ಸಾರ್...ನಿಮ್ಮ ಬಿ ಪ್ಲಾನ್ ಏನಾಯಿತು ?

Update: 2023-05-28 05:28 GMT

ಚುನಾವಣೆಯ ಬಳಿಕ ಪತ್ರಕರ್ತ ಎಂಜಲು ಕಾಸಿ ಯಾಕೋ ಮಂಕಾಗಿದ್ದ. ಅತಂತ್ರ ಸರಕಾರ ಬರುತ್ತದೆ ಎಂದು ಅಲ್ಲೂ ಇಲ್ಲೂ ಎಡತಾಕುತ್ತಾ ಆರಾಮ ಬದುಕು ಕಳೆಯುತ್ತಿದ್ದವನಿಗೆ ಫಲಿತಾಂಶ ನೀಡಿದ ಪೂರ್ಣ ಬಹುಮತದಿಂದ ನಿರಾಸೆಯಾಗಿತ್ತು. ಗಡ್ಡ ಸ್ವಾಮಿಯವರ ರೋಡ್ ಶೋಗಳನ್ನು ವರ್ಣಿಸಿ ಪುಟ ತುಂಬಾ ಬರೆದರೂ ಸೋಲಾಯಿತಲ್ಲ...ಎಂದು ಗೊಂದಲದಲ್ಲಿದ್ದ. ಏನೇ ಆಗಲಿ, ಸೋಲಿನ ಕಾರಣ ಹುಡುಕಲೇ ಬೇಕು ಎನ್ನುತ್ತಾ ಬೊಮ್ಮಣ್ಣರ ಬಳಿ ಧಾವಿಸಿದ. ನೇರ ಅವರ ನಿವಾಸದ ಬಾಗಿಲು ತಟ್ಟಿದರೆ ಬೊಮ್ಮಣ್ಣ ಕರೆಂಟು ಬಿಲ್ಲು ಕೈಯಲ್ಲಿ ಹಿಡಿದುಕೊಂಡು ಅದೇನೋ ಯೋಚಿಸುತ್ತಿದ್ದರು. ''ಸಾರ್....ನಾನು ಕಾಸಿ....'' ಎಂದು ಹಲ್ಲುಗಿಂಜುತ್ತಾ ಅವರ ಮುಂದೆ ನಿಂತ.

''ಕಾಸಿಯವ್ರೆ....ನೋಡ್ರೀ...ನೂತನ ಸರಕಾರ ಇನ್ನೂ ಗ್ಯಾರಂಟಿಯನ್ನು ಅನುಷ್ಠಾನಗೊಳಿಸಿಲ್ಲ....ಸರಕಾರ ರಚನೆಯಾಗಿ ಒಂದು ವಾರ ಕಳೆದಿದೆ. ಇನ್ನೂ ಸರಕಾರ ಬಿದ್ದಿಲ್ಲ....ನನ್ನ ಸರಕಾರದ ಶೇ. 40 ಗ್ಯಾರಂಟಿಯಿಂದ ಎಲ್ಲರೂ ಸಂತೃಪ್ತರಾಗಿ ಜೀವನ ನಡೆಸುತ್ತಿದ್ದರು. ಇದೀಗ ಈ ನೂತನ ಸರಕಾರದಿಂದಾಗಿ ಆ ಗ್ಯಾರಂಟಿಯೂ ಯಾರಿಗೂ ಇಲ್ಲದಂತಾಯಿತು....'' ಬೊಮ್ಮಣ್ಣ ಬೋಳು ತಲೆ ಒರೆಸಿಕೊಂಡರು.

''ಸಾರ್....ಶೇ. 40 ಗ್ಯಾರಂಟಿಯನ್ನು ನೀವು ಯಶಸ್ವಿಯಾಗಿ ಹಂಚಿದರೂ ಯಾಕೆ ಸೋಲಾಯಿತು....?'' ಕಾಸಿ ಕೊರೆಯುತ್ತಿರುವ ಪ್ರಶ್ನೆಯನ್ನು ಅವರ ಮುಂದಿಟ್ಟ.
''ಎಲ್ಲ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕಾಸಿಯವ್ರೇ...ಬೆಲೆಯೇರಿಕೆಯೇ ಸೋಲಿಗೆ ಮುಖ್ಯ ಕಾರಣ....'' ಬೊಮ್ಮಣ್ಣ ಒಪ್ಪಿಕೊಂಡರು.

 ಕಾಸಿ ಬೆಚ್ಚಿ ಬಿದ್ದ ''ಸಾರ್...ನಿಮ್ಮ ಸರಕಾರದ ಅವಧಿಯಲ್ಲಿ ಬೆಲೆಯೇರಿಕೆಯಾಗಿರುವುದನ್ನು ಒಪ್ಪಿಕೊಳ್ಳುತ್ತೀರಾ? ಜನರು ಅದರಿಂದ ಸಿಟ್ಟಾಗಿ ನಿಮ್ಮ ಸರಕಾರವನ್ನು ಸೋಲಿಸಿದರೆ?'' ''ನೋಡ್ರೀ....ಚುನಾವಣೆಯಲ್ಲಿ ಬೆಲೆಯೇರಿಕೆ ಸಿಕ್ಕಾಪಟ್ಟೆ ಪರಿಣಾಮ ಬೀರಿದೆ. ಮೊದಲೆಲ್ಲ ಮತದಾರರಿಗೆ ನೂರು ಇನ್ನೂರು ಕೊಟ್ಟರೆ ಸಾಕಾಗುತ್ತಿತ್ತು. ಆದರೆ ಈ ಬಾರಿ ಅದರ ನಾಲ್ಕು ಪಟ್ಟು ದುಡ್ಡು ಕೊಟ್ಟರೂ ಅವರು ಮತ ಹಾಕಿಲ್ಲ. ಮತದಾರರ ಬೆಲೆಯೇರಿಕೆಯಾಗಿರುವುದರಿಂದ ನಮಗೆ ಸೋಲಾಗಿದೆ....'' ಬೊಮ್ಮಣ್ಣ ಸ್ಪಷ್ಟಪಡಿಸಿದರು.

''ಸಾರ್...ಹಣ, ಹೆಂಡ....'' ಕಾಸಿ ಮತ್ತೆ ಕೇಳಿದ.
''ಮೊದಲೆಲ್ಲ ಒಂದು ಬಾಟಲು ಕೊಟ್ಟಿದ್ದರೆ ಸಾಕಾಗಿತ್ತು. ಈಗ ನಾಲ್ಕೈದು ಬಾಟಲು ಕೊಟ್ಟರೂ ಸಾಕಾಗಲ್ಲ ಅಂತಾರೆ. ಮತದಾರರ ಬೆಲೆ ಈ ರೀತಿ ಏರಿಕೆಯಾಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಹಣದುಬ್ಬರ ಹೆಚ್ಚಳ ನಮ್ಮ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಿತು....''
''ಹಣ ಬಿಡಿ ಸಾರ್...ಹೆಣಗಳ ಬಗ್ಗೆ ಹೇಳಿ....'' ಕಾಸಿ ಮೆದು ಸ್ವರದಲ್ಲಿ ಕೇಳಿದ.

''ಅಯ್ಯೋ....ಹೆಣಗಳ ಬೆಲೆಯೂ ಹೆಚ್ಚಿದೆ ಕಣ್ರೀ.. ಮೊದಲೆಲ್ಲ ಒಂದು ಹೆಣ ಬಿದ್ದರೆ ಓಟಿನ ಮಳೆಯೇ ಆಗಿ ಬಿಡುತ್ತಿತ್ತು. ಈ ಬಾರಿ ನಾಲ್ಕೈದು ಹೆಣ ಬಿದ್ದರೂ ಓಟು ಬೀಳಲಿಲ್ಲ. ಅಷ್ಟೇ ಅಲ್ಲ...ಬೀದಿಯಲ್ಲಿ ಯಾವ ಹೆಣ ಬಿದ್ರೂ ತಕ್ಷಣ ಮನೆಯವರಿಗೆ ಉದ್ಯೋಗ... ಕೋಟ್ಯಂತರ ಪರಿಹಾರ ಕೇಳುತ್ತಾರೆ. ಹೀಗಾದರೆ ಹೆಣದ ಮೇಲೆ ರಾಜಕೀಯ ಮಾಡುವುದು ಹೇಗೆ...? ಜನರು ನೇರ ಶೇ. 40 ಕಮಿಷನ್ ಮಟ್ಟಕ್ಕೆ ಇಳಿದಿದ್ದಾರೆ. ಮತದಾರರು ಈ ಮಟ್ಟಿಗೆ ಕೆಟ್ಟು ಹೋಗುತ್ತಾರೆ ಎಂದು ಭಾವಿಸಿರಲಿಲ್ಲ....'' ಬೊಮ್ಮಣ್ಣ ಬೇಜಾರಿನಿಂದ ಹೇಳಿದರು.

''ಸಾರ್...ನಿಮ್ಮ ಬಿ ಪ್ಲಾನ್ ಏನಾಯಿತು ?'' ಕಾಸಿ ಕುತೂಹಲದಿಂದ ಕೇಳಿದ.
''ಅಲ್ಲೂ ಬೆಲೆಯೇರಿಕೆ ಕಣ್ರೀ....'' ಬೊಮ್ಮಣ್ಣ ಮತ್ತೆ ನಿರಾಶೆಯ ಧ್ವನಿಯಲ್ಲಿ ಹೇಳಿದರು.
 ''ಯಾಕೆ ಸಾರ್?'' ಕಾಸಿಗೆ ಅರ್ಥವಾಗಲಿಲ್ಲ.

''ಶಾಸಕರೆಲ್ಲ ತಮ್ಮ ಬೆಲೆಗಳನ್ನು ಏರಿಸಿ ಬಿಟ್ಟಿದ್ದಾರೆ ಕಣ್ರೀ...ಶೇ. 40 ಕಮಿಷನ್ ಇಲ್ಲೂ ವಕ್ಕರಿಸಿಕೊಂಡಿದೆ. ಇದ್ದಬಿದ್ದ ಕಮಿಷನ್ ಹಣವನ್ನೆಲ್ಲ ಒಟ್ಟುಗೂಡಿಸಿ ಶಾಸಕರನ್ನು ಕೊಳ್ಳುವ ಪ್ರಯತ್ನ ನಡೆಸಿದೆವು. ಆದರೆ ಜೆಡಿಎಸ್ ಪಕ್ಷದೊಳಗಿರುವ ನಕಲಿ ಸಿಎಂ ಬಿಟ್ರೆ ಅಸಲಿ ಸಿಎಂ ಹುದ್ದೆ ಸಿಗುವ ಲಕ್ಷಣ ಕಾಣಲಿಲ್ಲ....''
''ಜೆಡಿಎಸ್ ಸಿಎಂನ್ನು ಟ್ರೈ ಮಾಡಿದ್ರಾ ಸಾರ್....?''

''ಆ ಸಿಎಮ್ಮು ಎರಡು ಬಾರಿ ನನ್ನ ಮನೆ ಬಾಗಿಲಿಗೆ ಬಂದು 'ನಾನು ಮಾರಾಟ ಆಗೋಕೆ ರೆಡಿ ಇದ್ದೇನೆ. ದಯವಿಟ್ಟು ನನ್ನನ್ನು ಕೊಂಡುಕೊಳ್ಳಿ. ನನ್ನನ್ನು ಕೊಂಡ್ಕೊಂಡ್ರೆ ನನ್ನ ಮಗನನ್ನ್ನು ಫ್ರೀಯಾಗಿ ಕೊಡ್ತೇನೆ. ನೀವೇ ಸೇರಿ ಅವನಿಗೊಂದು ಮದುವೆ ಮಾಡಿಸಿ ಬಿಡಿ. ನನಗಷ್ಟೇ ಸಾಕು....' ಗೊಳೋ ಎಂದು ಅಳೋಕೆ ಶುರು ಮಾಡಿದ್ರು. ಚುನಾವಣೆಯ ಸಂದರ್ಭದಲ್ಲಿ ವಿತರಿಸಿ ಉಳಿಸಿದ ಬಿರಿಯಾನಿ, ಫ್ರಿಜ್ಜಲ್ಲಿ ಇತ್ತು. ಅದನ್ನು ಕೊಟ್ಟು ಸಮಾಧಾನ ಮಾಡಿ ಕಳುಹಿಸಿದೆವು.....'' ಬೊಮ್ಮಣ್ಣ ನಿಟ್ಟುಸಿರಿಟ್ಟರು.

  ''ಸಾರ್...ನಿಮ್ಮ ಮುಂದಿನ ಕಾರ್ಯಕ್ರಮವೇನು?'' ''ನೋಡ್ರೀ...ನಾವು ಕೋಮುಗಲಭೆ, ಲವ್‌ಜಿಹಾದ್ ಮೊದಲಾದ ಭರವಸೆಗಳನ್ನು ಕೊಟ್ಟು, ಚುನಾವಣೆಗೆ ಮುನ್ನವೇ ಅವುಗಳನ್ನು ಈಡೇರಿಸಿದ್ದೇವೆ. ಆದರೆ ಇವರು ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದು ಒಂದು ವಾರವಾಗಿದ್ದರೂ ಈಡೇರಿಸಿಲ್ಲ. ಇವರ ಭರವಸೆ ನಂಬಿ ನನ್ನ ಮನೆಯಾಕೆಯೂ ಮತ ಹಾಕಿ ಬಿಟ್ಟಿದ್ದಾಳೆ....ತಕ್ಷಣ ಗ್ಯಾರಂಟಿ ಭರವಸೆಗಳನ್ನು ಈಡೇರಿಸಬೇಕು ಎಂದು ಹೋರಾಟ ಮಾಡುತ್ತೇವೆ....''
 ''ಅವರು ಈಡೇರಿಸಿ ಬಿಟ್ಟರೆ ಏನು ಮಾಡುತ್ತೀರಿ?''

''ಈಡೇರಿಸದ ಹಾಗೆ ಗರಿಷ್ಠ ಪ್ರಯತ್ನ ಮಾಡುತ್ತೇವೆ. ರಾಜ್ಯಕ್ಕೆ ಬರಬೇಕಾದ ಯಾವ ಹಣವನ್ನೂ ಕೇಂದ್ರ ಬಿಡುಗಡೆ ಮಾಡಬಾರದು ಎಂದು ಪ್ರಧಾನಿಗೆ ಮನವಿ ಅರ್ಪಿಸಿದ್ದೇವೆ. ರಾಜ್ಯದ ಜನರ ತೆರಿಗೆಯ ಹಣದ ಸಂಪೂರ್ಣ ಹಕ್ಕು ಪ್ರಧಾನಿ ಮೋದಿಯದ್ದು. ರಾಜ್ಯದ ಜನರಿಗಾಗಿ ಅದನ್ನು ಕೇಳುವುದು ತಪ್ಪು. ಬೇಕಾದರೆ ಅವರು ರಾಹುಲ್‌ಗಾಂಧಿಯನ್ನು ಕೇಳಲಿ. ಒಂದು ವೇಳೆ ಗ್ಯಾರಂಟಿಗಳನ್ನು ಈಡೇರಿಸಿದರೆ ಮೋದಿಯವರು ಕೇಂದ್ರದಲ್ಲಿ ಇದ್ದುದರಿಂದ ಗ್ಯಾರಂಟಿಗಳನ್ನು ಈಡೇರಿಸಿದರು ಎಂದು ವಾಟ್ಸಪ್ ಮೂಲಕ ಪ್ರಚಾರ ಮಾಡಿ ಮೋದಿಯವರ ಹೆಸರಲ್ಲಿ ಲೋಕಸಭಾ ಚುನಾವಣೆಗೆ ಹೊರಡುತ್ತೇವೆ....'' ಎನ್ನುತ್ತಾ ಹಲ್ಲುಕಿರಿದರು. 

chelayya@gmail.com

Similar News