×
Ad

ಆರ್ಥಿಕ ಸುಧಾರಣೆಗಳಿಗಾಗಿ ದೇಶವು ಮನಮೋಹನ್‌ ಸಿಂಗ್‌ ಅವರಿಗೆ ಋಣಿಯಾಗಿದೆ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Update: 2022-11-08 23:26 IST

ಹೊಸದಿಲ್ಲಿ: ಆರ್ಥಿಕ ಸುಧಾರಣೆಗಳಿಗಾಗಿ ದೇಶವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರಿಗೆ ಋಣಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಮಂಗಳವಾರ ಹೇಳಿದ್ದಾರೆ.

ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ಗಡ್ಕರಿ ಅವರು ಟಿಐಒಎಲ್ ಅವಾರ್ಡ್ಸ್ 2022 ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

1991 ರಲ್ಲಿ ವಿತ್ತ ಸಚಿವರಾಗಿ ಸಿಂಗ್ ಅವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು. ಹಾಗೂ ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ಅವರು ಹೇಳಿದರು.

"ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ" ಗಡ್ಕರಿ ಹೇಳಿದರು.

1990 ರ ದಶಕದ ಮಧ್ಯಭಾಗದಲ್ಲಿ ತಾನು ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದಾಗ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳಿಂದಾಗಿ ಮಹಾರಾಷ್ಟ್ರದಲ್ಲಿ ರಸ್ತೆಗಳನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡರು.

ಉದಾರ ಆರ್ಥಿಕ ನೀತಿಯು ರೈತರು ಮತ್ತು ಬಡವರಿಗಾಗಿ ಎಂದು ಗಡ್ಕರಿ ಪ್ರತಿಪಾದಿಸಿದರು. ಯಾವುದೇ ದೇಶದ ಅಭಿವೃದ್ಧಿಗೆ ಉದಾರ ಆರ್ಥಿಕ ನೀತಿ ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಚೀನಾ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು, ಭಾರತಕ್ಕೆ ಹೆಚ್ಚಿನ ಕ್ಯಾಪೆಕ್ಸ್ ಹೂಡಿಕೆಯ ಅಗತ್ಯವಿದೆ ಎಂದು ಅವರು ಹೇಳಿದರು.

Similar News