ಅನಾಥ ಹಿಂದು ಯುವತಿಯ ವಿವಾಹವನ್ನು ಸಂಬಂಧಿಕರ ಸ್ಥಾನದಲ್ಲಿ ನಿಂತು ನೆರವೇರಿಸಿದ ಮುಸ್ಲಿಮರು

Update: 2022-11-09 10:29 GMT

ಜೈಪುರ್: ರಾಜಸ್ಥಾನದ ರಾಮಘರ್‌ ನಿವಾಸಿ ಆರುಷಿ ಒಂದು ವರ್ಷದವಳಿರುವಾಗಲೇ ತನ್ನ ಹೆತ್ತವರಿಬ್ಬರನ್ನೂ ಕಳೆದುಕೊಂಡು ಅನಾಥೆಯಾಗಿದ್ದಳು. ತಾವು ಸ್ವತಃ ಬಡವರಾಗಿದ್ದರೂ ಆಕೆಯ ಮಾವ ಜಯಪ್ರಕಾಶ್‌ ಜಂಗಿದ್‌ ಅವರೇ ಆಕೆಯನ್ನು ಸಾಕಿ, ಸಲಹಿ. ಬೆಳೆಸಿ ಉತ್ತಮ ಶಿಕ್ಷಣ ನೀಡಿದ ಫಲವಾಗಿ ಆಕೆ ಈಗ ಸ್ನಾತ್ತಕೋತ್ತರ ಪದವೀಧರೆಯಾಗಿದ್ದಾಳೆ.

ಇತ್ತೀಚೆಗೆ ನಡೆದ ಆಕೆಯ ವಿವಾಹ ಸಮಾರಂಭ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮಿದೆ. ರಾಮಘರದ ಮುಸ್ಲಿಂ ಸಮುದಾಯದ ಹಲವು ಪ್ರಮುಖರು ಆಕೆಯ ಮನೆಗೆ ಆಗಮಿಸಿ ಆಕೆಯ ಸೋದರ ಮಾವಂದಿರ ಸ್ಥಾನದಲ್ಲಿ ನಿಂತು ವಿವಾಹದ ವಿಶೇಷ ಪ್ರಕ್ರಿಯೆಯಾದ ಮೈರಾ ಮತ್ತು ಭಾತ್‌ನಲ್ಲಿ ಭಾಗವಹಿಸಿದರಲ್ಲದೆ ವಧುವಿಗೆ ಉಡುಗೊರೆಗಳು ರೂ 31,000 ನಗದು ಕೂಡ ಕೊಡುಗೆಯಾಗಿ ನೀಡಿದ್ದೇ ಅಲ್ಲದೆ ಮದುವೆಯ ಊಟದ ಏರ್ಪಾಟು ಕೂಡ ಮಾಡಿದ್ದಾರೆ.

ಆರುಷಿ ವಿವಾಹ ಸಮಾರಂಭದ ಬಗ್ಗೆ ತಿಳಿದು ಸ್ಥಳೀಯ ಅಂಜುಮಾನ್‌ ಶಿಕ್ಷಣ ಸಮಿತಿ ಅಧ್ಯಕ್ಷ ಮತ್ತು ಪಂಚಾಯತ್‌ ಸಮಿತಿ ಅಧ್ಯಕ್ಷ ನಸ್ರು ಖಾನ್‌ ಮತ್ತು ಇತರ ಸದಸ್ಯರು ಅಲ್ಲಿಗೆ ಆಗಮಿಸಿ ಸರ್ವ ಸಹಕಾರ ನೀಡಿದ್ದರು.

ದೋಲಿ ಧುಬ್‌ ನಿವಾಸಿ ದಲ್ಚಂದ್‌ ಎಂಬಾತನ ಜೊತೆಗೆ ಆರುಷಿ ವಿವಾಹ ಸುಸೂತ್ರವಾಗಿ ನಡೆಯಿತು. ನಂತರ ವಧು ತನಗೆ ಸಹಾಯ ಮಾಡಿದ ಎಲ್ಲರನ್ನು ಪ್ರೀತಿಯಿಂದ ಆಲಂಗಿಸಿ ನಂತರ ಅವರ ಆಶೀರ್ವಾದ ಪಡೆದಳು.

ಸಮಿತಿಯ ಸದಸ್ಯರು ಈ ಹಿಂದೆ ಕೂಡ  ಐದು ಮಂದಿ ಬಡ ಹಿಂದು ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗಿದ್ದರಲ್ಲದೆ 560 ಮುಸ್ಲಿಂ ಯುವತಿಯರ ವಿವಾಹವನ್ನೂ ಸಾಮೂಹಿಕ ವಿವಾಹ ಕಾಯಕ್ರಮಗಳ ಮೂಲಕ ನೆರವೇರಿಸಿದ್ದಾರೆ.

Similar News