ಉಡುಪಿ ಟೂರಿಸಂ ಕನೆಕ್ಟ್ ಕಾರ್ಯಾಗಾರ ಉದ್ಘಾಟಿಸಿದ ಶಾಸಕ ರಘುಪತಿ ಭಟ್
"ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಝೆಡ್ ಕಾನೂನು ತೊಡಕು"
ಉಡುಪಿ : ಪ್ರಸ್ತುತ ಇರುವ ಸಿಆರ್‌ಝಡ್ ಕಾನೂನಿಂದಾಗಿ ಬೀಚ್ ಬದಿಗಳಲ್ಲಿ ಪ್ರವಾಸೀಗರಿಗೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ಅಭಿವೃದ್ಧಿ ಕೆಲಸಗಳಿಗೆ ತೊಡಕಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗು ತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರಯೋಜಕತ್ವದಲ್ಲಿ ಕರಾವಳಿ ಪ್ರವಾಸೋದ್ಯಮ ಸಂಘಟನೆ, ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಕಿದಿಯೂರು ಹೊಟೇಲ್‌ನಲ್ಲಿ ಆಯೋಜಿಸಲಾದ ಉಡುಪಿ ಟೂರಿಸಂ ಕನೆಕ್ಟ್ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಬೇಕಾದ ಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಕೋಸ್ಟಲ್ ಟೂರಿಸಂ ಅಸೋಸಿಯೇಶನ್ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಪ್ರಾವಾಸೋದ್ಯಮ, ಕ್ರೀಡೆ, ಸಂಸ್ಕೃತಿಗೆ ಸರಕಾರದಿಂದ ಹೆಚ್ಚಿನ ಅನುದಾನ ಲಭ್ಯವಾಗುತ್ತಿಲ್ಲ. ಬಹಳ ಮುಖ್ಯವಾಗಿ ಈ ಮೂರು ವಲಯಗಳಿಗೆ ವಿಶೇಷ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದು ಹೆಚ್ಚಿನ ಅನುದಾನ ಒದಗಿಸುವಂತೆ ಪ್ರಯತ್ನಿಸಲಾಗುವುದು ಎಂದರು.
ಉಡುಪಿ ಜಿಲ್ಲೆ ಧಾರ್ಮಿಕ, ಆರೋಗ್ಯ, ಶೈಕ್ಷಣಿಕ, ಆಹಾರ, ಸಂಸ್ಕೃತಿ, ನೈಸರ್ಗಿಕ ಸಂಪತ್ತಿನ ಮೂಲಕ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಗೋವಾದ ಕಡಲ ಕಿನಾರೆಗಿಂತ ಉಡುಪಿ ಬೀಚ್‌ಗಳು ಸ್ವಚ್ಛ ಮತ್ತು ಸುಂದರವಾಗಿದೆ. ಇಲ್ಲಿ ನಡೆಯುವ ಕೋಲ, ಭೂತ, ನಾಗಮಂಡಲ, ಕಂಬಳ ಸಾಂಸ್ಕೃತಿಕ, ಧಾರ್ಮಿಕ ಶ್ರೀಮಂತಿಕೆ ಪ್ರತಿರೂಪ. ಜನವರಿ ಅನಂತರ ಜರಗುವ ಈ ಆಚರಣೆಗಳ ವೀಕ್ಷಣೆಗೆ ಹೊರ ಜಿಲ್ಲೆ, ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಕರೆತರಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರಾದೇಶಿಕ ನಿರ್ದೇಶಕರು(ದಕ್ಷಿಣ ಪ್ರಾಂತ್ಯ) ಮುಹಮ್ಮದ್ ಫಾರೂಕ್, ಇಲಾಖೆಯ ಉಪ ನಿರ್ದೇಶಕಿ ಅನಿತಾ ಬಿ., ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ರಾಮ ನಾಯ್ಕ್ ಕೆ., ಸಂಘಟನೆಯ ಕಾರ್ಯದರ್ಶಿ ಗೌರವ್ ಶೇಣವ, ಕೋಶಾಧಿಕಾರಿ ಚಂದ್ರ ಕಾಂತ್ ಡಿ. ಉಪಸ್ಥಿತರಿದ್ದರು.
ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಪಾಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್ ಸ್ವಾಗತಿಸಿದರು. ಡಾ.ವಿಜಯೇಂದ್ರ ಕಾರ್ಯ ಕ್ರಮ ನಿರೂಪಿಸಿದರು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ದೇಶ ದಾದ್ಯಂತ ಸುಮಾರು 50 ಮಂದಿ ಟ್ರಾವೆಲ್ ಏಜೆಂಟ್ಸ್, ಇವೆಂಟ್ ನಿರ್ವಾ ಹಕರು ಭಾಗವಹಿಸಿದ್ದಾರೆ.