×
Ad

ಬಂಡವಾಳ ಹೂಡಿಕೆಯಲ್ಲ, ಚುನಾವಣಾ ಬಾಂಡ್‌ವಾಳ ಹೂಡಿಕೆ !

Update: 2024-03-24 10:50 IST

ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಛೂ. ಆಯೋಗ ‘ಜೇಮ್ಸ್ ಬಾಂಡ್’ ಹಾಲಿವುಡ್ ಚಿತ್ರಗಳಿಗೆ ಒಮ್ಮೆಲೆ ನಿಷೇಧ ಹೇರಿತು. ಪತ್ರಕರ್ತ ಎಂಜಲು ಕಾಸಿ ಆತುರಾತುರದಿಂದ ಛೂ. ಆಯೋಗ ಕಚೇರಿಯ ಬಾಗಿಲು ತಟ್ಟಿದ ‘‘ಸಾರ್...ಚುನಾವಣೆಗೂ ಜೇಮ್ಸ್ ಬಾಂಡ್ ಸಿನೆಮಾಗಳಿಗೂ ಏನು ಸಂಬಂಧ?’’

‘‘ಹ್ಹೆ ಹ್ಹೆ...ಜೇಮ್ಸ್ ಬಾಂಡ್ ಸಿನೆಮಾ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ?’’ ಛೂ. ಆಯೋಗ ಉತ್ತರಿಸಿತು.

‘‘ಹೇಗೆ ಸಾರ್....?’’ ಕಾಸಿ ಅರ್ಥವಾಗದೆ ಕೇಳಿದ.

‘‘ಜೇಮ್ಸ್ ಬಾಂಡ್ ಸಿನೆಮಾಗಳು ಚುನಾವಣಾ ಬಾಂಡ್‌ನ್ನು ನೆನಪಿಸುವುದರಿಂದ ಅದು ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದುದರಿಂದ ಎಲ್ಲ ಬಾಂಡ್ ಸಿನಿಮಾಗಳನ್ನು ಚುನಾವಣೆ ಮುಗಿಯುವವರೆಗೆ ನಿಷೇಧ ಮಾಡಲಾಗುತ್ತದೆ....’’

‘‘ಚುನಾವಣಾ ಬಾಂಡ್ ಕುರಿತಂತೆ ತನಿಖೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆಯೇ?’’ ಕಾಸಿ ಮರು ಪ್ರಶ್ನಿಸಿದ.

‘‘ಚುನಾವಣಾ ಬಾಂಡ್ ಬಹಿರಂಗವಾಗುವುದರ ಹಿಂದೆ ವಿದೇಶಿ ಕೈವಾಡಗಳಿವೆೆಯೋ? ಭಾರತದ ವರ್ಚಸ್ಸಿಗೆ ಧಕ್ಕೆ ತರಲು ಪಾಶ್ಚಿಮಾತ್ಯ ದೇಶಗಳು ಸಂಚು ನಡೆಸಿವೆಯೋ ಎಂಬಿತ್ಯಾದಿ ತನಿಖೆ ನಡೆಸುವುದಕ್ಕೆ ಆಯೋಗ ಸಿದ್ಧವಿದೆ. ಆದರೆ ವಿರೋಧ ಪಕ್ಷಗಳು ಸಹಕರಿಸುತ್ತಿಲ್ಲ....’’ ಛೂ. ಆಯೋಗ ಅಸಹಾಯಕತೆ ವ್ಯಕ್ತಪಡಿಸಿತು.

***

ಕಾಸಿಗೆ ಛೂ. ಆಯೋಗದ ಉತ್ತರಗಳಿಂದ ಸಂತೃಪ್ತಿಯಾಗದೇ ನೇರವಾಗಿ ಹೆಂಗ್ ಪುಂಗ್ಲಿ ಬಳಿಕ ಧಾವಿಸಿದ. ‘‘ಸಾರ್...ಬಾಂಡ್....’’ ಎಂದು ಕಾಸಿ ಬಾಯಿ ತೆರೆದದ್ದೇ ಪುಂಗ್ಲಿ ಪುಂಗುವುದಕ್ಕೆ ಆರಂಭಿಸಿದರು.

‘‘ನೋಡ್ರಿ....ನಮ್ಮ ಮೋದಿಯವರ ಸಾಧನೆ....ದೇಶ ದೇಶ ತಿರುಗಿ ಬಂಡವಾಳ ಹೂಡಿಕೆ ಮಾಡಲು ಕರೆ ಕೊಟ್ಟರು. ಅದರ ಫಲ ಕಣ್ರೀ....’’

‘‘ಸಾರ್...ಬಂಡವಾಳ ಹೂಡಿಕೆ ಎಲ್ಲಿ ಆಗಿದೆ? ಉದ್ಯಮಗಳೆಲ್ಲ ಬಡವಾಗಿವೆ...’’ ಕಾಸಿ ಆತಂಕದಿಂದ ಹೇಳಿದ.

‘‘ನಮ್ಮ ಮೋದಿಯವರು ಭಾರತದಲ್ಲಿ ಬಂಡವಾಳ ಹೂಡಿ ಎಂದು ಉದ್ಯಮಿಗಳಿಗೆ ಕರೆ ಕೊಟ್ರು. ಅವರೆಲ್ಲ ಬಿಜೆಪಿಯ ಮೇಲೆಯೇ ಬಂಡವಾಳ ಹೂಡಿದರು. ಮೋದಿಯ ಮೇಲೆ ಉದ್ಯಮಿಗಳಿಗೆ ಅಷ್ಟೊಂದು ನಂಬಿಕೆ ಕಣ್ರೀ....’’

‘‘ಹಾಗಾದರೆ ಭಾರತದ ಉದ್ಯಮಗಳ ಗತಿ....’’

‘‘ಏನ್ರೀ ಹೀಗಂತೀರಾ? ಮೋದಿಯವರ ಮೇಲೆ ಬಂಡವಾಳ ಹೂಡಿದರೆ ಭಾರತದ ಮೇಲೆ ಬಂಡವಾಳ ಹೂಡಿದಂತೆಯೇ ಸರಿ. ಮೋದಿಯವರನ್ನು ಟೀಕಿಸಿದರೆ ದೇಶವನ್ನು ಟೀಕಿಸುವುದು ಎಷ್ಟು ನಿಜವೋ ಹಾಗೆಯೇ, ಮೋದಿಯವರ ಮೇಲೆ ಬಂಡವಾಳ ಹೂಡುವುದು ಕೂಡ. ಮೋದಿಯವರ ಮೇಲೆ ಬಂಡವಾಳ ಹೂಡುವುದನ್ನು ವಿರೋಧಿಸಿದರೆ ದೇಶದಲ್ಲಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿದಂತೆ....’’

‘‘ಆದರೆ ಇದನ್ನು ಅಕ್ರಮ ಎಂದು ಹೇಳುತ್ತಿದ್ದಾರಲ್ಲ....’’ ಕಾಸಿ ಗೊಂದಲಗೊಂಡು ಕೇಳಿದ.

‘‘ಸರ್ಜಿಕಲ್ ಸ್ಟ್ರೈಕ್ ನಕಲಿ ಎಂದು ಹೇಳುತ್ತಾರಲ್ಲ, ಹಾಗೆಯೇ ಇದು. ಮೋದಿಯವರ ಮೇಲೆ ನಂಬಿಕೆಯಿದ್ದ ಕಾರಣ ಅವರು ಸಾವಿರಾರು ಕೋಟಿ ಬಂಡವಾಳ ಹೂಡಿದ್ದಾರೆ....ಬಿಜೆಪಿಯನ್ನು ಬೆಳೆಸುವುದು ಎಂದರೆ ತಮ್ಮ ಉದ್ಯಮವನ್ನು ಬೆಳೆಸಿದಂತೆ ಎಂದು ಉದ್ಯಮಪತಿಗಳು ನಂಬಿರುವ ಕಾರಣ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಈ ಮೂಲಕ ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ....’’

‘‘ಈ ಬಂಡವಾಳದಿಂದ ದೇಶಕ್ಕೆ ಏನು ಲಾಭ? ಇದನ್ನು ಬಂಡವಾಳ ಎಂದು ಕರೆಯುವುದು ಎಷ್ಟು ಸರಿ?’’

‘‘ಬಂಡವಾಳ ಎಂದು ಕರೆಯುವುದಕ್ಕೆ ಕಷ್ಟವಾದರೆ ‘ಬಾಂಡ್’ ವಾಳ ಎಂದು ಕರೆಯಿರಿ. ಸಿಂಹವನ್ನು ಸಾಕುವುದಕ್ಕೆ ಸಾಕಷ್ಟು ಖರ್ಚು ಇರುವುದಿಲ್ಲವೆ? ಪ್ರಧಾನಿ ಮೋದಿಯವರನ್ನು ಸಾಕುವುದಕ್ಕಾಗಿ ಈ ಬಂಡವಾಳವನ್ನು ಬಳಸುತ್ತೇವೆ. ಎಲ್ಲ ಉದ್ಯಮಗಳನ್ನು ಮುಚ್ಚಿ ಮುಂದಿನ ದಿನಗಳಲ್ಲಿ ಬಿಜೆಪಿ ಎನ್ನುವ ಏಕೈಕ ಉದ್ಯಮವನ್ನು ಬೆಳೆಸಿ ಈ ದೇಶದ ಆರ್ಥಿಕತೆಯನ್ನು ಆಕಾಶದೆತ್ತರಕ್ಕೆ ಏರಿಸಲಿದ್ದೇವೆ....’’

‘‘ಸುಪ್ರೀಂಕೋರ್ಟ್ ಈ ಬಾಂಡ್‌ನ್ನು ಅಕ್ರಮ ಎಂದು ಹೇಳಿದೆಯಲ್ಲ?’’ ಕಾಸಿ ಕೇಳಿದ.

‘‘ಮುಂದಿನ ಚುನಾವಣೆಯಲ್ಲಿ ಗೆದ್ದರೆ ಸುಪ್ರೀಂಕೋರ್ಟನ್ನೇ ಅಕ್ರಮ ಎಂದು ಕರೆದರಾಯಿತು. ಆ ಮೂಲಕ ಈ ಬಂಡವಾಳವನ್ನೆಲ್ಲ ಸಕ್ರಮ ಮಾಡಬಹುದು’’ ಪುಂಗ್ಲಿ ಪರಿಹಾರ ಹೇಳಿದರು.

‘‘ಭ್ರಷ್ಟರೆಲ್ಲ ಬಂಡವಾಳ ಹೂಡಿದ್ದಾರಲ್ಲ....’’

‘‘ಹಿಂದೆ ಭ್ರಷ್ಟರೆಲ್ಲ ಸ್ವಿಸ್ ಬ್ಯಾಂಕ್‌ನಲ್ಲಿ ತಮ್ಮ ಕಪ್ಪು ಹಣವನ್ನು ಬಚ್ಚಿಡುತ್ತಿದ್ದರು. ಈಗ ಮೋದಿಯವರು ಬಂದ ಬಳಿಕ ಸ್ವಿಸ್ ಬ್ಯಾಂಕ್‌ನಲ್ಲಿ ಇಡಲು ಹೆದರಿ ನೇರವಾಗಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಇಡುತ್ತಿದ್ದಾರೆ. ಈ ಮೂಲಕ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತರುವ ಬದಲು ಇಡೀ ಸ್ವಿಸ್ ಬ್ಯಾಂಕ್‌ನ ಶಾಖೆಯನ್ನೇ ಎಸ್‌ಬಿಐ ಬ್ಯಾಂಕ್‌ನಲ್ಲಿ ಸ್ಥಾಪಿಸುವ ಮೋದಿಯವರ ಕನಸು ಯಶಸ್ವಿಯಾಗಿದೆ. ಕಪ್ಪು ಹಣ ಭಾರತದಲ್ಲೇ ಅದರಲ್ಲೂ ಮೋದಿಯವರ ಪೆಟ್ಟಿಗೆಯಲ್ಲೇ ಭದ್ರವಾಗಿ ಉಳಿಯುವಂತಾಗಿದೆ....’’

‘‘ಸಾರ್...ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಬಹುದು?’’

‘‘ಯಾವ ಪಕ್ಷಕ್ಕೆ ಹೆಚ್ಚು ಹೂಡಿಕೆಯಾಗಿದೆಯೋ ಆ ಪಕ್ಷವೇ ಗೆಲ್ಲಬಹುದು. ಗೆಲ್ಲದೇ ಇದ್ದರೆ ಗೆದ್ದ ಪಕ್ಷಗಳಲ್ಲಿರುವ ಸಂಸದರನ್ನು ಕೊಂಡು ಕೊಳ್ಳುವುದಕ್ಕೆ ಬೇಕಾದ ಬಂಡವಾಳವನ್ನು ಮೋದಿಯವರು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ....ಇಂತಹ ಪ್ರಧಾನಿಯನ್ನು ನೀವು ಯಾವತ್ತಾದರೂ ಕಂಡಿದ್ದೀರಾ?’’

‘‘ಸಾರ್...ಇದನ್ನು ಬಂಡವಾಳ ಎಂದು ಕರೆಯುವುದಕ್ಕಿಂತ ಭಂಡ ವಾಳ ಎಂದು ಕರೆಯುವುದೇ ವಾಸಿ. ನಿಮ್ಮ ಭಂಡ ಬಾಳನ್ನು ಮೆಚ್ಚಲೇ ಬೇಕು’’ ಎಂದವನೇ ಕಾಸಿ ಅಲ್ಲಿಂದ ಕಾಲ್ಕಿತ್ತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚೇಳಯ್ಯ

contributor

Similar News