×
Ad

ಸಾಂಸ್ಕೃತಿಕ ವಿಸ್ಮತಿಯು ಬಹುದೊಡ್ಡ ವಿಷಾದವಾಗಿ...

Update: 2022-11-06 01:15 IST

ಇವತ್ತಿನ ರಾಜಕಾರಣಕ್ಕೆ ಸಾಂಸ್ಕೃತಿಕ ಮುಖವಿಲ್ಲ; ಸಾಂಸ್ಕೃತಿಕ ಸ್ಥೈರ್ಯವೂ ಇಲ್ಲ. ಓದಿನಿಂದ, ಅಕ್ಷರಪ್ರೀತಿಯಿಂದ ದೂರವುಳಿದ ರಾಜಕಾರಣವು ದುಡ್ಡಿನ ಹಿಂದೆ ಬಿದ್ದಿದೆ. ಓದೆಂಬುದನ್ನು ಡಿಗ್ರಿ ಎಂಬುದಕ್ಕೆ ಸೀಮಿತವಾಗಿಸಿರುವುದೂ ಇದೇ ರಾಜಕಾರಣದೊಳಗಿನ ಶಿಕ್ಷಣ ಪದ್ಧತಿ. ಆದರೆ ಓದೆಂಬುದು ಸಾಂಸ್ಕೃತಿಕ ಮನಸ್ಸುಗಳನ್ನು ರೂಪಿಸುವ ಅಸಾಧಾರಣ ಸಂಗತಿಯೆಂಬುದು ರಾಜಕಾರಣಕ್ಕೆ ಅರಿವಿಲ್ಲ.

‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’

ಕವಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಬರುವ ಈ ಸಾಲು, ವಿಶ್ವಾಮಿತ್ರನ ಮಾತಿನಂತೆ ಹರಿಶ್ಚಂದ್ರ ತನ್ನ ಸಾಮ್ರಾಜ್ಯವನ್ನು ಬಿಟ್ಟು ಹೊರಡುವ ಸನ್ನಿವೇಶವನ್ನು ಕುರಿತದ್ದು. ತಮ್ಮ ದೊರೆ ಹೊರಟುಹೋಗುತ್ತಿರುವ ಆ ಹೊತ್ತಲ್ಲಿ ಇಡೀ ಅಯೋಧ್ಯೆಯ ಪ್ರಜೆಗಳು ನೋವಿನಿಂದ ಹಾಗೆ ಉದ್ಗಾರ ತೆಗೆಯುತ್ತಾರೆ.

ಆಧುನಿಕ ಭಾರತದ ರಾಜಕಾರಣದ ಸಂದರ್ಭದಲ್ಲಿ ಕೂಡ ನಾವು ಇಂತಹದೇ ಒಂದು ಸಂದರ್ಭವನ್ನು ಕಾಣುವುದು ಗಾಂಧಿ ಹತ್ಯೆಯ ಹೊತ್ತಿನಲ್ಲಿ. ಗಾಂಧಿಯ ಅಂತಿಮ ಯಾತ್ರೆಯ ಮೆರವಣಿಗೆಯ ಬಗ್ಗೆ ಬರೆಯುತ್ತ ರಾಮಮನೋಹರ ಲೋಹಿಯಾ, ಅದರ ಘೋರವೆಂಥದು ಎಂಬುದನ್ನು ಚಿತ್ರಿಸುತ್ತಾರೆ.

ಉತ್ತರಾಧಿಕಾರಿಗಳ ಪೋಸು ಕೊಟ್ಟು ಗಾಂಧಿಯ ಪಾರ್ಥಿವ ಶರೀರವನ್ನು ಹೊತ್ತಿದ್ದ ಫಿರಂಗಿ ಗಾಡಿಯ ಮೇಲೆ ಕೂತಿದ್ದವರೂ ಮೆರವಣಿಗೆಯಲ್ಲಿ ದಾಪುಗಾಲು ಹಾಕಿ ನಡೆಯುತ್ತಿದ್ದವರೂ ಗಾಂಧಿಯನ್ನು ಅವರು ಬದುಕಿದ್ದಾಗ ಆರಾಧಿಸಿದವರೇ ಆಗಿದ್ದರು ಎಂದು ಲೋಹಿಯಾ ಹೇಳುವುದನ್ನು, ಗಾಂಧಿಗೆ ಗುಂಡಿಕ್ಕುವ ಮೊದಲು ಅವರಿಗೆ ಗೋಡ್ಸೆ ಕೈಮುಗಿದಿದ್ದ ಎಂಬುದರೊಂದಿಗೆ ಹೋಲಿಸಿ ನೋಡಬೇಕು. ಲೋಹಿಯಾ ಹೇಳುವಂತೆ ಗಾಂಧಿ ಹತ್ಯೆ ಅತ್ಯಂತ ಬರ್ಬರ ಕ್ರಿಯೆಯಾದರೆ, ಗಾಂಧಿಯ ಪಾರ್ಥಿವ ಶರೀರವನ್ನು ಫಿರಂಗಿ ಗಾಡಿಯ ಮೇಲೆ ಇಟ್ಟದ್ದು ವಿಕೃತಿ.

ಗಾಂಧಿ ಹತ್ಯೆಯ ಘಳಿಗೆಯಲ್ಲಿಯೇ ಈ ದೇಶವನ್ನು ಸಾಂಸ್ಕೃತಿಕ ವಿಸ್ಮತಿಯು ಆವರಿಸಿಬಿಟ್ಟಿತು ಎಂದೆನ್ನಿಸುತ್ತದೆ. ಗಾಂಧಿ ಅಂತಃಸತ್ವವುಳ್ಳವರಾಗಿದ್ದರು. ಎಂತಹ ದಬ್ಬಾಳಿಕೆಯನ್ನೂ ಈ ಅಂತಃಸತ್ವದ ಕಾರಣದಿಂದಾಗಿಯೇ ಎದುರಿಸಿ ನಿವಾರಿಸಬಲ್ಲವರಾಗಿದ್ದ ಗಾಂಧಿ ಅಹಿಂಸೆಯ ಪ್ರತಿಪಾದಕರಾದದ್ದೂ ಅದರಿಂದಾಗಿಯೇ. ಅಂತಹ ಗಾಂಧಿಯನ್ನು ಕೊಂದದ್ದು ಬೇರೆಯದೇ ರಾಜಕಾರಣ. ಗಾಂಧಿಯನ್ನು ಕೊಂದ ರಾಜಕಾರಣವೇ ಇಂದು ಇಡೀ ದೇಶವನ್ನು ಮುಸುಕಿದೆ.

ಗಾಂಧಿಯನ್ನು ಭೌತಿಕವಾಗಿ ಮುಗಿಸಿದವರು ಮತ್ತು ಗಾಂಧಿಯನ್ನು ತಾತ್ವಿಕವಾಗಿ ಕೊಲ್ಲುತ್ತಿರುವವರು ಮಾತ್ರ ತುಂಬಿಹೋಗಿರುವ ಹೊತ್ತು ಇದು. ಅಲ್ಲಿಗೆ, ಅಂತಃಸತ್ವದ ಬೆಳಕಿನಲ್ಲಿ ದೇಶವನ್ನು ನಡೆಸಬಹುದಾಗಿದ್ದ ರಾಜಕಾರಣದ ದಿನಗಳು ಎಂದೋ ಮುಗಿದಿವೆ. ಗಾಂಧಿಯವರ ಅಂತಃಸತ್ವ, ನೆಹರೂ ಅವರ ಸೂಕ್ಷ್ಮ್ಮಜ್ಞತೆ, ಲೋಹಿಯಾರ ಸಾಂಸ್ಕೃತಿಕ ಪ್ರಜ್ಞೆ ಮತ್ತು ಅಂಬೇಡ್ಕರ್‌ರ ಸಾಮಾಜಿಕ ಕಳಕಳಿ ಇವೆಲ್ಲವುಗಳಿಂದ ದೂರವಾದ ಕೇಡಿನ ರಾಜಕಾರಣವನ್ನು ನಾವಿಂದು ನೋಡುತ್ತಿದ್ದೇವೆ.

ಚುನಾವಣೆಯ ಹೊತ್ತಿನಲ್ಲಿಯ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಅವುಗಳ ಮುಖವಾಡವನ್ನು ಕಳಚುವುದು ಮಾತ್ರವಲ್ಲ, ಅವುಗಳ ಕಳಾಹೀನ ಸ್ಥಿತಿಯನ್ನೂ ಪ್ರಜೆಗಳನ್ನು ಅಸಹಾಯಕ ಮತ್ತು ಅವಲಂಬಿ ಸ್ಥಿತಿಗೆ ತಳ್ಳುವ ತಂತ್ರಕ್ಕೆ ರಾಜಕೀಯವು ಆತುಕೊಂಡಿರುವುದನ್ನೂ ನಿಚ್ಚಳವಾಗಿ ತೋರಿಸುತ್ತದೆ.

ತಮ್ಮನ್ನು ಗೆಲ್ಲಿಸಿದರೆ ಕೊರೋನ ವೈರಸ್ ವಿರುದ್ಧದ ಲಸಿಕೆಯನ್ನು ಉಚಿತವಾಗಿ ಪೂರೈಸಲಾಗುವುದು ಎಂಬ ಅತ್ಯಂತ ಆಘಾತಕಾರಿ ಭರವಸೆ ಕೊಟ್ಟವರನ್ನೂ ನೋಡಿಬಿಟ್ಟೆವು. ಅದು ವಿಚಿತ್ರ ತಲ್ಲಣಕ್ಕೆ ಈ ದೇಶದ ಜನತೆಯನ್ನು ತಳ್ಳಿದ್ದರೆ ಅಚ್ಚರಿಯೇನಿಲ್ಲ. ಗೆಲ್ಲಿಸಿದರೆ ಕೋವಿಡ್ ಲಸಿಕೆ ಉಚಿತ ಎಂದವರು, ಗೆಲ್ಲಿಸದಿದ್ದರೆ ಏನಾದೀತು ನೋಡಿ ಎಂಬ ಭೀತಿಯನ್ನು ಪರೋಕ್ಷವಾಗಿ ಜನರಲ್ಲಿ ತುಂಬಿದರಲ್ಲವೆ ಎಂಬುದು ಒಂದು ಪ್ರಶ್ನೆಯಾದರೆ, ಇಂತಹವರು ಒಡ್ಡುವ ಆಮಿಷ ಎಂತಹ ದಯನೀಯ ಸ್ಥಿತಿಗೆ ಜನರನ್ನು ತಳ್ಳೀತು ಎಂಬುದು ಇನ್ನೊಂದು ಪ್ರಶ್ನೆ. ಇಂತಹ ಬೆದರಿಕೆ ಮತ್ತು ಆಮಿಷಗಳು ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಜನತೆಯ ಹಕ್ಕನ್ನೇ ಕಸಿಯುತ್ತವೆನ್ನುವಾಗ, ಇನ್ನು ಪ್ರಜಾಪ್ರಭುತ್ವದ ಮೌಲ್ಯದ ಮಾತೆಲ್ಲಿ?

ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಇಡೀ ದೇಶದ ಅಥವಾ ಆಯಾ ರಾಜ್ಯದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಜನರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವಲ್ಲಿ ಅವರಿಗೆ ಜೊತೆಯಾಗಿ ನಿಲ್ಲುವ ಸ್ವರೂಪದಲ್ಲಿರಬೇಕೇ ಹೊರತು ಹೀಗೆ ಪ್ರಲೋಭನೆಗಳು ಮತ್ತು ಭೀತಿ ಹುಟ್ಟಿಸುವ ರೀತಿಯಲ್ಲಿ ಅಲ್ಲ. ಆದರೆ ಇಂದು ಇವೆರಡೂ ನಡೆಯುತ್ತಿವೆ. ಅಲ್ಲಮನ ವಚನವೊಂದರಲ್ಲಿ ಬರುವಂತೆ ‘ಊರದ ಚೇಳಿನ ಏರದ ಬೇನೆಯಲ್ಲಿ ಮೂರು ಲೋಕವೆಲ್ಲಾ ನರಳಿತ್ತು’. ಅಂದರೆ ಇಲ್ಲದ ಒಂದರ ಕುರಿತು ಭೀತಿಯನ್ನು ಹುಟ್ಟಿಸುತ್ತ, ಅದರ ಸಂಕಟ ಆವರಿಸಿರುವ ಭ್ರಾಮಕ ಸನ್ನಿವೇಶವು ಜನರ ಮನಸ್ಸನ್ನು ಕದಡುವಂತೆ ಮಾಡಿ ಆಟವಾಡಿಸುವ ಬಗೆಯೊಂದು ಇವತ್ತಿನ ರಾಜಕಾರಣದ ಮರೆಯಲ್ಲಿದೆ. ಇದು ರಾಜಕಾರಣದ ಅತ್ಯಂತ ತಣ್ಣಗಿನ ಕ್ರೌರ್ಯವೂ ಹೌದು.

ಯಾಕೆ ಹೀಗಾಗಿದೆ ಎಂದರೆ, ಇವತ್ತಿನ ರಾಜಕಾರಣಕ್ಕೆ ಸಾಂಸ್ಕೃತಿಕ ಮುಖವಿಲ್ಲ; ಸಾಂಸ್ಕೃತಿಕ ಸ್ಥೈರ್ಯವೂ ಇಲ್ಲ. ಓದಿನಿಂದ, ಅಕ್ಷರಪ್ರೀತಿಯಿಂದ ದೂರವುಳಿದ ರಾಜಕಾರಣವು ದುಡ್ಡಿನ ಹಿಂದೆ ಬಿದ್ದಿದೆ. ಓದೆಂಬುದನ್ನು ಡಿಗ್ರಿ ಎಂಬುದಕ್ಕೆ ಸೀಮಿತವಾಗಿಸಿರುವುದೂ ಇದೇ ರಾಜಕಾರಣದೊಳಗಿನ ಶಿಕ್ಷಣ ಪದ್ಧತಿ. ಆದರೆ ಓದೆಂಬುದು ಸಾಂಸ್ಕೃತಿಕ ಮನಸ್ಸುಗಳನ್ನು ರೂಪಿಸುವ ಅಸಾಧಾರಣ ಸಂಗತಿಯೆಂಬುದು ರಾಜಕಾರಣಕ್ಕೆ ಅರಿವಿಲ್ಲ. ರಾಜಕಾರಣಿಗಳಿಗೂ ಅಕ್ಷರ ಸಂಸ್ಕೃತಿಗೂ ಇರುವ ಅಂತರವು ಹೆಚ್ಚುತ್ತಲೇ ಇದೆ. ಅವರೊಳಗೊಂದು ಅಂತಃಕರಣ ರೂಪುಗೊಳ್ಳದಂತಾಗಿರುವುದು ಈ ಅಂತರದ ಕಾರಣದಿಂದಾಗಿ.

ಲೋಹಿಯಾ ಅವರೇ ಹೇಳಿದ ಮತ್ತೊಂದು ಮಾತು ನೆನಪಾಗುತ್ತದೆ. ‘‘ಈ ದೇಶದ ನಾಗರಿಕ ಸಮಾಜ ಅಭಿರುಚಿ ಹೀನವಾಗಿದೆ’’ ಎನ್ನುತ್ತಾರೆ ಅವರು. ಕಾಡುಮನುಷ್ಯರಿಗೂ ಪ್ರಕೃತಿಯ ಸಾಮೀಪ್ಯದಲ್ಲಿ, ಆ ಅದ್ಭುತ ಪ್ರಭಾವದಲ್ಲಿ ಅಭಿರುಚಿಯೆನ್ನುವುದಿರುತ್ತದೆ. ಆದರೆ ನಾಗರಿಕ ಸಮಾಜ ಇಂತಹ ಎಲ್ಲದರಿಂದ ವಿಮುಖವಾಗಿರುವುದರ ಬಗ್ಗೆ ನೋವಿನಿಂದ ಹೇಳುತ್ತಾರೆ ಲೋಹಿಯಾ.

ಅಕ್ಷರದ ಆಪ್ತತೆಯಲ್ಲಿ, ಪ್ರಕೃತಿಯ ಶುದ್ಧತೆಯಲ್ಲಿ ಕಲಿಯದವನು, ಒಂದು ಧ್ಯಾನಸ್ಥ ಸ್ಥಿತಿಯ ಅನುಭೂತಿಯನ್ನು ತನ್ನೊಳಗೆ ಕಂಡುಕೊಳ್ಳದವನು ಮಾನವೀಯವಾದ ಯಾವ ಮೌಲ್ಯಗಳನ್ನೂ ಒಳಗೊಳ್ಳಲಾರ. ಅಂತಹ ಹೊತ್ತಲ್ಲಿ ಅವನೊಳಗೆ ವಿಕಟವಾಗಿ ನಗುವುದು ಹಿಂಸೆಯೇ. ಆಗ ಅವನು ತಲುಪುವುದು ಮೃಗೀಯವಾದುದಕ್ಕಿಂತ ಅಪಾಯಕಾರಿ ಹಂತವನ್ನು.

ಪಿ ಲಂಕೇಶ್ ಅವರು ತಮ್ಮ ನೀಲು ಪದ್ಯವೊಂದರಲ್ಲಿ ಹೇಳುವಂತೆ,

ತಿನ್ನಲು ಕೊಲ್ಲುವ ಹುಲಿಗಳು

ಸಿಟ್ಟಿನಿಂದ ಸ್ಫೋಟಿಸುತ್ತವೆ,

ಆದರೆ ನಗುನಗುತ್ತಲೇ

ವಂಚಿಸಲು ಹಿಂಜರಿಯುತ್ತವೆ

ನಗುನಗುತ್ತಲೇ ವಂಚಿಸುವುದನ್ನು, ವಿಶ್ವಾಸಕ್ಕೆ ತೆಗೆದುಕೊಂಡು ಕೊಂದುಬಿಡುವುದನ್ನು ಮೃಗಗಳೂ ಮಾಡಲಿಚ್ಛಿಸುವುದಿಲ್ಲ. ಮೃಗೀಯವಾದುದರ ಬಗ್ಗೆ ಎಲ್ಲರೂ ಎಚ್ಚರವಾಗಿಯೇ ಇರಬಲ್ಲರು. ಆದರೆ ನಂಬಿದವರೇ ಕೊಲ್ಲುವುದನ್ನು ಕನಸಲ್ಲೂ ಎಣಿಸಲಾರರು. ಇವತ್ತು ನಾವು ನಮ್ಮನ್ನು ನಂಬಿಸಿದವರೇ ಯಾವ ಕ್ಷಣದಲ್ಲಿ ನಮ್ಮನ್ನು ಕೊಲ್ಲಲು ಹೊಂಚಿದ್ದಾರೆಯೋ ಎಂಬ ಆತಂಕದಲ್ಲಿ ಬದುಕನ್ನು ಹಿಡಿದಿಟ್ಟುಕೊಳ್ಳಬೇಕಾದ ಸ್ಥಿತಿಯಲ್ಲಿದ್ದೇವೆ. ಆಳುವ ಮನಃಸ್ಥಿತಿ ಮಾನವೀಯವಾದ ಎಲ್ಲವನ್ನೂ ಮರೆತಿರುವುದರಿಂದ ಅದರಿಂದ ಬದುಕಿಗಾಗಿ ಏನನ್ನೂ ನಿರೀಕ್ಷಿಸಲಾರದ ಸನ್ನಿವೇಶವೊಂದು ಬಹುದೊಡ್ಡ ವಿಷಾದವಾಗಿ ನಮ್ಮೆದುರು ನಿಂತಿದೆ, ಕಾಡುತ್ತಿದೆ.

Similar News