ಗುಜರಾತ್ ಕಾಂಗ್ರೆಸ್ ನಾಯಕ ರಥ್ವಾ ಬಿಜೆಪಿಗೆ ಸೇರ್ಪಡೆ
Update: 2022-11-08 23:15 IST
ಅಹ್ಮದಾಬಾದ್, ನ.8: ಹಿರಿಯ ಶಾಸಕ ಮೋಹನಸಿನ್ಹ ರಥ್ವಾ(78) ಅವರು ಮಂಗಳವಾರ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯುಂಟಾಗಿದೆ. ಪ್ರಮುಖ ಬುಡಕಟ್ಟು ನಾಯಕರಾಗಿರುವ ರಥ್ವಾ ಹತ್ತು ಬಾರಿ ಶಾಸಕರಾಗಿದ್ದು,ಹಾಲಿ ಛೋಟಾ ಉದಯಪುರ (ಎಸ್‌ಟಿ) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಮುಂದಿನ ತಿಂಗಳು ನಡೆಯುವ ಚುನಾವಣೆಗೆ ತಾನು ಸ್ಪರ್ಧಿಸುವುದಿಲ್ಲ ಎಂದು ಇತ್ತೀಚಿಗೆ ಪ್ರಕಟಿಸಿದ್ದ ರಥ್ವಾ,ಕಾಂಗ್ರೆಸ್ ತನ್ನ ಪುತ್ರ ರಾಜೇಂದ್ರಸಿನ್ಹ ರಥ್ವಾಗೆ ಟಿಕೆಟ್ ನೀಡಬೇಕೆಂದು ಬಯಕೆ ವ್ಯಕ್ತಪಡಿಸಿದ್ದರು.ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನರನ್ ರಥ್ವಾ ಅವರೂ ಈ ಕ್ಷೇತ್ರದಿಂದ ತನ್ನ ಪುತ್ರನಿಗೆ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ.