×
Ad

ಅಣ್ವಸ್ತ್ರ ಯುದ್ಧದತ್ತ ಜಗತ್ತಿನ ನಿದ್ರಾನಡಿಗೆ: ಡೂಮ್ಸ್‌ಡೇ ಕ್ಲಾಕ್ ಎಚ್ಚರಿಕೆ

Update: 2022-11-06 22:55 IST

ಶಿಕಾಗೊ, ನ.6: ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ಜಗತ್ತು ಪರಮಾಣು ಯುದ್ಧದತ್ತ ನಿದ್ರಾನಡಿಗೆಯಲ್ಲಿ ಮುಂದುವರಿಯುತ್ತಿದೆ ಎಂದು ‘ಡೂಮ್ಸ್‌ಡೇ ಕ್ಲಾಕ್’ ಎಚ್ಚರಿಕೆ ನೀಡಿದೆ.ಈ ಸಾಂಕೇತಿಕ ಗಡಿಯಾರವು ಪರಮಾಣು ಯುದ್ಧ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಂದ ಮನುಕುಲ ಸ್ವಯಂ ನಾಶಗೊಳ್ಳಲು, ತನ್ನ ಅಂತ್ಯಕ್ಕೆ ಮನುಕುಲವು ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ಲೆಕ್ಕಾಚಾರ ಹಾಕುತ್ತದೆ. 1945ರಲ್ಲಿ ‘ಬುಲೆಟಿನ್ ಆಫ್ ದಿ ಅಟೊಮಿಕ್ ಸೈಂಟಿಸ್ಟ್ಸ್’ ಎಂಬ ಲಾಭೋದ್ದೇಶವಿಲ್ಲದ ಸಂಸ್ಥೆ ಸ್ಥಾಪಿಸಿರುವ ಗಡಿಯಾರವು ‘ಒಂದು ರೂಪಕವಾಗಿದೆ ಮತ್ತು ಭೂಮಿಯಲ್ಲಿ ನಾವು ಬದುಕುಳಿಯಬೇಕಿದ್ದರೆ ಪರಿಹರಿಸಿಕೊಳ್ಳಬೇಕಾದ ಅಪಾಯಗಳ ಜ್ಞಾಪನೆಯಾಗಿದೆ’ ಎಂದು ಸಂಸ್ಥೆ ಹೇಳಿದೆ.

ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ಪ್ರಪಂಚವು ಅಣ್ವಸ್ತ್ರ ಯುದ್ಧದತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ಬುಲೆಟಿನ್‌ನ ಸಹಾಯಕ ಸಂಪಾದಕ ಫ್ರಾಂಕೋಯಿಸ್ ಡಯಾರ್-ಮೌರಿನ್ ಹೇಳಿದ್ದಾರೆ. 2ನೇ ವಿಶ್ವಯುದ್ಧದಲ್ಲಿ ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಮೆರಿಕ ಪರಮಾಣು ಬಾಂಬ್ ದಾಳಿ ನಡೆಸಿದ ಸಂದರ್ಭದಲ್ಲಿ 1945ರಲ್ಲಿ ಅಮೆರಿಕದ ಶಿಕಾಗೊ ವಿವಿಯ ವಿಜ್ಞಾನಿಗಳು ‘ಬುಲೆಟಿನ್ ಆಫ್ ದಿ ಅಟೊಮಿಕ್ ಸೈಂಟಿಸ್ಟ್ಸ್’ ಎಂಬ ವಿಜ್ಞಾನ ಪತ್ರಿಕೆಯನ್ನು ಆರಂಭಿಸಿದ್ದರು. ಅಣುಬಾಂಬ್‌ನಿಂದ ಸಂಭವಿಸುವ ಭೀಕರ ಅಪಾಯದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುವ ಉದ್ದೇಶ ಇವರದ್ದಾಗಿತ್ತು. ವಿಜ್ಞಾನ ಪತ್ರಿಕೆಯ 16 ಸದಸ್ಯರು ಸೇರಿ ‘ಜಗತ್ತು ಎಷ್ಟರ ಮಟ್ಟಿಗೆ ಅಪಾಯದ ಸ್ಥಿತಿಯಲ್ಲಿದೆ ಎಂಬುದನ್ನು ಸಾಂಕೇತಿಕವಾಗಿ ತೋರಿಸಲು 1947ರಲ್ಲಿ ‘ಡೂಮ್ಸ್‌ಡೇ’ ಗಡಿಯಾರ ಸ್ಥಾಪಿಸಿದರು. ಇದರ ಮುಳ್ಳನ್ನು ಸರ್ವನಾಶದ ಮುಳ್ಳು ಎಂದೂ ಕರೆಯಲಾಗುತ್ತದೆ. ಜಗತ್ತಿನಲ್ಲಿ ಭೀಕರ ಯುದ್ಧ, ವೈಮಾನಿಕ ದಾಳಿ ನಡೆದಾಗಲೆಲ್ಲಾ ಈ ಗಡಿಯಾರದ ಮುಳ್ಳನ್ನು ಸ್ವಲ್ಪ ಮುಂದೆ ಸರಿಸಲಾಗುತ್ತದೆ. ಗಡಿಯಾರದ ಮುಳ್ಳು ಮಧ್ಯರಾತ್ರಿ 12 ಗಂಟೆ ಮುಟ್ಟಿದರೆ ಜಗತ್ತಿನ ವಿನಾಶದ ಸೂಚನೆ ಎಂದು ಭಾವಿಸಲಾಗುತ್ತದೆ.

1947ರಲ್ಲಿ ಪ್ರಥಮ ಬಾರಿಗೆ ಸ್ಥಾಪಿಸಿದ ಗಡಿಯಾರದ ಮುಳ್ಳನ್ನು ಅಂದಿನಿಂದ 24 ಬಾರಿ ಮುಂದೆ ಸರಿಸಲಾಗಿದೆ. ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಮಧ್ಯೆ ಪರಮಾಣು ಅಸ್ತ್ರದ ಪೈಪೋಟಿಯ ಹಿನ್ನೆಲೆಯಲ್ಲಿ 1947ರಲ್ಲಿ ಗಡಿಯಾರದ ಮುಳ್ಳನ್ನು 7 ನಿಮಿಷ ಮುಂದೂಡಲಾಗಿತ್ತು. 1991ರಲ್ಲಿ ಶೀತಲ ಸಮರ ಅಂತ್ಯಗೊಂಡಾಗ ಗಡಿಯಾರದ ಮುಳ್ಳು ಮಧ್ಯರಾತ್ರಿಗೆ 7 ನಿಮಿಷಗಳಷ್ಟು ದೂರವಿತ್ತು. ಹವಾಮಾನ ಬದಲಾವಣೆ, ಪರಮಾಣು ಅಸ್ತ್ರದ ಪೈಪೋಟಿ ಮರುಕಳಿಸಿರುವುದು, ಮಾಹಿತಿ ಯುದ್ಧ, ಬಾಹ್ಯಾಕಾಶದ ಮಿಲಿಟರೀಕರಣ, ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ 2020ರಲ್ಲಿ ಗಡಿಯಾರದ ಮುಳ್ಳನ್ನು ಮಧ್ಯರಾತ್ರಿಗೆ 100 ಸೆಕೆಂಡ್‌ನಷ್ಟು ಹತ್ತಿರಕ್ಕೆ ಸರಿಸಲಾಗಿದೆ.ಈಗ ಡೂಮ್ಸ್‌ಡೇ ಗಡಿಯಾರ ಅಮೆರಿಕದ ಶಿಕಾಗೊ ವಿವಿಯ ‘ಹ್ಯಾರಿಸ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ’ಯ ಬುಲೆಟಿನ್ ಕಚೇರಿಯಲ್ಲಿ ಈ ಗಡಿಯಾರವಿದೆ. ಆರಂಭದಲ್ಲಿ ಪರಮಾಣು ಅಸ್ತ್ರಗಳ ಅಪಾಯಕ್ಕೆ ಮಾತ್ರ ಸಂಬಂಧಿಸಿದ್ದ ಗಡಿಯಾರದ ಮುಳ್ಳಿನ ಚಲನೆ ಈಗ ಹವಾಮಾನ ಬದಲಾವಣೆ, ಸೈಬರ್ ಭದ್ರತೆಯ ಸಮಸ್ಯೆಗಳಿಗೂ ಸ್ಪಂದಿಸುತ್ತದೆ.

Similar News