ತಲಪಾಡಿ ಆರ್‌ಟಿಒ ಕಚೇರಿಗೆ ಲೋಕಾಯುಕ್ತ ದಾಳಿ ಪ್ರಕರಣ: ದಾಖಲಾತಿಗಳಲ್ಲಿ ನ್ಯೂನತೆ ಮಾಹಿತಿ ಬಗ್ಗೆ ವರದಿ: ಲಕ್ಷ್ಮೀ ಗಣೇಶ್
ಮಂಗಳೂರು, ನ.8: ತಲಪಾಡಿಯ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಲೋಕಾಯುಕ್ತ ಮಂಗಳೂರು ಪೊಲೀಸ್ ವಿಭಾಗದಿಂದ ನಿನ್ನೆ ನಡೆದ ದಾಳಿಯ ಸಂದರ್ಭದಲ್ಲಿ ಹಲವಾರು ನ್ಯೂನತೆಗಳು ಕಂಡುಬಂದಿವೆ. ದಲ್ಲಾಳಿಗಳ ಮೂಲಕ ಹಣ ವಸೂಲು, ದಾಖಲಾತಿಗಳಲ್ಲಿ ನ್ಯೂನತೆ ಹಾಗೂ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣದ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸಮಗ್ರ ವರದಿಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ನೀಡಲಾಗುವುದು ಎಂದು ಮಂಗಳೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಕೆ. ತಿಳಿಸಿದ್ದಾರೆ.
ಆರ್‌ಟಿಓ ಚೆಕ್‌ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಡಳಿತ ಹಾಗೂ ಅಕ್ರಮಗಳ ಬಗ್ಗೆ ಸೊಮೊಟೋ ಪ್ರಕರಣ ದಾಖಲಿಸಿ ದಾಳಿ ಮಾಡಿ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿ ಕರ್ನಾಟಕ ಲೋಕಾಯುಕ್ತ ಸರ್ಚ್ ವಾರಂಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ತಲಪಾಡಿ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಲೋಕಾಯುಕ್ತ ಮಂಗಳೂರು ವಿಭಾಗದಿಂದ ಅನಿರೀಕ್ಷಿತ ದಾಳಿ ನಡೆಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.