×
Ad

ಮಣಿಪಾಲದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ನೂತನ ಎಟಿಎಂ ಉದ್ಘಾಟನೆ

Update: 2022-11-06 18:54 IST

ಉಡುಪಿ, ನ.6: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಣಿಪಾಲ ಶಾಖೆಯ ಹೊಸ ಎಟಿಎಂ ಸೇವೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇವತ್ತು ಬ್ಯಾಂಕ್ 50 ಕೋಟಿ ಲಾಭ ಪಡೆಯ ವಲ್ಲಿ ಯಶಸ್ವಿಯಾಗಿದೆ. ನವೋದಯ ಗುಂಪಿನ ಸದಸ್ಯರು ನಮ್ಮ ಬ್ಯಾಂಕಿನ ಆಸ್ತಿ. ನಮ್ಮ ಬ್ಯಾಂಕ್ ಠೇವಣಿದಾರರಿಗೆ ವಾಣಿಜ್ಯ ಬ್ಯಾಂಕಿಗಿಂತ ಜಾಸ್ತಿ ಬಡ್ಡಿದರ ನೀಡುತ್ತಿವೆ. ಶೇ.8ರಷ್ಟು ಬಡ್ಡಿದರ ಯಾವುದೇ ವಾಣಿಜ್ಯ ಬ್ಯಾಂಕ್ ನೀಡುತ್ತಿಲ್ಲ. ಹಿರಿಯ ನಾಗರಿಕರು ಮಾತ್ರವಲ್ಲದೆ ಯೋಧರು, ಮಾಜಿ ಯೋಧರು ಹಾಗೂ ಮಹಿಳೆಯರಿಗೂ ಶೇ.0.5ರಷ್ಟು ಹೆಚ್ಚು ಬಡ್ಡಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ಇಚ್ಛೆಯಂತೆ ನಗದು ವ್ಯವಹಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಬ್ಯಾಂಕಿನಿಂದ ಮಣಿಪಾಲದಲ್ಲಿ ಏಳನೇ ಎಟಿಎಂ ಆರಂಭಿಸಲಾಗಿದೆ. ಮುಂದೆ ಎಂಟನೇ ಎಟಿಎಂನ್ನು ಬೆಳ್ತಂಗಡಿಯಲ್ಲಿ ತೆರೆಯಲಾಗುವುದು. ಮಹಿಳೆಯರಿಗೆ ತರಬೇತಿ ಜೊತೆಗೆ ಎಟಿಎಂ ಕಾರ್ಡ್ ಕೂಡ ನೀಡಲು ಉದ್ದೇಶಿಸಲಾಗಿದೆ.  ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಣಿಪಾಲ ದಲ್ಲಿ ಎಟಿಎಂ ತೀರಾ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಪಿ.ಶೆಟ್ಟಿ, ರೋಟರಿ ಕ್ಲಬ್‌ನ ಜೈವಿಠಲ್ ಮುಖ್ಯ ಅತಿಥಿಗಳಾಗಿದ್ದರು.

ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ರಾಜು ಪೂಜಾರಿ, ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಇನ್ನಂಜೆ, ಎಂ.ಮಹೇಶ್ ಹೆಗ್ಡೆ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್. ಮೊದಲಾದವರು ಉಪಸ್ಥಿತರಿದ್ದರು.

ಎಸ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ವಂದಿಸಿದರು.

Similar News