ್ಣೆ, ತುಪ್ಪವನ್ನು ಸರಕಾರವೇ ಸಬ್ಸಿಡಿಯಲ್ಲಿ ಒದಗಿಸಲಿವೆ....’’ ಬೊಮ್ಮಣ್ಣ ವಿವರಿಸಿದರು.

‘‘ಹಾಗಾದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಔದ್ಯಮಿಕ ಕ್ಷೇತ್ರದಲ್ಲಿ ನಂ. ೧....ಅಲ್ಲವೆ ಸಾರ್....’’

‘‘ಹೌದು...ಹೌದು....ಈಗಾಗಲೇ ವಿಶ್ವದ ಹಲವೆಡೆಯಿಂದ ಭಾರೀ ಪ್ರಮಾಣದ ಬೂದಿಗೆ ಬೇಡಿಕೆ ಬಂದಿವೆ. ದ್ವೇಷೋದ್ಯಮದಲ್ಲಿ ಉತ್ಪತ್ತಿಯಾದ ಬೂದಿಯನ್ನೆಲ್ಲ ವಿದೇಶಗಳಿಗೆ ಕಳುಹಿಸಿ ವಿದೇಶ ವಿನಿಮಯವನ್ನು ಹೆಚ್ಚಿಸಲಿದ್ದೇವೆ...ಶೀಘ್ರದಲ್ಲೇ ಡಾಲರ್ ಮುಂದೆ ರೂಪಾಯಿ ಬೆಲೆ ಹೆಚ್ಚಳವಾಗಲಿದೆ...’’ ಬೊಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಕಾಸಿಯು ಬೊಮ್ಮಣ್ಣನವರ ತೋಳಿನ ಮಾಂಸಖಂಡವನ್ನು ಮತ್ತೊಮ್ಮೆ ಮುಟ್ಟಿ ನೋಡಿ ಸಂಭ್ರಮದಿಂದ ಅಲ್ಲಿಂದ ಕಾಲ್ಕಿತ್ತ.

ಚೇಳಯ್ಯ

chelayya@gmail.com

Similar News