‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’: ಪ್ರಧಾನಿಯಿಂದ ಜಿ20 ಲಾಂಛನ, ಥೀಮ್, ವೆಬ್‌ಸೈಟ್ ಅನಾವರಣ
ಹೊಸದಿಲ್ಲಿ,ನ.8: ಭಾರತದ ಜಿ20 ಅಧ್ಯಕ್ಷ ಸ್ಥಾನದ ಲಾಂಛನ, ಥೀಮ್ ಹಾಗೂ ವೆಬ್‌ಸೈಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೊಸದಿಲ್ಲಿಯಲ್ಲಿ ಅನಾವರಣಗೊಳಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿಯವರು ‘‘ ಭಾರತವು ಡಿಸೆಂಬರ್ 1ರಿಂದ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ, ದೇಶದ ಎಲ್ಲಾ ಜನತೆಗೆ ನಾನು ಹೃತ್ಪೂರ್ವಕ ಅಬಿನಂದನೆಗಳನ್ನು ಸಲ್ಲಿಸುವೆ ’’ ಎಂದರು.
ಲಾಂಛನದಲ್ಲಿನ ತಾವರೆಯ ಏಳು ದಳಗಳು ಏಳು ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ‘ವಸುದೇವ ಕುಟುಂಬಕಂ’ ಅಥವಾ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಪರಿಕಲ್ಪನೆ (ಥೀಮ್) ಜಗತ್ತಿನ ಬಗ್ಗೆ ಭಾರತಕ್ಕಿರುವ ದಯಾಪರತೆಯ ಸಂಕೇತವಾಗಿದೆ. ತಾವರೆಯು ಸಾಂಸೃತಿಕ ಪರಂಪರೆಯನ್ನು ಹಾಗೂ ಜಗತ್ತನ್ನು ಒಗ್ಗೂಡಿಸುವಲ್ಲಿ ಭಾರತಕ್ಕೆ ಇರುವ ನಂಬಿಕೆಯನ್ನು ಬಿಂಬಿಸುತ್ತದೆ ಎಂದು ಪ್ರಧಾನಿ ವಿವರಿಸಿದರು.
ಲಾಂಛನದ ಬಗ್ಗೆ ಸಲಹೆಗಳನ್ನು ನೀಡುಂತೆ ದೇಶದ ಜನತೆಗೆ ಮನವಿ ಮಾಡಲಾಗಿತ್ತು. ಜಿ20 ಲಾಂಛನದ ವಿಷಯದಲ್ಲಿ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಇಂದು ಅವರು ನೀಡಿದ ಸಲಹೆಗಳು ಈ ಬೃಹತ್ ಜಾಗತಿಕ ಕಾರ್ಯಕ್ರಮದಲ್ಲಿ ಸಾಕಾರವಾಗಲಿದೆ ಎಂದರು.
ಜಿ20 ಅಧ್ಯಕ್ಷತೆಯು ಜಾಗತಿಕ ಕಾರ್ಯಸೂಚಿಗೆ ಕೊಡುಗೆಯನ್ನು ನೀಡುವ ಅವಕಾಶವನ್ನು ಭಾರತಕ್ಕೆ ತಂದುಕೊಟ್ಟಿದೆ ಎಂದು ಪ್ರಧಾನಿ ಹೇಳಿದರು.
‘‘ನಾವು ವಸಾಹತುಶಾಹಿಯ ಶೃಂಖಲೆಗಳಲ್ಲಿ ಕರಾಳದಿನಗಳನ್ನು ಕಂಡಿದ್ದೇವೆ. ಹಲವಾರು ಸವಾಲುಗಳ ಹೊರತಾಗಿಯೂ ಭಾರತವು ತನ್ನ ಕಠಿಣ ಅನುಭವಗಳನ್ನು ಬಲವಾಗಿ ಪರಿವರ್ತಿಸಿದೆ’’ ಎಂದು ಮೋದಿ ಅಭಿಪ್ರಾಯಿಸಿದರು
ಪ್ರಸಕ್ತ ಜಿ20 ಅಧ್ಯಕ್ಷತೆಯನ್ನು ಇಂಡೊನೇಶ್ಯ ಹೊಂದಿದ್ದು, ಡಿಸೆಂಬರ್‌ನಲ್ಲಿ 1ರಂದು ಅ ಅದು ಭಾರತಕ್ಕೆ ಹಸ್ತಾಂತರಗೊಳ್ಳಲಿದೆ. ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು ದೇಶಾದ್ಯಂತ ಅನೇಕ ಸ್ಥಳಗಳಲ್ಲಿ 32 ವಿವಿಧ ವಲಯಗಳಿಗೆ ಸಂಬಂಧಿಸಿದೆ 200 ಸಭೆಗಳನ್ನು ನಡೆಸಲಿದೆ.
ಅರ್ಜೆಂಟೀನಾ, ಆಸ್ಟ್ರೇಲಿಯ, ಬ್ರೆಝಿಲ್, ಕೆನಡ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೊನೇಶ್ಯ, ಇಟಲಿ, ಜಪಾನ್, ಮೆಕ್ಸಿಕೊ, ರಶ್ಯ, ಸೌದಿ ಆರೇಬಿಯ, ದಕ್ಷಿಣ ಆಫ್ರಿಕ, ದಕ್ಷಿಣ ಕೊರಿಯ,ಟರ್ಕಿ, ಬ್ರಿಟನ್ ಹಾಗೂ ಅಮೆರಿಕ ಜಿ20ಯ ಸದಸ್ಯ ರಾಷ್ಟ್ರಗಳಾಗಿವೆ. ಯುರೋಪ್ ಒಕ್ಕೂಟ ಕೂಡಾ ಜಿ20ಯ ಸದಸ್ಯನಾಗಿದೆ.
ಹಣಕಾಸು ಸಚಿವ ವೇದಿಕೆಯಾಗಿ 1999ರಲ್ಲಿ ಜಿ20 ಸ್ಥಾಪನೆಯಾಗಿದ್ದು, ಆವಾಗಿನಿಂದಲೂ ಭಾರತ ಅದರ ಸದಸ್ಯನಾಗಿದೆ.