'ಜಿಮ್' ಬಂಡವಾಳ ಏನಾಯಿತು?
►ಜಿಮ್ ಹೆಸರಲ್ಲಿ ಪಡೆದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ.
►ಭೂ ಬ್ಯಾಂಕ್ ಅಜೆಂಡಾದೊಂದಿಗೆ ಬರುವ ಬಂಡವಾಳಿಗರು.
►ಸೈದ್ಧಾಂತಿಕ ತಿಕ್ಕಲುತನದಿಂದ ವಲಸೆ ಹೋದ ಉದ್ಯಮಗಳು-ಉದ್ಯೋಗ ನಷ್ಟವೇ ಹೆಚ್ಚು.
►ವಿವೇಚನಾರಹಿತ ತೀರ್ಮಾನ, ಆರ್ಥಿಕ ನೀತಿಗಳಿಂದಾಗಿ ಉದ್ಯೋಗ ನಷ್ಟ ಜಿಮ್‌ಗಳಿಂದ ಸೃಷ್ಟಿಯಾಗುವ ಉದ್ಯೋಗಳಿಗಿಂತ ಹೆಚ್ಚು.
►ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಲೆದರ್ ಇಂಡಸ್ಟ್ರಿ, ಟೆಕ್ಸ್‌ಟೈಲ್, ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಬಾರದ ಖಾಸಗಿ-ಸರಕಾರಿ ಬಂಡವಾಳ.
ಡಾಲರ್‌ನಲ್ಲಿ ಸಂಬಳ ಪಡೆಯುವ ಅನಿವಾಸಿ ಭಾರತೀಯರು ಡಾಲರ್ ಎದುರು ರೂಪಾಯಿ ಕುಸಿದಾಗಲೆಲ್ಲಾ ಸಂಭ್ರಮಿಸುವುದು ದೇಶದ್ರೋಹ. ಅಂತೆಯೇ ಸೈದ್ಧಾಂತಿಕ ತಿಕ್ಕಲುತನದ ಕಾರಣಕ್ಕೆ ದೇಶದ ಆರ್ಥಿಕತೆಯನ್ನು ಕೊಲ್ಲುವುದು, ಇಲ್ಲಿನ ಕೈಗಾರಿಕೆಗಳು ಬಂದ್ ಆಗುವಂತೆ, ವಲಸೆ ಹೋಗುವಂತೆ ಮಾಡುವುದೂ ದೇಶದ್ರೋಹವೇ. ಈ ಮನಸ್ಥಿತಿಯ ಪಕ್ಷ ಮತ್ತು ಸರಕಾರಗಳು ತಮ್ಮ ಹೊಣೆಗೇಡಿ ವರ್ತನೆಯಿಂದ ನಷ್ಟ ಮಾಡುತ್ತಿರುವ ಉದ್ಯೋಗಗಳ ಪ್ರಮಾಣ, ಜಿಮ್ ಮೂಲಕ ಸೃಷ್ಟಿಯಾಗುವ ಉದ್ಯೋಗಗಳಿಗಿಂತ ಹೆಚ್ಚು ಎನ್ನುವುದು ಕಣ್ಣ ಮುಂದಿರುವ ಸತ್ಯ.
ಗಿರೀಶ್ ಕೋಟೆ ಬಿಜೆಪಿ ಸರಕಾರ ಮತ್ತೊಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ಮಾಡಿ ಮುಗಿಸಿದೆ. ಕರ್ನಾಟಕದ ಜಿಮ್‌ಗೆ ಒಂದು ಚರಿತ್ರೆ ಇದೆ. ಈ ಚರಿತ್ರೆ ಒಂದಷ್ಟು ಸತ್ಯಗಳನ್ನು ತೆರೆದಿಟ್ಟಿದೆ. ಪ್ರತಿ ಜಿಮ್ ಬಯಲುಗೊಳಿಸುವ ಸರಕಾರದ 'ನಿಜ ಬಂಡವಾಳದ' ಸತ್ಯದ ಮೇಲೆ ಪದ ಪಾಂಡಿತ್ಯ-ಶಬ್ದ ಚಮತ್ಕಾರದ ಸುಳ್ಳಿನ ಹೊದಿಕೆ ಹೊದಿಸುವ ಸರಕಾರಗಳು ಪ್ರತೀ ಹೊಸ ಜಿಮ್ ವೇಳೆಯೂ ಹಳೆ ಹಳೆ ಸುಳ್ಳುಗಳನ್ನೇ ಹೊಸ ಹೊಸ ರೀತಿಯಲ್ಲಿ ಹೇಳುತ್ತಿವೆ.
ಪ್ರತೀ ಹೊಸ ಜಿಮ್ ವೇಳೆ ಹಿಂದಿನ ಜಿಮ್‌ನಲ್ಲಿ ಘೋಷಣೆ ಆಗಿದ್ದ ಬಂಡವಾಳ-ಹರಿದು ಬಂದ ಬಂಡವಾಳ-ಜಾರಿಯಾದ ಯೋಜನೆಗಳು- ಯೋಜನೆಗಳಿಗಾಗಿ ಪಡೆದುಕೊಂಡ ಭೂಮಿಯ ಪ್ರಮಾಣ-ಆ ಭೂಮಿಯಲ್ಲಿ ಘೋಷಿತ ಯೋಜನೆಗಳು ಬಂದಿವೆಯೇ ಇಲ್ಲವೇ? ಕೈಗಾರಿಕೆಗಾಗಿ ಪಡೆದುಕೊಂಡ ಭೂಮಿಯಲ್ಲಿ ಇದುವರೆಗೂ ಕೈಗಾರಿಕೆಗಳು ಕಾಣಿಸಿಕೊಳ್ಳದೆ, ಆ ಭೂಮಿ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಆಗುತ್ತಿರುವುದು ಏಕೆ? ರೈತರಿಂದ ಎಷ್ಟು ಹಣಕ್ಕೆ ಭೂಮಿ ಖರೀದಿಸಲಾಯಿತು-ಆ ಭೂಮಿಯನ್ನು ಬೇರೊಬ್ಬರಿಗೆ ಎಷ್ಟು ಹಣಕ್ಕೆ ಮಾರಾಟ ಮಾಡಲಾಯಿತು? ಕೈಗಾರಿಕೆ ಸ್ಥಾಪನೆ ಮಾಡದವರು ತಾವು ಪಡೆದ ಭೂಮಿಯನ್ನು ಇದುವರೆಗೂ ಸರಕಾರಕ್ಕೆ ಏಕೆ ಹಿಂದಿರುಗಿಸಿಲ್ಲ? ಸರಕಾರಗಳು ಏಕೆ ಆ ಕೈಗಾರಿಕೆಗೆ ಬಳಕೆಯಾಗದ ಭೂಮಿಯನ್ನು ವಾಪಸ್ ಕೇಳುತ್ತಿಲ್ಲ? ವಾಪಸ್ ಕೇಳದೇ ಇರುವುದಕ್ಕೆ ಸರಕಾರ ನಡೆಸುವವರಿಗೆ ಸಿಕ್ಕ ಲಾಭ ಏನು? ಒಟ್ಟಾರೆ ಭೂಮಿ ಕಳೆದುಕೊಂಡ ರೈತರು, ರೈತ ಕಾರ್ಮಿಕರು ಈಗೇನು ಮಾಡುತ್ತಿದ್ದಾರೆ? ಭೂಮಿ ಕಳೆದುಕೊಂಡಿದ್ದರಿಂದ ಎಷ್ಟು ಲಕ್ಷ ರೈತ ಕಾರ್ಮಿಕರು ನಿರುದ್ಯೋಗಿಗಳಾದರು? ನಿರ್ಗತಿಕರಾದರು? ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟು ವಿಶ್ಲೇಷಣೆ ನಡೆಸಿದ ಒಂದೇ ಒಂದು ವರದಿಯೂ ಎಷ್ಟು ಹುಡುಕಿದರೂ ಸಿಗುತ್ತಿಲ್ಲ.
ಈ ಬಾರಿ 9.82 ಲಕ್ಷ ಕೋಟಿ ರೂ. ಬಂಡವಾಳವನ್ನು ಆಕರ್ಷಿಸಿದ್ದೇವೆ. ಸರಕಾರ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸ್ಪಂದನ ಹೂಡಿಕೆದಾರರಿಂದ ಸಿಕ್ಕಿದೆ. ಈ ಬಂಡವಾಳದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತವೆ ಎನ್ನುವ ಭರ್ಜರಿ ಭರವಸೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೇರೆ ಬೇರೆ ಪದ ಪಾಂಡಿತ್ಯದಿಂದ ಆಕರ್ಷಕವಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೂ ಬಂಡವಾಳಗಾರರನ್ನು ಸ್ವಾಗತಿಸುತ್ತಾ...ನಿಮ್ಮ ಹಣಕ್ಕೆ ಭಾರತ ಪ್ರಶಸ್ತವಾದ ಹುಲ್ಲುಗಾವಲು ಎಂದು ಹುರಿದುಂಬಿಸಿ ಭಾಷಣ ಮಾಡುತ್ತಿದ್ದ ಹೊತ್ತಲ್ಲೇ ರೈತ ಸಂಘಟನೆಗಳು ಮತ್ತು ಹಸಿರು ಸೇನೆಯ ರೈತರು ''ಇದೊಂದು ಭೂ ಮಾಫಿಯಾ'' ಎಂದು ಪ್ರತಿಭಟನೆ ನಡೆಸಿದ್ದನ್ನು ಸುದ್ದಿಯೇ ಆಗದಂತೆ ಅದುಮಿಬಿಡಲಾಗಿದೆ.
ಚುನಾವಣೆ ಎದೆ ಮೇಲೆ ಬಂದಿರುವ ಹೊತ್ತಲ್ಲಿ ಬಿಜೆಪಿ ಸರಕಾರದ ಈ ಬಂಡವಾಳ ಹೂಡಿಕೆದಾರರ ಸಮಾವೇಶ ಕೇವಲ ಭೂ ಮಾಫಿಯಾ ತೊಟ್ಟಿರುವ ವೇಷ, 40 ಪರ್ಸೆಂಟ್ ಸರಕಾರ ನಡೆಸುತ್ತಿರುವ ಕಮಿಷನ್ ಜಾತ್ರೆ, ಈ ಸಮಾವೇಶದಲ್ಲಿ ಸರಕಾರದ ಪಾತ್ರ ಕೇವಲ ಕಮಿಷನ್ ಏಜೆಂಟ್ ಅಷ್ಟೆ ಎನ್ನುವ ಆರೋಪಗಳನ್ನು ಸಾರಾಸಗಟಾಗಿ ತೆಗೆದುಹಾಕುವ ಮೊದಲು ಇದೇ ಬಿಜೆಪಿ ನಡೆಸಿದ ಮೊದಲ ಜಿಮ್‌ನ ಬಂಡವಾಳ ಈಗ ಏನಾಗಿದೆ ಎನ್ನುವುದನ್ನು ಗಮನಿಸಬೇಕು.
ಇದೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲೇ 2010ರ ಜೂನ್ 4 ಮತ್ತು 5ರಂದು ಮೊದಲ ಬಿಜೆಪಿ ಜಿಮ್ ನಡೆದಿತ್ತು. ಈಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಭಾಷಣ ಮಾಡಿದಂತೆ ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪಅವರೂ ಭಾಷಣ ಮಾಡಿದ್ದರು.
ಮೊದಲ ಬಿಜೆಪಿ ಸರಕಾರದ ಮೊದಲ ಜಿಮ್‌ನ ಘೋಷಣೆ 4.5 ಲಕ್ಷ ಬಂಡವಾಳ ಹರಿದು ಬಂದಿದೆ. ಇದರಿಂದ 8.5 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎನ್ನುವುದಾಗಿತ್ತು. ಇದಕ್ಕಾಗಿ ಸರಕಾರ 26 ಸಾವಿರ ಎಕರೆ ಭೂಮಿಯನ್ನು ಹೂಡಿಕೆದಾರ ಕಂಪೆನಿಗಳಿಗೆ ನೀಡಲಿದೆ ಎನ್ನುವುದಾಗಿತ್ತು.
ಈ ಘೋಷಣೆ ಆಗಿ 12 ವರ್ಷಗಳು ಕಳೆದಿವೆ. ಘೋಷಿಸಿದ್ದರಲ್ಲಿ ಅರ್ಧದಷ್ಟು ಬಂಡವಾಳ ಬಂದಿದೆ. 26 ಸಾವಿರ ಎಕರೆ ಭೂಮಿಯನ್ನು ಪೂರ್ತಿಯಾಗಿ ಕೊಡಲಾಗಿದೆ. ಆದರೆ 8.5 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಯಾಗಿಲ್ಲ.
2010ರಲ್ಲಿ ಕೋವಿಡ್ ಇರಲಿಲ್ಲ. ರಾಜ್ಯದ ಮತ್ತು ದೇಶದಲ್ಲಿ ಆರ್ಥಿಕ ಕುಸಿತ ಇರಲಿಲ್ಲ. 2008ರಲ್ಲಿ ಅಮೆರಿಕ ಮತ್ತು ಯುರೋಪ್‌ನಲ್ಲಿ ವಿಪರೀತ ಆರ್ಥಿಕ ಕುಸಿತವಾಗಿದ್ದರೂ ಭಾರತದ ಗ್ರಾಮೀಣ ಆರ್ಥಿಕತೆ ಆರೋಗ್ಯಕರವಾಗಿತ್ತು. ಪರಿಣಾಮ ತೆರಿಗೆ ಸಂಗ್ರಹ ಅಚ್ಚುಕಟ್ಟಾಗಿತ್ತು. ಡಾಲರ್ ಎದುರು ಈಗಿನಷ್ಟು ರೂಪಾಯಿ ಕುಸಿದಿರಲಿಲ್ಲ. ಹಣದುಬ್ಬರ ಈಗಿನಷ್ಟು ಮುಗಿಲು ಮುಟ್ಟಿರಲಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈಗಿನಷ್ಟು ಪ್ರಮಾಣದಲ್ಲಿ ಬಂದ್ ಆಗಿರಲಿಲ್ಲ. ಎಲ್ಲಾ ರೀತಿಯ ಅನುಕೂಲಕರ ವಾತಾವರಣ ಇದ್ದಾಗಲೂ ಅವತ್ತು ಸರಕಾರ ಘೋಷಿಸಿದಂತೆ 8.5 ಲಕ್ಷ ಉದ್ಯೋಗಗಳು ಏಕೆ ಸೃಷ್ಟಿಯಾಗಲಿಲ್ಲ? ಎಲ್ಲಕ್ಕಿಂತ ಮುಖ್ಯವಾಗಿ 2010ರಲ್ಲಿ 2022ರಲ್ಲಿ ಇರುವ ರೀತಿಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ ಮುಂತಾದ ತಂತ್ರಜ್ಞಾನ ಇರಲಿಲ್ಲ. 2010ರಲ್ಲಿ ಕೈಗಾರಿಕೆಗಳಿನ್ನೂ ದೈಹಿಕ ಶ್ರಮವನ್ನೇ ಶೇ. 60ರಷ್ಟು ಆಧರಿಸಿದ್ದವು. ಆದರೂ ಸರಕಾರ ಘೋಷಿಸಿದ ಅರ್ಧದಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವುದನ್ನು ಸರಕಾರದ ನಾನಾ ಸಮೀಕ್ಷೆಗಳೇ ಹೇಳುತ್ತಿವೆ.
2016ರ ನೋಟ್ ಬ್ಯಾನ್ ದಾಳಿ ಮತ್ತು ಇದರ ಬೆನ್ನಲ್ಲೇ ನಡೆದ ಜಿಎಸ್‌ಟಿ ಆಕ್ರಮಣದಿಂದಾಗಿ ಭಾರತದ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಒಂದಾದ ಪೀಣ್ಯದ ಕೈಗಾರಿಕಾ ವಲಯವೂ ನೆಲಕಚ್ಚಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ನೋಟ್ ಬ್ಯಾನ್ ಪರಿಣಾಮದಿಂದ ಕುಸಿದ ನಿರ್ಮಾಣ ವಲಯ ಇನ್ನೂ ಮೇಲೆದ್ದಿಲ್ಲ. ಬಂದ್ ಆದ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸರಕಾರದ ನೆರವು ಸಿಕ್ಕಿಲ್ಲ. ದೇಶದ ಉದ್ಯೋಗ ಸೃಷ್ಟಿಯಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳ ಪಾತ್ರ ಬಹಳ ದೊಡ್ಡದು ಎನ್ನುವ ಸತ್ಯ ಗೊತ್ತಿದ್ದರೂ ನೋಟ್ ಬ್ಯಾನ್‌ನಿಂದಾದ ಅನಾಹುತ ಸರಿದೂಗಿಸಲು ಸರಕಾರಗಳು ಅಗತ್ಯ ನೆರವನ್ನು ಈ ಉದ್ಯಮಗಳಿಗೆ ನೀಡಿಲ್ಲ. ಆದರೆ ಆಗಿರುವ ಅನಾಹುತಗಳೆಲ್ಲವನ್ನೂ ಕೊರೋನದ ತಲೆಗೆ ಕಟ್ಟಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಚಾವಾಗಿರಬಹುದು. ಆದರೆ, ಕುಸಿತ ಮಾತ್ರ ಹಾಗೇ ಇದೆ.
ಸಾಲದ್ದಕ್ಕೆ ಈಗ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಕಾಣುತ್ತಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಭಾವದಿಂದ ಭಾರತದಲ್ಲೂ ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಉದ್ಯೋಗ ನಷ್ಟ ಸಂಭವಿಸುತ್ತಿವೆ. ರೊಬೋಟಿಕ್ ತಂತ್ರಜ್ಞಾನವೂ ಉದ್ಯೋಗ ನಷ್ಟಕ್ಕೆ ಕೊಡುಗೆ ನೀಡುತ್ತಿವೆ. ಈ ಹೊತ್ತಲ್ಲಿ ಸರಕಾರ ಹೇಳಿದ, ಜನರನ್ನು ನಂಬಿಸಿದಷ್ಟು ಪ್ರಮಾಣದ ಉದ್ಯೋಗ ಸೃಷ್ಟಿ ಆಗಲು ಸಾಧ್ಯವೇ?
2010ರ ತಮ್ಮ ಮೊದಲ ಜಿಮ್‌ನಲ್ಲಿ ಬಿಜೆಪಿ ಸರಕಾರ, 350 ಯೋಜನೆಗಳಿಗೆ 4.5 ಲಕ್ಷ ಬಂಡವಾಳ ಬಂದಿದೆ. ಇದರಲ್ಲಿ 8.5ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಶೇ33ರಷ್ಟು ಅಂದರೆ 102 ಯೋಜನೆಗಳು ಬಂದು ಇದರಿಂದ ಈ ಭಾಗದಲ್ಲಿ 2,41,300 ಉದ್ಯೋಗ ಸೃಷ್ಟಿಯಾಗುತ್ತದೆ ಎಂದಿತ್ತು. ಬೆಂಗಳೂರು ನಗರ ಜಿಲ್ಲೆಯಲ್ಲಿ 7,882.74 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 1,00,028 ಉದ್ಯೋಗ ಸೃಷ್ಟಿಯಾಗುತ್ತದೆ. ಬಳ್ಳಾರಿ ಸುತ್ತ ಮುತ್ತಲ ಕಬ್ಬಿಣದ ಅದಿರು ಹೇರಳವಾಗಿರುವ ಪ್ರದೇಶದಲ್ಲಿ 1,67,387 ಕೋಟಿ ರೂ. ಬಂಡವಾಳ ಹರಿದು ಬಂದು 98,856 ಉದ್ಯೋಗ ಸೃಷ್ಟಿಯಾಗುತ್ತವೆ ಅಂತೆಲ್ಲಾ ಭರವಸೆ ನೀಡಲಾಗಿತ್ತು. ಈ ಭರವಸೆಗಳೆಲ್ಲಾ ಸುಳ್ಳಾಗಿದ್ದು ಏಕೆ?
ಸರಕಾರ ಈ ಎಲ್ಲವನ್ನೂ ಜನರಿಗೆ ನಂಬಿಸುತ್ತಿದ್ದ ಹೊತ್ತಲ್ಲೇ ಇದ್ದ ಸತ್ಯ ಏನೆಂದರೆ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದ ಟೆಕ್ಸ್‌ಟೈಲ್ ಮತ್ತು ಚರ್ಮ ಕೈಗಾರಿಕೆಗಳ ಮೇಲೆ ಬಂಡವಾಳ ಹೂಡಲು ಒಂದೇ ಒಂದು ಕಂಪೆನಿಯೂ ಮುಂದೆ ಬಂದಿರಲಿಲ್ಲ. ಈ ವಲಯಗಳಿಗೆ ಬಂಡವಾಳ ಆಕರ್ಷಿಸುವ ಆಸಕ್ತಿಯೂ ಸರಕಾರಕ್ಕೆ ಇರಲಿಲ್ಲ. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಭಾರತದಲ್ಲಿದ್ದ ಟೆಕ್ಸ್‌ಟೈಲ್ ಮತ್ತು ಚರ್ಮ ಕೈಗಾರಿಕೆಗಳು ಇಡಿ ಇಡಿಯಾಗಿ ಬಾಂಗ್ಲಾದೇಶಕ್ಕೆ ವಲಸೆ ಹೋಗಿವೆ/ಹೋಗುತ್ತಿವೆ. ಭಾರತದ ರೂಪಾಯಿ ಕುಸಿಯುತ್ತಾ ಬಾಂಗ್ಲಾ ದೇಶದ ಕರೆನ್ಸಿ ಮೈ-ಕೈ ತುಂಬಿಕೊಳ್ಳು ತ್ತಿರುವುದಕ್ಕೆ, ಭಾರತದ ಜಿಡಿಪಿ ಪಾತಾಳ ಸೇರುತ್ತಾ ಬಾಂಗ್ಲಾದ ಜಿಡಿಪಿ ಮೈ-ಕೈ ತುಂಬಿಕೊಳ್ಳುತ್ತಿರುವುದಕ್ಕೆ ಈ ಟೆಕ್ಸ್‌ಟೈಲ್ ಮತ್ತು ಚರ್ಮ ಕೈಗಾರಿಕೆಗಳು ಅಪಾರ ಕೊಡುಗೆ ನೀಡಿವೆ ಎನ್ನುವ ಆರ್ಥಿಕ ಸಮೀಕ್ಷೆಗಳು ಕಣ್ಣ ಮುಂದಿವೆ.
ಭಾರತದ ಬೀದಿಗಳನ್ನು ಗೋ ಹತ್ಯಾ ನಿಷೇಧ ಮತ್ತು ಗುಂಪು ಹಲ್ಲೆ-ದ್ವೇಷ ಪಾಂಡಿತ್ಯ ಆಕ್ರಮಿಸಿಕೊಳ್ಳುತ್ತಿದ್ದಂತೆ, ಮಾಂಸಾಹಾರ ಸಂಸ್ಕಾರದ ವಿರುದ್ಧ ದಾಳಿಗಳು ಶುರುವಾಗುತ್ತಿದ್ದಂತೆ ಇಲ್ಲಿನ ಚರ್ಮ ಕೈಗಾರಿಕೆಗಳು ಸದ್ದಿಲ್ಲದೆ ಬಾಂಗ್ಲಾದಲ್ಲಿ ಜಾಗ ಮಾಡಿಕೊಂಡಿವೆ. ಇವೆಲ್ಲಾ ಏನಿಲ್ಲವೆಂದರೂ ತಲಾ 300ರಿಂದ 8-10 ಸಾವಿರ ಉದ್ಯೋಗ ಕಲ್ಪಿಸುವ ಕಾರ್ಖಾನೆಗಳಾಗಿದ್ದವು. ಐದಾರು ವರ್ಷಗಳ ಹಿಂದಿನವರೆಗೂ ಯಾವುದೇ ಊರ ಜಾತ್ರೆಗಳು ನಡೆದರೆ ಜಾತ್ರೆಯ ಮರುದಿನವೇ ಕುರಿ-ಮೇಕೆ ಚರ್ಮ ಸಂಗ್ರಹಿಸಲು ಸೈಕಲ್‌ಗಳಲ್ಲಿ ನೂರಾರು ಮಂದಿ ಮನೆ ಬಾಗಿಲಿಗೆ ಬರುತ್ತಿದ್ದರು. ಈಗ ಅವರು ಕಾಣುತ್ತಿಲ್ಲ. ಏಕೆಂದರೆ ಲೆದರ್ ಕಾರ್ಖಾನೆಗಳು ಆ ಮಟ್ಟದಲ್ಲಿ ವಲಸೆ ಹೋಗಿವೆ. ದೇಶದ ಶೇ. 88ರಷ್ಟು ಮಂದಿ ಆಚರಿಸುವ ಆಹಾರ ಸಂಸ್ಕೃತಿಯನ್ನು ವಿವೇಚನೆಯೇ ಇಲ್ಲದೆ ವಿರೋಧಿಸುವ, ಅವಮಾನಿಸುವ ಅನಾಗರಿಕ ಪಾಂಡಿತ್ಯದ ಪರಿಣಾಮ ದೇಶದ ಆರ್ಥಿಕತೆ ಪೆಟ್ಟು ತಿನ್ನುತ್ತಿದೆ ಎನ್ನುವುದು ಈಗ ಸಾಬೀತಾಗಿಬಿಟ್ಟಿದೆ. ಯಾವತ್ತೂ ಭಾರತದ ನೆರವನ್ನು ನಿರೀಕ್ಷಿಸುತ್ತಿದ್ದ ಬಾಂಗ್ಲಾ ಏಕಾಏಕಿ ಕೋವಿಡ್ ಸಂದರ್ಭದಲ್ಲೂ ಭಾರತಕ್ಕಿಂತ ಜಿಡಿಪಿಯಲ್ಲಿ ಉನ್ನತ ಮಟ್ಟಕ್ಕೆ ಹೋಗಿದ್ದು ಇಲ್ಲಿನ ಯಾವ ದೇಶಭಕ್ತ ಸಂಘಟನೆಗಳಿಗೂ ನಾಚಿಕೆಯನ್ನೇ ತರಿಸಿಲ್ಲ.
ಮೊನ್ನೆ ಮೊನ್ನೆ ಆರೆಸ್ಸೆಸ್ ಮುಖ್ಯಸ್ಥ ದತ್ತಾತ್ರೇಯ ಹೊಸಬಾಳೆ ಅವರು ''ದೇಶದ ನಿರುದ್ಯೋಗ ಸಮಸ್ಯೆ-ಹಣದುಬ್ಬರ-ಜಿಡಿಪಿ ಕುಸಿತ ಆತಂಕ ಸೃಷ್ಟಿಸಿದೆ'' ಎನ್ನುವ ಒಂದೇ ಒಂದು ಹೇಳಿಕೆ ನೀಡಿದ್ದು ಬಿಟ್ಟರೆ ಇದಕ್ಕಾಗಿ ಯಾರನ್ನೂ ಹೊಣೆ ಮಾಡಲಿಲ್ಲ. ಆರೆಸ್ಸೆಸ್ ಬೈಠಕ್‌ಗಳಲ್ಲೇ ಹತ್ತಾರು ವರ್ಷ ಕುಳಿತಿದ್ದವರೇ ಈಗ ದೇಶವನ್ನು-ರಾಜ್ಯವನ್ನು ಆಳುತ್ತಿದ್ದಾರೆ. ಹೀಗಿದ್ದೂ ಯಾಕೆ ಹೀಗಾಯಿತು? ಎನ್ನುವ ಪ್ರಶ್ನೆಗೆ ಮೋಹನ್ ಭಾಗವತ್ ಮತ್ತು ದತ್ತಾತ್ರೇಯ ಹೊಸಬಾಳೆ ಅವರು ಉತ್ತರಿಸಬೇಕು. ಇದಕ್ಕೆ ಉತ್ತರ ನೀಡುವುದಕ್ಕಿಂತ ಮಸೀದಿಗಳ ಬುಡ ಕೆರೆಯುತ್ತಾ ಅಲ್ಲೆಲ್ಲಾ ಶಿವನ ವಿಗ್ರಹವನ್ನು ಕೆದಕುತ್ತಾ ಕೂರುವುದು ಬಹಳ ಸುಲಭದ ಕೆಲಸ. ಇದಕ್ಕೆ ಯಾವ ತಿಳಿವಳಿಕೆ ಬೇಕಾಗಿಲ್ಲ. ತಿಕ್ಕಲುತನ ಇದ್ದರೆ ಸಾಕು.
ಡಾಲರ್‌ನಲ್ಲಿ ಸಂಬಳ ಪಡೆಯುವ ಅನಿವಾಸಿ ಭಾರತೀಯರು ಡಾಲರ್ ಎದುರು ರೂಪಾಯಿ ಕುಸಿದಾಗಲೆಲ್ಲಾ ಸಂಭ್ರಮಿಸುವುದು ದೇಶದ್ರೋಹ. ಅಂತೆಯೇ ಸೈದ್ಧಾಂತಿಕ ತಿಕ್ಕಲುತನದ ಕಾರಣಕ್ಕೆ ದೇಶದ ಆರ್ಥಿಕತೆಯನ್ನು ಕೊಲ್ಲುವುದು, ಇಲ್ಲಿನ ಕೈಗಾರಿಕೆಗಳು ಬಂದ್ ಆಗುವಂತೆ, ವಲಸೆ ಹೋಗುವಂತೆ ಮಾಡುವುದೂ ದೇಶದ್ರೋಹವೇ. ಈ ಮನಸ್ಥಿತಿಯ ಪಕ್ಷ ಮತ್ತು ಸರಕಾರಗಳು ತಮ್ಮ ಹೊಣೆಗೇಡಿ ವರ್ತನೆಯಿಂದ ನಷ್ಟ ಮಾಡುತ್ತಿರುವ ಉದ್ಯೋಗಗಳ ಪ್ರಮಾಣ, ಜಿಮ್ ಮೂಲಕ ಸೃಷ್ಟಿಯಾಗುವ ಉದ್ಯೋಗಗಳಿಗಿಂತ ಹೆಚ್ಚು ಎನ್ನುವುದು ಕಣ್ಣ ಮುಂದಿರುವ ಸತ್ಯ.
ಜಿಮ್ ಹೆಸರಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು, ಒಣ ಭೂಮಿಯನ್ನು ಬಂಡವಾಳಿಗರ ಖಾತೆಗೆ ಅತ್ಯಂತ ಕಡಿಮೆ ಬೆಲೆಗೆ ವರ್ಗಾಯಿಸುವುದೂ ಕೃಷಿ ಮತ್ತು ಆಹಾರ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತವೆ. ಸೆಪ್ಟಂಬರ್ ತಿಂಗಳಿನಲ್ಲಿ ಕೇಂದ್ರ ಸರಕಾರ ಏಕಾಏಕಿ ಭೂತಾನ್‌ನಿಂದ ವಾರ್ಷಿಕ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳಲು ಬೇಷರತ್ ಒಪ್ಪಿಗೆ ನೀಡಿಬಿಟ್ಟಿದೆ. ಕನಿಷ್ಠ ಆಮದು ಬೆಲೆ (ಎಂಐಸಿ)ಯ ಷರತ್ತನ್ನೂ ಭೂತಾನ್ ಅಡಿಕೆಗೆ ವಿಧಿಸಿಲ್ಲ. ಈ ಒಂದು ತೀರ್ಮಾನ ಮಲೆನಾಡು ಮತ್ತು ಅಡಿಕೆ ಬೆಳೆಯುವ ಜಿಲ್ಲೆಗಳ ಆರ್ಥಿಕತೆಯನ್ನು ನಾಶ ಮಾಡುವುದಲ್ಲದೆ, ಅಡಿಕೆ ಕಾರ್ಮಿಕರ ಕೆಲಸವನ್ನೂ ಕಿತ್ತುಕೊಳ್ಳುತ್ತದೆ. ಕೇಂದ್ರ ಸರಕಾರದ ಏಕಮುಖ ಅಡಿಕೆ ಆಮದು ನೀತಿಯಿಂದಾಗಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅಡಿಕೆ ತೋಟಗಳ ಸಾಮೂಹಿಕ ನಾಶಕ್ಕೆ ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ನೋಟ್ ಬ್ಯಾನ್ ಬಳಿಕ ಬೆಂಗಳೂರು ಸೇರಿದಂತೆ ಇಡೀ ದೇಶದ ಕಟ್ಟಡ ನಿರ್ಮಾಣವಲಯ ಸ್ಥಗಿತಗೊಂಡು ಪ್ರತೀದಿನ ಲಕ್ಷಾಂತರ ಉದ್ಯೋಗಗಳು ನಷ್ಟವಾದವು. ನೋಟ್ ಬ್ಯಾನ್ ಮಾಡಿದ ಪಾಪಕ್ಕೆ ಪರಿಹಾರವಾಗಿ ಕೇಂದ್ರ ಸರಕಾರ 2020ರ ಬಜೆಟ್‌ನಲ್ಲಿ 25 ಸಾವಿರ ಕೋಟಿ ರೂ. ಡಿಸ್ಟ್ರೆಸ್ ಫಂಡ್ ಘೋಷಿಸಿ ಸ್ಥಗಿತಗೊಂಡಿರುವ ಆಯ್ದ ಅಪಾರ್ಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಲು ಸ್ವಾಮಿ ಫಂಡ್ ಹೆಸರಿನಲ್ಲಿ ಸಾಲ ನೀಡುವಂತಾಯಿತು.
ಒಂದು ಕಡೆ ವಿವೇಚನಾರಹಿತ ತೀರ್ಮಾನ ಮತ್ತು ಸೈದ್ಧಾಂತಿಕ ತಿಕ್ಕಲುತನಗಳಿಂದ ಸಾವಿರಾರು ಉದ್ದಿಮೆಗಳು ಬಂದ್ ಆಗುವಂತೆ, ಲಕ್ಷಾಂತರ ಉದ್ಯೋಗಗಳು ನಷ್ಟವಾಗುವಂತೆ ಮಾಡುತ್ತಾ ಮತ್ತೊಂದು ಕಡೆ ಭೂ ಬ್ಯಾಂಕ್ ಅಜೆಂಡಾವನ್ನು ಇಟ್ಟುಕೊಂಡಿರುವ ಕಂಪೆನಿಗಳ ಬಂಡವಾಳವನ್ನು ಆಕರ್ಷಿಸಿ ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನಂಬಿಸುವುದೇ ನಡೆಯುತ್ತಿದೆ.
ಬಂಡವಾಳ ಹೂಡುವ ಬಂಡವಾಳಿಗರಿಗೆ ಉದ್ಯೋಗ ಸೃಷ್ಟಿಗಿಂತ ಹೆಚ್ಚು ಕಾಳಜಿ ಅವರ ಲಾಭದ ಹಿತಾಸಕ್ತಿಯೇ ಆಗಿರುತ್ತದೆ ಎನ್ನುವುದು ಇದುವರೆಗಿನ ಎಲ್ಲಾ ಜಿಮ್‌ಗಳಿಂದ ಗೊತ್ತಾಗಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಹೆಚ್ಚು ಇನ್ಸೆನ್‌ಟೀವ್‌ಗಳನ್ನು ನೀಡುತ್ತೇವೆ ಎಂದು ಜಿಮ್ ಉದ್ಘಾಟನಾ ಭಾಷಣದಲ್ಲಿ ನಾಲ್ಕು ಬಾರಿ ಒತ್ತಿ ಒತ್ತಿ ಹೇಳಿದ್ದಾರೆ.
ಹೀಗಾಗಿ ಉಳಿದ ಜಿಮ್‌ಗಳು ಪಕ್ಕಕ್ಕಿರಲಿ ಬಿಜೆಪಿ ಸರಕಾರದ ಅವಧಿಯಲ್ಲೇ ನಡೆದ ಮೊದಲ ಜಿಮ್ ಸುತ್ತ ನಡೆದಿರುವ ಕಮಿಷನ್ ದಂಧೆ ಮತ್ತು ಭೂ ಮಾಫಿಯಾದ ಲೆಕ್ಕ ತೆಗೆದರೂ ಅದರಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರದ ಸುಳಿವುಗಳು ಸಿಗಬಹುದು. ಆದ್ದರಿಂದ ಈ ಹಿಂದಿನ ಜಿಮ್‌ಗಳಲ್ಲಿ ಮಾಡಿದ ಘೋಷಣೆಗಳು ಏಕೆ ಈಡೇರಿಲ್ಲ. ಈಡೇರಿದ್ದರೆ ಎಷ್ಟು ಈಡೇರಿವೆ. ಒಪ್ಪಂದದ ಪ್ರಕಾರ ಕೈಗಾರಿಕೆ ಸ್ಥಾಪನೆ ಮಾಡದವರು, ಭರವಸೆ ನೀಡಿದಷ್ಟು ಉದ್ಯೋಗ ಸೃಷ್ಟಿಸದವರು ಏಕೆ ಭೂಮಿಯನ್ನು ಸರಕಾರಕ್ಕೆ ಹಿಂದಿರುಗಿಸಿಲ್ಲ ಎನ್ನುವುದನ್ನು ಜನರ ಮುಂದಿಡಬೇಕು. ಮುಖ್ಯವಾಗಿ ಜಿಮ್‌ಗಳಿಗೆ ಧಾರೆ ಎರೆದ ಭೂ ಬ್ಯಾಂಕ್‌ಗಳಲ್ಲಿ ಈಗ ಏನೇನು ನಡೆಯುತ್ತಿದೆ ಎನ್ನುವುದನ್ನು ರೈತ ಸಂಘಟನೆಗಳು ಮತ್ತು ಭೂಮಿ ಕಳೆದುಕೊಂಡವರು ದೇಶದ ಮುಂದಿಡುವ ಕೆಲಸ ಮಾಡಬೇಕು.
ಮಾಧ್ಯಮಗಳು, ವಿರೋಧ ಪಕ್ಷಗಳು ಈ ಕೆಲಸ ಮಾಡುತ್ತವೆ ಎಂದು ನೆಚ್ಚಿಕೊಂಡು ಕೂರುವ ಸ್ಥಿತಿ ಈಗಿಲ್ಲ.