ಮುರುಘಾ ಶ್ರೀಯಿಂದ ಕ್ಷಮಿಸಲಾರದ, ಅಕ್ಷಮ್ಯ ಅಪರಾಧ: ಮಾಜಿ ಸಿಎಂ ಯಡಿಯೂರಪ್ಪ

Update: 2022-11-08 13:27 GMT

ಉಡುಪಿ : ಮುರುಘಾ ಶರಣರು ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿ ರಲಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೋಳಿ ಹಿಂದುಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಇದಕ್ಕೆ ಕಾಂಗ್ರೆಸ್ ಕೇವಲ ಖಂಡನೆ ಮಾಡಿದರೆ ಸಾಕಾಗೋದಿಲ್ಲ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅವರು ಅಂದು ಕೊಂಡಿದ್ದರೆ ಅದೊಂದು ಭ್ರಮೆ. ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು. ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದರು.

ಚುನಾವಣೆ ಗೆದ್ದು ಖರ್ಗೆಗೆ ಗಿಫ್ಟ್ ಕೊಡುತ್ತೇವೆ ಎಂದಿರುವ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವುದೊ ಭ್ರಮೆ ಯಲ್ಲಿದ್ದಾರೆ. ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಮನಸ್ಸಲ್ಲಿ ದ್ದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ ಎಂದು ತಿಳಿಸಿದರು.

ನಾನು ಮತ್ತು ಬೊಮ್ಮಾಯಿ ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತ ಪೂರ್ವ ಜನಬೆಂಬಲ ಸಿಕ್ಕಿದೆ. ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಸಿದ್ದರಾಮಯ್ಯನಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುವ ಸಿದ್ದರಾಮಯ್ಯ ಬಾದಾಮಿಯನ್ನು ಯಾಕೆ ಬಿಟ್ಟು ಬರುತ್ತಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತ. ಎಂಎಲ್‌ಎ ಆಗಿ ಕೆಲವೇ ಮತಗಳಿಂದ ಅಂದು ಗೆದ್ದಿದ್ದಾರೆ. ಆ ನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದಾರೆ. ಯಾವುದೇ ಅಭಿವೃದ್ಧಿ ಮಾಡಿಲ್ಲ.  ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದಾರೆ. ಬೇರೆ ಬೇರೆ ಪಕ್ಷದಿಂದ ಅನೇಕರು ಈಗಾಗಲೇ ಬಿಜೆಪಿಗೆ ಬಂದಿದ್ದಾರೆ. ಇನ್ನೂ ಬರುವವರಿದ್ದಾರೆ ಎಂದು ಅವರು ತಿಳಿಸಿದರು

Similar News