ಈ ಹಸುವನ್ನು ಎಲ್ಲೋ ನೋಡಿದಂತಿದೆಯಲ್ಲ...!

ಬುಡಬುಡಿಕೆ

Update: 2023-04-30 03:23 GMT

‘‘ಸಾರ್....ಲಾರಿಯೊಂದರಲ್ಲಿ ದನ ಸಾಗಾಟ ಮಾಡುತ್ತಾ ಇದ್ದಾರೆ..... ನಾವು ಅವರನ್ನು ಹಿಂಬಾಲಿಸ್ತಾ ಇದ್ದೇವೆ....’’ ದೂರದ ಮಂಡ್ಯ ಕಡೆಯಿಂದ ಫೋನ್ ಬಂದದ್ದೇ ನಾಗಪುರದವರು ಸಂತೋಷಗೊಂಡರು.

‘‘ಸದಾ ವತ್ಸಲೇ.... ಯಾವುದಕ್ಕೂ ಆ ಲಾರಿ ನಮ್ಮದೋ ಅವರದೋ ಎನ್ನುವುದನ್ನು ಒಮ್ಮೆ ವಿಚಾರಣೆ ಮಾಡಿ....’’ ನಾಗಪುರ ಗಿರಾಕಿ ಹೇಳಿತು.

‘‘ಅದೇ ಸಾರ್....ಲಾರಿಯಲ್ಲಿರುವುದು ಗೋವು  ಸಾರ್....ಅದೂ ಭರ್ಜರಿ ಹಾಲು ಕೊಡುವ ಗೋವುಗಳು ಸಾರ್....’’ ಮಂಡ್ಯದ ಕಡೆಯಿಂದ ಕೇರೆಹಾವೊಂದು ಬುಸುಗುಟ್ಟಿತು.

‘‘ಲಾರಿಯಲ್ಲಿರುವುದು ಗೋವು ಆಗಿರಬಹುದು....ಆದರೆ ಗೋಶಾಲೆಗಳಿಂದ ವಿದೇಶಗಳಿಗೆ ನಮ್ಮವರು ರಫ್ತು ಮಾಡುವ ಗೋವುಗಳೋ ಎನ್ನುವುದನ್ನು ಒಮ್ಮೆ ವಿಚಾರಿಸಿ. ಹಲವು ಕೋಟಿ ವ್ಯವಹಾರದ ಮಾಲು ಅದು. ಗಡಿಬಿಡಿಯಲ್ಲಿ ನಮ್ಮ ಮಾಲುಗಳ ಸಾಗಾಟಕ್ಕೆ ಸಮಸ್ಯೆಯಾಗಬಾರದು...ಚುನಾವಣೆಗೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು’’

‘‘ಇಲ್ಲಾ ಸಾರ್....ಲಾರಿ ಡ್ರೈವರ್, ಕ್ಲೀನರ್ ಇಬ್ಬರೂ ಸಾಬಿಗಳೇ....ಇಷ್ಟು ಗಡ್ಡ  ಇಟ್ಟಿದ್ದಾರೆ ಬೇರೆ....’’ ಮಂಡ್ಯದ ಕೇರೆ ಹಾವು ನಾಗಪುರಕ್ಕೆ ಸ್ಪಷ್ಟೀಕರಣ ನೀಡಿತು.

‘‘ಹಾಗಾದರೆ...ಬಿಡಬೇಡಿ....ಗೋಮಾತೆಯ ಅಕ್ರಮ ಸಾಗಾಟವನ್ನು ಯಾವುದೇ ಬೆಲೆಕೊಟ್ಟು ತಡೆಯಲೇ ಬೇಕು....’’ ನಾಗಪುರ ಜೋರಾಗಿ ಬುಸುಗುಟ್ಟಿ ಹೇಳಿತು. ಅದೇನೇ ಪ್ರಯತ್ನ ಮಾಡಿದರೂ ಚುನಾವಣೆ ಕಾವು ಪಡೆಯದೇ ಇರುವುದರಿಂದ ನಿರಾಶೆಗೊಂಡು ಬಿಲದೊಳಗೆ ಮಲಗಿದ್ದ ನಾಗಪುರ ಒಮ್ಮೆಲೆ ತಲೆಯೆತ್ತಿ ಜಡೆ ಬಿಚ್ಚಿತು. ನೇರವಾಗಿ ಗುಮ್ಮಾಯಿಗೆ ಫೋನಾಯಿಸಿತು ‘‘ನೋಡಿ....ಮಂಡ್ಯದ ಕಡೆ ಲಾರಿಯಲ್ಲಿ ಒಂದಿಷ್ಟು ಮತಗಳು ಅಕ್ರಮವಾಗಿ ಸಾಗಾಟವಾಗುತ್ತಾ ಇವೆ....ನಮ್ಮ ಹುಡುಗರು ಅದನ್ನು ತಡೆಯಲು ಮುಂದಾಗಿದ್ದಾರೆ. ತಕ್ಷಣ ಕಾನೂನು ಸುವ್ಯವಸ್ಥೆಯನ್ನೆಲ್ಲ  ಐಸಿಯು ಒಳಗೆ ಮಲಗಿಸಿ ಬಿಡಿ....’’

ಗುಮ್ಮಾಯಿಯವರು ರೋಮಾಂಚಗೊಂಡರು. ‘‘ಸಾರ್...ಮತಗಳು ಎಷ್ಟಿರಬಹುದು ಸಾರ್?’’

‘‘ಒಂದು ಹೆಣಕ್ಕೆ  ೧೦ ಸಾವಿರ ಮತಗಳು ಎಂದು ಹಿಡಿದರೂ ಬಹಳಷ್ಟಾಯಿತು. ಡ್ರೈವರ್-ಕ್ಲೀನರ್ ಎರಡೂ ಗಡ್ಡಧಾರಿಗಳಂತೆ....’’ ನಾಗಪುರ ಮಾಹಿತಿ ನೀಡಿತು.

‘‘ಸರಿ ಸಾರ್... ಸರಿ ಸಾರ್.... ಬೀದಿ ಕೇರೆ ಹಾವುಗಳನ್ನೆಲ್ಲ ಪುಂಗಿ ಊದಿ ಎಬ್ಬಿಸೋಣ ಸಾರ್....ಲಾರಿ ಕರ್ನಾಟಕ ಗಡಿ ದಾಟುವ ಮೊದಲೇ ಎಲ್ಲ ವ್ಯವಸ್ಥೆಯಾಗುತ್ತದೆ ಸಾರ್....’’ ಎಂದ ಗುಮ್ಮಾಯಿ ತಕ್ಷಣ....ಗೃಹ ಖಾತೆಗೆ ಪೋನಾಯಿಸಿ  ‘‘ನೋಡಿ...ತಕ್ಷಣ ಕಾನೂನು ಸುವ್ಯವಸ್ಥೆಯ ಬಗ್ಗೆ ಗಮನ ಹರಿಸಿ....’’ ಸೂಚನೆ ನೀಡಿದರು.

‘‘ಏನಾಯಿತು ಸಾರ್...ಪಿಎಫ್‌ಐ...ನಕ್ಸಲ್...’’ ಉರಗ ಅಜ್ಞಾನೇಂದ್ರರು ನಿದ್ದೆಯಲ್ಲೇ ಗೊಣಗಿದರು.

‘‘ಹೇ...ಅದೆಲ್ಲ ಅಲ್ಲ....ಗೋಮಾತೆಯ ಸಾಗಾಟ ನಡೆಯುತ್ತಿದೆ....’’ ಗುಮ್ಮಾಯಿ ಹೇಳಿದರು.

‘‘ವಿದೇಶಗಳಿಗೆ ಸಾಗಿಸುತ್ತಿದ್ದಾರಾ ಸಾರ್...ಲಾರಿಗೆ ಭದ್ರತೆ ಬೇಕಾ ಸಾರ್....?’’ ಉರಗರು ಕೇಳಿದರು.

‘‘ಹೇ....ಇವರು ಅವರಲ್ಲ.....ಡ್ರೈವರ್, ಕ್ಲೀನರ್ ಗಡ್ಡಧಾರಿಗಳಂತೆ...ಬೀದಿಗೆ ಒಂದಿಷ್ಟು ಕೇರೆಹಾವುಗಳನ್ನು ಬಿಡುತ್ತಿದ್ದೇವೆ....ಗೃಹ ಇಲಾಖೆಯಿಂದ ಒಂದಿಷ್ಟು ನಾಗರಹಾವುಗಳು ಇವರಿಗೆ ರಕ್ಷಣೆಗೆ ನಿಂತರೆ ಸರಿ....’’ ಗುಮ್ಮಾಯಿ ಹೇಳಿದರು.

‘‘ಸಾರ್...ಹೇಗೂ ಚುನಾವಣೆ. ನಾವು ಏನು ಹೇಳಿದರೂ ಜನರು ಓಟು ಹಾಕುವ ಹಾಗೆ ಕಾಣುತ್ತಿಲ್ಲ. ಈ ಲಾರಿಯನ್ನು ತಡೆದು ಗೋಮಾತೆಯನ್ನು ರಕ್ಷಿಸಿದ ಕ್ರೆಡಿಟನ್ನು ನಾವೇ ತೆಗೆದುಕೊಳ್ಳೋಣ.....ನೀವು ನಿಮ್ಮ ಮನೆಯಲ್ಲಿರುವ ಹಳೆಯ ಬ್ಯಾಟ್ ಹಿಡಿದುಕೊಂಡು ಬನ್ನಿ. ನಾನು ಮನೆಯಲ್ಲಿರುವ ಇಲೆಕ್ಟ್ರಿಕ್ ಶಾಕ್ ಕೊಡುವ ಮಶಿನ್ ಹಿಡಿದುಕೊಂಡು ಬರುತ್ತೇನೆ....’’ಉರಗರು ಸಲಹೆ ನೀಡಿದರು. ಗುಮ್ಮಾಯಿ ರೋಮಾಂಚನಗೊಂಡು ಮನೆಯ ಮೂಲೆಯಲ್ಲಿರುವ ಬ್ಯಾಟನ್ನು ಕೈಗೆತ್ತಿಕೊಂಡು ಹೊರಟೇ ಬಿಟ್ಟರು.

ಗುಮ್ಮಾಯಿ-ಉರಗ ಅಜ್ಞಾನೇಂದ್ರರ ನೇತೃತ್ವದಲ್ಲಿ ಕೊನೆಗೂ ಭೀಕರ ಕಾರ್ಯಾಚರಣೆ ಆರಂಭವಾಯಿತು. ಮರುದಿನ ಇಡೀ ರಾಜ್ಯದಲ್ಲಿ ‘ಗೋಮಾತೆಯ ರಕ್ಷಣೆ’ಯ ವಿಷಯ ಚುನಾವಣಾ ವಿಷಯವಾಗಿ ಪರಿವರ್ತನೆಯಾಗಬೇಕು....ಎನ್ನುವ ನಿಟ್ಟಿನಲ್ಲಿ ಎಲ್ಲ ಟಿವಿ ಚಾನೆಲ್‌ಗಳು ಅವರನ್ನು ಹಿಂಬಾಲಿಸಿದವು. ಪೊಲೀಸರೆಲ್ಲ ತಮ್ಮ ಖಾಕಿ ಕಳಚಿ ಸಂಘಪರಿವಾರ ವೇಷಧಾರಿಗಳಾಗಿ, ಕೈಯಲ್ಲಿ  ತ್ರಿಶೂಲ, ದೊಣ್ಣೆಗಳನ್ನು ಕೈಗೆತ್ತಿಕೊಂಡರು.

ಲಾರಿಯನ್ನು ಅಡ್ಡ ಹಾಕಲಾಯಿತು.

ಉರಗರು ನೇರವಾಗಿ ಲಾರಿಯ ಹಿಂದಿನ ಬಾಗಿಲನ್ನು ತೆರೆದು ಗೋಮಾತೆಯ ರಕ್ಷಣೆಗೆ ಮುಂದಾದರು. ಬಾಗಿಲು ತೆರೆದದ್ದೇ ಗೋಮಾತೆಯೊಂದು  ಲಾರಿಯೊಳಗೆ ಕಂಗಾಲಾಗಿ ನಿಂತಿರುವುದು ಕಂಡಿತು. ಉರಗ ಅಜ್ಞಾನೇಂದ್ರರಿಗೆ ಈ ಗೋಮಾತೆಯನ್ನು ಎಲ್ಲೋ ನೋಡಿದ ನೆನಪು. ‘‘ಗುಮ್ಮಾಯಿಯವರೇ ಒಮ್ಮೆ ಬನ್ನಿ ಇಲ್ಲಿ.....ಇದು ನಮ್ಮ ಮನೆಯ ಹಟ್ಟಿಯಲ್ಲಿದ್ದ ಗೋಮಾತೆಯಲ್ಲವೆ?’’ ಎಂದು ಕರೆದರು.

ಗುಮ್ಮಾಯಿ ಧಾವಿಸಿ ಬಂದು ನೋಡಿದರು. ಹೌದು, ಎಲ್ಲೋ ನೋಡಿದಂತಿದೆ. ‘‘ಸಾರ್...ಇದು ಕರ್ನಾಟಕದ ಹೆಮ್ಮೆಯ  ‘ನಂದಿನಿ’ ಹಸು ಸಾರ್....’’ ಯಾರೋ ಗುರುತು ಹಿಡಿದರು.

ಗುಮ್ಮಾಯಿ-ಉರಗ ಇಬ್ಬರೂ ಬೆಚ್ಚಿ ಬಿದ್ದು ಡ್ರೈವಿಂಗ್ ಸೀಟಿನ ಕಡೆಗೆ ಧಾವಿಸಿದರು.

ಅಲ್ಲಿ ಗಡ್ಡಧಾರಿಯೊಬ್ಬ ಮಾಸ್ಕ್ ಹಾಕಿ ಕುಳಿತಿದ್ದರೆ, ಕ್ಲೀನರ್ ಕೂಡ ಮುಖ ಮುಚ್ಚಿಕೊಂಡಿದ್ದ.  ಗುಮ್ಮಾಯಿಯನ್ನು ನೋಡಿದ್ದೇ ಚಾಲಕ ‘‘ಗುಮ್ಮಾಯಿಜೀ...ಮೈ ಹೂಂ.... ನರೀಂದ್ರ ಜಿ.....’’ ಎಂದು ಮಾಸ್ಕ್ ತೆಗೆದು ಹಲ್ಲು ಕಿರಿಯತೊಡಗಿದರು. ಅತ್ತ ಕ್ಲೀನರ್ ಕೂಡ ತಮ್ಮ ಮುಖವನ್ನು ತೋರಿಸಿದರು. ನೋಡಿದರೆ ಅಮಿಥ್ಯಾ ಶಾ. ಗುಮ್ಮಾಯಿಗೆ ಎಲ್ಲವೂ ಅರ್ಥವಾಯಿತು.

‘‘ಗುಜರಾತಿನ ಅಮುಲ್ ಎತ್ತಿಗೆ ನಿಮ್ಮ ಕರ್ನಾಟಕದ ನಂದಿನಿ ಹಸುವನ್ನು ಮಿಲನ ಮಾಡಿಸಲೆಂದು ಕೊಂಡೊಯ್ಯುತ್ತಿದ್ದೆವು. ಅಮುಲ್-ನಂದಿನಿಯನ್ನು ಒಟ್ಟು ಸೇರಿಸಿ ಕರ್ನಾಟಕವನ್ನು ಉದ್ಧರಿಸುವುದು ನಮ್ಮ ಗುರಿ....’’ ಎಂದು ಹೇಳಿ ‘‘ಹ್ಹಿ ಹ್ಹಿ ಹ್ಹಿ’’ ನಕ್ಕರು.

ಭೂಮಿ ಬಾಯಿ ಬಿಟ್ಟು ನುಂಗಬಾರದೆ ಎಂದೆನಿಸಿತು ಗುಮ್ಮಾಯಿ ಅವರಿಗೆ. ‘‘ಸಾರಿ ಮೋದಿಜಿ....ನೀವು ಒಂದು ಮಾತು ಹೇಳಿದ್ದರೆ ನಾವೇ ನಂದಿನಿಯನ್ನು ಮಾಂಸ ಮಾಡಿ ಗುಜರಾತ್‌ಗೆ ರಫ್ತು ಮಾಡುತ್ತಿದ್ದೆವಲ್ಲ....ನೀವು ತೆಗೆದುಕೊಂಡು ಹೋಗಿ...ನಾವು ಪೂರ್ಣ ಭದ್ರತೆ ನೀಡುತ್ತೇವೆ....’’

ಅಷ್ಟರಲ್ಲಿ....‘‘ಜೈ ಕರ್ನಾಟಕ ಮಾತೆ....ಯಾರದು ನಂದಿನಿ ಕದ್ದೊಯ್ಯುತ್ತಿರುವುದು...ಹಿಡಿಯಿರಿ, ಓಡಿಸಿರಿ....’’ ಎನ್ನುವ ಗದ್ದಲ ಕೇಳಿತು.

‘‘ಸಾರ್...ಕನ್ನಡ ಪರ ಹೋರಾಟಗಾರರು ...ಓಡಿ ಸಾರ್...’’ ಎಂದವರೇ ಉರಗ ಅಜ್ಞಾನೇಂದ್ರರು ಕಾಲಿಗೆ ಬುದ್ಧಿ ಹೇಳಿದರು.

ನಂದಿನಿಯನ್ನು ಕೆಳಗಿಳಿಸಿದ್ದೇ ಲಾರಿ ಗುಜರಾತ್ ಕಡೆ ವೇಗವಾಗಿ ಓಡತೊಡಗಿತು. ಗುಮ್ಮಾಯಿ ಮುಖವನ್ನು ಮರೆ ಮಾಚಿ,  ಕನ್ನಡ ಪರ ಹೋರಾಟಗಾರರ ಗುಂಪು ಸೇರಿ ‘‘ನಂದಿನಿಗೆ ಜಯವಾಗಲಿ’’ ಎಂದು ಕೂಗಿದರು.

Similar News