ಪಾಸ್ ಕೊಟ್ಟಿರುವುದು ಬೆಳಗಾವಿ ಅಧಿವೇಶನಕ್ಕಾ?

Update: 2023-12-18 06:24 GMT
Editor : Safwan | Byline : *ಚೇಳಯ್ಯ

ಪ್ರಲಾಪ ತಿಮ್ಮ ಕಾಡಿನ ತನ್ನ ಬಿಲದಲ್ಲಿ ಬಚ್ಚಿಟ್ಟುಕೊಂಡಿರಲಾಗಿ, ಪತ್ರಕರ್ತ ಎಂಜಲು ಕಾಸಿ ಕೊನೆಗೂ ವಾಸನೆ ಹಿಡಿದು ಕೊನೆಗೂ ಆತನ ಠಾವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ. ಎಂಜಲು ಕಾಸಿ ಬಿಲದ ಬಾಗಿಲು ತಟ್ಟಿ ‘‘ಸಾರ್ ನಾನು....ಬನ್ನಿ ಸಾರ್...ಒಂದು ಇಂಟರ್‌ವ್ಯೆ ಮಾಡ್ಲಿಕ್ಕೆ ಇತ್ತು....’’ ಎಂದ.

ಒಳಗಡೆಯಿಂದ ಯಾವ ಸದ್ದೂ ಇಲ್ಲ. ಕಾಸಿಗೆ ಚಿಂತೆಯಾಯಿತು. ‘‘ಸಾರ್...ಹೊರಗೆ ಬನ್ನಿ. ನನಗೆ ಸಂಸತ್‌ನ ಪಾಸ್ ಬೇಕಾಗಿಲ್ಲ....ಸಂಸತ್ ಮೇಲೆ ನಡೆದ ದಾಳಿಯ ಬಗ್ಗೆ ನಿಮ್ಮ ಖಂಡನೆ ಬೇಕಾಗಿತ್ತು ....ಅಷ್ಟೇ...’’ ಮತ್ತೆ ಕೂಗಿದ.

ಒಳಗಿನಿಂದ ಯಾವ ಉತ್ತರವೂ ಇಲ್ಲ. ‘‘ಸಾರ್...ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುತ್ತಾರಂತೆ ...ಹೊರಗೆ ಬನ್ನಿ ಸಾರ್...’’ ಕಾಸಿ ಹೊಸ ತಂತ್ರ ಹೂಡಿದ. ಈಗ ಪ್ರಲಾಪ ತಿಮ್ಮ ಬಿಲದೊಳಗಿಂದಲೇ ‘ಮಿಯಾಂವ್’ ಎಂದು ಘರ್ಜಿಸಿದ.

‘‘ಸಾರ್...ಸಂಸತ್ತಿಗೆ ದಾಳಿ ಮಾಡಿರುವುದು ನಿಮ್ಮ ಅಭಿಮಾನಿಗಳಂತೆ ಹೌದಾ? ಮುಂದಿನ ಲೋಕಸಭೆಯಲ್ಲಿ ನಿಮಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ನೀವು ದಿಲ್ಲಿಗೆ ಕಳುಹಿಸಿರುವುದು ಎಂದು ಕಾಂಗ್ರೆಸ್‌ನೋರು ಆಡಿಕೊಳ್ತಾ ಇದ್ದಾರೆ....’’ ಕಾಸಿ ಕೇಳಿದ.

‘‘ರೀ....ನಮ್ಮ ವರಿಷ್ಠರು ಹೇಳಿದರು ಎಂದು ನಾನು ಪಾಸ್ ನೀಡಿರುವುದು ಕಣ್ರೀ....’’ ಬಿಲದೊಳಗಿಂದಲೇ ತಿಮ್ಮ ಪ್ರಲಾಪಿಸತೊಡಗಿದ.

‘‘ಅದು ಹೇಗೆ ಸಾರ್?’’

‘‘ಉಗ್ರ ಪ್ರತಿಭಟನೆ ನಡೆಯಬೇಕು, ಲಾಠಿ ಚಾರ್ಜ್ ಆಗಬೇಕು, ಕರ್ಫ್ಯೂ ವಿಧಿಸಬೇಕು...ಎಂದೆಲ್ಲ ಅಮಿತ್ ಶಾ ಅವರು ನನಗೆ ಮಾರ್ಗದರ್ಶನ ಮಾಡಿದ್ದರು. ಆದುದರಿಂದ ಕೆಲವು ಹುಡುಗರಿಗೆ ಉಗ್ರ ಪ್ರತಿಭಟನೆ ಮಾಡಲು ತರಬೇತಿ ಕೊಟ್ಟೆ. ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ಮಾಡಲು ಅವರನ್ನು ಕಳುಹಿಸಿಕೊಟ್ಟೆ. ಆದರೆ ಅವರು ಬೆಳಗಾವಿಗೆ ಹೋಗದೆ, ಸೀದಾ ದಿಲ್ಲಿಗೆ ಹೋಗಿ ಬಿಟ್ರು. ಇದು ನನ್ನ ತಪ್ಪಾ....?’’

‘‘ಅಂದರೆ ನೀವು ಪಾಸ್ ಕೊಟ್ಟಿರುವುದು ಬೆಳಗಾವಿ ಅಧಿವೇಶನಕ್ಕಾ?’’ ಕಾಸಿ ಬೆಚ್ಚಿ ಬಿದ್ದು ಕೇಳಿದ.

‘‘ಹೂಂ ಕಣ್ರೀ....ಅಧಿವೇಶನಕ್ಕೆ ಹೋಗಿ ದಾಂಧಲೆ ಮಾಡ್ತೀವಿ ಅಂದ್ರು. ಸರಿ ಮಕ್ಳಾ ಹೋಗಿ....ದಾಂಧಲೆ ಮಾಡಿ. ಅಧಿವೇಶನವನ್ನು ಕೆಡಿಸಿ ಮೋದಿ, ಅಮಿತ್ ಶಾ ಅವರ ಹೆಸರನ್ನು ವಿಶ್ವಮಾನ್ಯಗೊಳಿಸಿ ಎಂದು ಆಶೀರ್ವಾದ ಮಾಡಿ ಕಳುಹಿಸಿದೆ. ಆದರೆ ಅವರು ದಿಲ್ಲಿಗೆ ಹೋಗ್ತಾರೆ ಎಂದು ನನಗೆ ಗೊತ್ತಿರಲಿಲ್ಲ....’’ ಎಂದು ತಿಮ್ಮ ಬಿಲದೊಳಗೇ ಬಿಕ್ಕಿ ಬಿಕ್ಕಿ ಅಳತೊಡಗಿದ.

‘‘ನಿರುದ್ಯೋಗ ಕಾರಣಕ್ಕಾಗಿ ಅವರು ದಾಳಿ ಮಾಡಿರುವುದಂತೆ ಹೌದಾ?’’ ಕಾಸಿ ಕಂಗಾಲಾಗಿ ಕೇಳಿದ.

‘‘ನಿರುದ್ಯೋಗ ಹೆಚ್ಚಳವಾದುದಕ್ಕೆ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಳಿ ಮಾಡಬೇಕಾಗಿತ್ತು. ನೆಹರೂ ಅವರೇ ನಿರುದ್ಯೋಗಕ್ಕೆ ಕಾರಣ ಎಂದು ಈಗಾಗಲೇ ಘೋಷಿಸಿದ್ದಾರೆ. ವಿಶ್ವಸಂಸ್ಥೆ ಅದನ್ನು ಮಾನ್ಯ ಮಾಡಿದೆ’’

‘‘ಮುಂದೇನು ಮಾಡಬೇಕು ಎಂದಿದ್ದೀರಿ ಸಾರ್?’’

‘‘ಸಂಸತ್ ದಾಳಿಯನ್ನೇ ಸಾಧನೆಯನ್ನಾಗಿಸಿ ಕೊಂಡು ಬಿಜೆಪಿಯಿಂದ ಟಿಕೆಟ್ ಕೇಳಬೇಕೆಂದಿದ್ದೇನೆ’’

‘‘ಅದು ಹೇಗೆ ಸಾರ್?’’

‘‘ಮಾಲೆಗಾಂವ್ ಸ್ಫೋಟ ಆರೋಪದಲ್ಲಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಟಿಕೆಟ್ ಕೊಡಲಿಲ್ಲವೆ? ಹಾಗೆಯೇ ಸಂಸತ್ ದಾಳಿಕೋರರಿಗೆ ಉಚಿತ ಪಾಸ್ ಕೊಟ್ಟು ಯಶಸ್ವೀ ದಾಳಿ ನಡೆಸಿ ನೂತನ ಸಂಸತ್‌ನ ಘನತೆಯನ್ನು ಹೆಚ್ಚಿಸಿದ್ದಕ್ಕಾಗಿ ನನಗೂ ಟಿಕೆಟ್ ಕೊಡಬೇಕು....’’

‘‘ಆದರೆ ಅವರು ಸಿಡಿಸಿದ ಹೊಗೆಯಲ್ಲಿ ಬೆಂಕಿಯೇ ಇರಲಿಲ್ಲವಲ್ಲ?’’ ಕಾಸಿ ಕೇಳಿದ

‘‘ಅದು ಪ್ರಧಾನಿ ಮೋದಿಯವರ ಭಾಷಣದ ಥರ. ಬರೀ ಬಣ್ಣದ ಹೊಗೆ ಮಾತ್ರ. ಬೆಂಕಿ ಇರಲ್ಲ....ಯುವಕರು ಅದನ್ನೇ ಸ್ಫೂರ್ತಿಯಾಗಿಸಿಕೊಂಡು ಸಂಸತ್‌ನಲ್ಲಿ ಹೊಗೆ ಬಿಟ್ಟಿದ್ದಾರೆ ಅಷ್ಟೇ....’’ ತಿಮ್ಮ ಹ್ಹಿಹ್ಹಿಹ್ಹಿ ಎಂದು ನಕ್ಕ.

‘‘ಲೋಕಸಭಾ ಟಿಕೆಟ್ ಸಿಕ್ಕಿದರೆ ಕ್ಷೇತ್ರದ ಜನರಿಗೆ ಏನು ಭರವಸೆ ಕೊಡುತ್ತೀರಿ ಸಾರ್?’’

‘‘ಮನೆಗೆ ಒಂದರ ಹಾಗೆ ಸಂಸತ್‌ಗೆ ಉಚಿತ ಪಾಸ್ ಕೊಡುತ್ತೇನೆ. ಇದುವೇ ಮುಂದಿನ ಚುನಾವಣೆಯಲ್ಲಿ ನನ್ನ ಪ್ರಣಾಳಿಕೆಯ ಗ್ಯಾರಂಟಿ....’’

‘‘ಟಿಕೆಟ್ ಸಿಗದೇ ಇದ್ದರೆ....’’

‘‘ಟಿಪ್ಪು ಸುಲ್ತಾನ್ ಅವರೇ ನನ್ನನ್ನು ಕಾಪಾಡಬೇಕು...’’ ಬಿಲದೊಳಗಿಂದ ತಿಮ್ಮ ಸಿಂಬಳ ಒರೆಸುತ್ತಾ ಹೇಳಿದ.

‘‘ಅದು ಹೇಗೆ?’’

‘‘ಅದೇರಿ....ಟಿಪ್ಪು ಸುಲ್ತಾನ್ ಹೆಸರನ್ನೇನಾದರೂ ವಿಮಾನ ನಿಲ್ದಾಣಕ್ಕೋ, ರೈಲು ನಿಲ್ದಾಣಕ್ಕೋ ಇಟ್ಟರೆ ಅದರ ವಿರುದ್ಧ ವೀರಾವೇಶದಿಂದ ಹೋರಾಡುತ್ತಾ ನಾನು ಹುತಾತ್ಮನಾಗಬೇಕು ಎಂದಿದ್ದೇನೆ....’’ ತಿಮ್ಮ ಘೋಷಿಸಿದ.

‘‘ಆದರೆ ವಿಮಾನನಿಲ್ದಾಣಕ್ಕೆ ನಾಲ್ವಡಿ ಕೃಷ್ಣ ರಾಜ ಒಡೆಯರ ಹೆಸರು ಇಡುತ್ತಾರಂತೆ....’’ ಕಾಸಿ ತಿಳಿಸಿದ.

‘‘ಇದೆಂತಹ ಅನ್ಯಾಯ....ನನ್ನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಮಾಡಿರುವ ಸಂಚು ಇದು....’’ ತಿಮ್ಮ ಮತ್ತೆ ಗೋಳಾಡತೊಡಗಿದ.

‘‘ಸಾರ್...ಈ ಬಿಲದಲ್ಲಿ ಎಲ್ಲಿಯವರೆಗೆ ಬಚ್ಚಿಟ್ಟುಕೊಳ್ಳುತ್ತೀರಿ...ಜನರು ಹೊಗೆ ಬಾಂಬ್ ಹಿಡಿದುಕೊಂಡು ಬರುತ್ತಿದ್ದಾರೆ. ಹೋಗಿ ಕೇಶವ ಕೃಪಾದ ಬಿಲದೊಳಗೆ ಭದ್ರವಾಗಿ ಅಡಗಿಕೊಳ್ಳಿ ...’’ ಎಂದವನೇ ಕಾಸಿ ಅಲ್ಲಿಂದ ಓಡ ತೊಡಗಿದ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - *ಚೇಳಯ್ಯ

contributor

Similar News