ಲೋಕಸಭಾ ಚುನಾವಣೆಯ ಹೊತ್ತಿಗೆ ಪರಶುರಾಮ ಮತ್ತೆ ಬರುತ್ತಾನೆ!

Update: 2023-10-22 06:35 GMT

ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್‌ನ ಪ್ರತಿಮೆ ರಾತ್ರೋ ರಾತ್ರಿ ಕಾಣೆಯಾಗುತ್ತಿದ್ದಂತೆಯೇ ನಕಲಿ ಹಿಂದುತ್ವವಾದಿ ಮುಖಂಡರೂ ರಾತ್ರೋರಾತ್ರಿ ಕಾಣೆಯಾಗಿರುವುದು ಮಾಧ್ಯಮಗಳ ಗಮನಕ್ಕೆ ಬಂತು. ಅವರಿಗೆ ಕಾಣೆಯಾಗಿರುವ ಪರಶುರಾಮನ ಬಗ್ಗೆ ವರದಿ ಮಾಡುವುದೋ, ಕಾಣೆಯಾಗಿರುವ ಹಿಂದುತ್ವವಾದಿಗಳ ಬಗ್ಗೆ ವರದಿ ಮಾಡುವುದೋ ಎನ್ನುವ ಗೊಂದಲ. ಕಂಚಿನ ಹಿಂದುತ್ವವಾದ ಒಂದೇ ರಾತ್ರಿಯಲ್ಲಿ ಫೈಬರ್ ಹಿಂದುತ್ವವಾದ ಆದ ಬಗ್ಗೆ ಅವರಿಗೆಲ್ಲ ತೀವ್ರಗೊಂದಲವಾಗಿ, ಕಾಣೆಯಾಗಿರುವ ಫೈಬರ್ ನಾಯಕರ ಪ್ರತಿಕ್ರಿಯೆಗಾಗಿ ಹುಡುಕಾಟದಲ್ಲಿ ತೊಡಗಿದರು. ಪತ್ರಕರ್ತ ಎಂಜಲು ಕಾಸಿ ಕಂಚಿನ ಕಂಠದ ಭಾಷಣಕೋರರನ್ನು ಹುಡುಕುತ್ತಾ ಸಾಗಿದ. ಕರಾವಳಿಯಲ್ಲಿ ಕೊನೆಗೂ ಗುರುಪುರ ನದಿಯಲ್ಲಿ ಯಾರೋ ಮುಳುಗಿ ‘ಗುಳು ಗುಳು’ ಸದ್ದು ಮಾಡುತ್ತಿರುವುದು ಗೊತ್ತಾಯಿತು.

‘‘ಸಾರ್...ನೀವು ಮಾಜಿ ಕನ್ನಡ ಸಂಸ್ಕೃತಿ, ಇಂಧನ ಸಚಿವರಲ್ಲವಾ?’’ ಜೋರಾಗಿ ಕೇಳಿದ.

ತಕ್ಷಣ ವ್ಯಕ್ತಿ ಮೇಲೆದ್ದು ಹಲ್ಲುಕಿರಿಯ ತೊಡಗಿತು. ‘‘ಹ್ಹಿ ಹ್ಹಿ...ಕಾಣೆಯಾಗಿದ್ದ ಕಂಚಿನ ಪರಶುರಾಮನನ್ನು ಹುಡುಕುತ್ತಿದ್ದೆ....ಕೊನೆಗೂ ನೀವು ನನ್ನನ್ನು ಹುಡುಕಿ ಬಿಟ್ರಿ....’’

‘‘ಸಾರ್...ಕೊನೆಗೆ ಪರಶುರಾಮನನ್ನೇ ಯಾಮಾರಿಸಿದ್ದೀರಿ ಎಂದು ಆರೋಪಿಸುತ್ತಿದ್ದಾರಲ್ಲ....’’ ಕಾಸಿ ಬೇಜಾರಿನಿಂದ ಕೇಳಿದ.

‘‘ನೋಡ್ರೀ....ನಾನು ಸಂಸ್ಕೃತಿ ಸಚಿವ. ಬಿಜೆಪಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನನ್ನ ಕರ್ತವ್ಯವಾಗಿತ್ತು. ಪರಶುರಾಮನ ಪ್ರತಿಮೆಯ ವಿಷಯದಲ್ಲಿ ಶೇ. 40 ಕಮಿಷನ್ ಉಳಿಸಿಕೊಂಡು ಸಂಸ್ಕೃತಿ ಸಚಿವ ಸ್ಥಾನಕ್ಕೆ ಘನತೆಯನ್ನು ನೀಡುವುದು ನನ್ನ ಕರ್ತವ್ಯವಾಗಿತ್ತು.....’’ ಕಂಚಿನ ಕಂಠದಲ್ಲಿ ಮಾಜಿ ಸಚಿವರು ಹೇಳಿದರು.

‘‘ಪರಶುರಾಮನ ಹೆಸರು ಬಳಸಿ ಚುನಾವಣೆಯ ಪ್ರಚಾರಕ್ಕೆ ಇಂಧನ ತುಂಬಿಸಿಕೊಂಡು ಇದೀಗ ಪರಶುರಾಮನೇ ಇಲ್ಲ ಎಂದರೆ ಹೇಗೆ?’’ ಮಾಜಿ ಇಂಧನ ಸಚಿವರನ್ನು ಕಾಸಿ ಕೇಳಿದ.

‘‘ಹಾಗೇನಿಲ್ಲ....ಪರಶುರಾಮ ಕೊಡಲಿ ಹಿಡಿದುಕೊಂಡು ಇಡೀ ಲೋಕಪರ್ಯಟನೆ ಮಾಡಿದವನು. ಅವನನ್ನು ಒಂದೇ ಕಡೆ ನಿಲ್ಲಿಸುವುದು ಸರಿಯಲ್ಲ ಎಂದು ಶ್ರೀಶ್ರೀಶ್ರೀಗಳು ಹೇಳಿದರು. ಆದುದರಿಂದ ಆತನನ್ನು ಲೋಕಪರ್ಯಟನೆೆಗೆ ಕಳುಹಿಸಿಕೊಡಲಾಗಿದೆ. ಅವನು ಬೇಗ ಮತ್ತೆ ಲೋಕಸಭಾ ಚುನಾವಣೆಯ ಹೊತ್ತಿಗೆ ಕಾರ್ಕಳ ತಲುಪಲಿದ್ದಾನೆ....’’ ಮಾಜಿ ಸಂಸ್ಕೃತಿ ಸಚಿವರು ಘೋಷಿಸಿದರು.

‘‘ಕ್ಷತ್ರಿಯರನ್ನೆಲ್ಲ ಕೊಂದು ಆಗಿದೆಯಲ್ಲ....ಈ ಬಾರಿ ಪರಶುರಾಮ ಶೇ. 40 ಕಮಿಷನ್ ವಿರುದ್ಧ ಕೊಡಲಿಯೆತ್ತುವ ಸಾಧ್ಯತೆಗಳಿವೆಯೆ?’’ ಕಾಸಿ ಅನುಮಾನದಿಂದ ಕೇಳಿದ.

‘‘ಹ್ಹೆ ಹ್ಹೆ... ಹಾಗೇನಿಲ್ಲ...ಪುರಾಣ ಕಾಲದಲ್ಲೂ ಈ ಕಮಿಷನ್ ಪದ್ಧತಿ ಇದ್ದೇ ಇತ್ತು. ಮಹಾಭಾರತದಲ್ಲಿ ಖಾಂಡವವನ ಕಡಿದು ಇಂದ್ರಪ್ರಸ್ಥವನ್ನು ನಿರ್ಮಾಣ ಮಾಡುವಾಗಲೂ ಕಮಿಷನ್ ವ್ಯವಹಾರ ನಡೆದಿತ್ತು ಎನ್ನುವುದನ್ನು ಎಸ್. ಎಲ್. ಬಯ್ಯಿರಪ್ಪನವರು ತಮ್ಮ ಕಾದಂಬರಿಯಲ್ಲಿ ಸಾಬೀತು ಮಾಡಿದ್ದಾರೆ....ಮುಂದಿನ ಚುನಾವಣೆಯಲ್ಲಿ ಪರಶುರಾಮನ ಕೊಡಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ....ಹೆದರಬೇಡಿ ’’ ಮಾಜಿ ಇಂಧನ ಸಚಿವರು ಭರವಸೆ ನೀಡಿದರು..

‘‘ಪರಶುರಾಮನ ಪ್ರತಿಮೆಯಲ್ಲಿ ಕಮಿಷನ್ ಹೊಡೆದ ಪರಿಣಾಮವಾಗಿಯೇ ಬಿಜೆಪಿಗೆ ಸೋಲಾಯಿತು ಎಂದು ಹೇಳುತ್ತಿದ್ದಾರಲ್ಲ....’’ ಕಾಸಿ ಕೇಳಿದ.

‘‘ಹ್ಹೆ ಹ್ಹೆ....ಬಿಜೆಪಿ ಸೋತಿರಬಹುದು. ನಾನೆಲ್ಲಿ ಸೋತಿದ್ದೇನೆ...ಇಷ್ಟಕ್ಕೂ ಹೊಡೆದ ಕಮಿಷನನ್ನು ನಾನೆಲ್ಲಿ ಇಟ್ಟುಕೊಂಡಿದ್ದೇನೆ...? ಎಲ್ಲ ಮಾಧ್ಯಮದವರಿಗೇ ಹಂಚಿದ್ದೇನಲ್ಲ? ಕಳೆದ ಚುನಾವಣೆಯಲ್ಲಿ ನಿಮ್ಮ ಕಿಸೆಗೆ ತುರುಕಿದ ಕವರ್ ಉಂಟಲ್ಲ...ಅದೆಲ್ಲ ಪರಶುರಾಮನ ಕಮಿಷನ್ ದುಡ್ಡೇ....’’ ಎಂದವರೇ ಇಂಧನ ಸಚಿವರು ಮತ್ತೆ ಗುರುಪುರ ನದಿಯಲ್ಲಿ ಮುಳುಗಿದರು. ಫೈಬರ್ ಪರಶುರಾಮನ ಕೊಡಲಿ ತನ್ನ ಬುಡಕ್ಕೆ ಬರುತ್ತಿದೆ ಎಂದು ಗೊತ್ತಾದದ್ದೇ ಕಾಸಿ ಬಾಯಿ ಮುಚ್ಚಿ ಅಲ್ಲಿಂದ ಕಚೇರಿ ಕಡೆಗೆ ದೌಡಾಯಿಸಿದ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News