ಗುಜರಾತ್‌ ಚುನಾವಣೆ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್‌ ಸಾಧ್ಯತೆ

Update: 2022-11-09 07:22 GMT

ಹೊಸದಿಲ್ಲಿ: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ, ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ರಿವಾಬಾ ಜಡೇಜಾ ಅವರಿಗೆ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್‌ ದೊರೆಯುವ ಸಾಧ್ಯತೆಯಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇಂದು ಸಭೆ ಸೇರಲಿದೆ.

ರಿವಾಬಾ ಜಡೇಜಾ ಅವರು  ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವೀಧರೆಯಾಗಿದ್ದು ಹಿರಿಯ ಕಾಂಗ್ರೆಸ್ಸಿಗ ಹರಿ ಸಿಂಗ್‌ ಸೋಳಂಕಿ ಅವರ ಸಂಬಂಧಿಯಾಗಿದ್ದಾರೆ. ರವೀಂದ್ರ ಜಡೇಜಾ ಅವರನ್ನು 2016 ರಲ್ಲಿ ವಿವಾಹವಾಗಿದ್ದ ರಿವಾಬಾ ಅವರು ರಜಪೂತರ ಸಂಘಟನೆಯಾದ ಕರ್ನಿ ಸೇನಾದ ನಾಯಕಿಯೂ ಆಗಿದ್ದಾರೆ.

ರಿವಾಬಾ ಅವರ ಹೊರತಾಗಿ ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ವಲಸೆ ಬಂದಿರುವ ಹಾರ್ದಿಕ್‌ ಪಟೇಲ್‌ ಮತ್ತು ಅಲ್ಪೇಶ್‌ ಠಾಕುರ್‌ ಕೂಡ ಬಿಜೆಪಿ ಟಿಕೆಟ್‌ ಪಡೆಯುವ  ಸಾಧ್ಯತೆಯಿದೆಯೆನ್ನಲಾಗಿದೆ.

ಬಿಜೆಪಿ ಚುನಾವಣಾ ಸಮಿತಿ ಸಭೆ ಇಂದು ಪಕ್ಷಾಧ್ಯಕ್ಷ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಲಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಗುಜರಾತ್‌ ಚುನಾವಣೆ ಡಿಸೆಂಬರ್‌  1 ಮತ್ತು 5 ರಂದು ನಡೆಯಲಿದೆ.

ಗುಜರಾತ್‌ನ ಬಿಜೆಪಿ ಕೋರ್‌ ಸಮಿತಿ ಮಂಗಳವಾರ ನಡ್ಡಾ ಅವರ ನಿವಾಸದಲ್ಲಿ ಮೂರು ಗಂಟೆಗಳ ಕಾಲ ಸಭೆ ನಡೆಸಿದೆ. ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿ ತನ್ನ ಕೆಲ ಹಿರಿಯ ನಾಯಕರುಗಳಾದ ಮಾಜಿ ಸೀಎಂ ವಿಜಯ್‌ ರುಪಾನಿ ಮತ್ತು ಮಾಜಿ ಡೆಪ್ಯುಟಿ ಸೀಎಂ ನಿತಿನ್‌ ಪಟೇಲ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆಯಾಗಿದೆ. ಅಂತೆಯೇ ಬಿಜೆಪಿಯ ಅಲಿಖಿತ ನಿಯಮದಂತೆ 75 ವರ್ಷ ದಾಟಿದವರು ಹಾಗೂ ಸಂಸದರು, ಶಾಸಕರ ಸಂಬಂಧಿಗಳಿಗೆ ಟಿಕೆಟ್‌ ನಿರಾಕರಿಸಲ್ಪಡುವ ಸಾಧ್ಯತೆಯಿದೆ.

Similar News