30 ನಿಮಿಷ ರಾಷ್ಟ್ರೀಯ ಮಹತ್ವದ ವಿಷಯಗಳನ್ನು ತೋರಿಸಿ: ಟಿವಿ ಚಾನೆಲ್‌ಗಳಿಗೆ ನೂತನ ಮಾರ್ಗದರ್ಶಿ ಸೂತ್ರಗಳು
ಹೊಸದಿಲ್ಲಿ, ನ. 9: ಇನ್ನು ಪ್ರತಿ ದಿನ 30 ನಿಮಿಷ ರಾಷ್ಟ್ರೀಯ ಮಹತ್ವದ ಮತ್ತು ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯಗಳನ್ನು ಟೆಲಿವಿಶನ್ ಚಾನೆಲ್‌ಗಳು ತೋರಿಸುವುದು ಕಡ್ಡಾಯವಾಗಿದೆ.
ಅಪ್‌ಲಿಂಕಿಂಗ್ ಆ್ಯಂಡ್ ಡೌನ್‌ಲಿಂಕಿಂಗ್ ಆಫ್ ಸ್ಯಾಟಲೈಟ್ ಟೆಲಿವಿಶನ್ ಚಾನೆಲ್ಸ್ ಇನ್ ಇಂಡಿಯ, 2022-ಇದರ ಮಾರ್ಗದರ್ಶಿ ಸೂತ್ರಗಳಲ್ಲಿ ಈ ಅಂಶವನ್ನು ಸೇರಿಸಲಾಗಿದೆ. ಕೇಂದ್ರ ಸಚಿವ ಸಂಪುಟವು ಬುಧವಾರ ಈ ಮಾರ್ಗದರ್ಶಿ ಸೂತ್ರಗಳಿಗೆ ಅನುಮೋದನೆ ನೀಡಿದೆ.
ಇದಕ್ಕೂ ಮೊದಲು, ಉಪಗ್ರಹ ಟಿವಿ ಚಾನೆಲ್‌ಗಳು ಎರಡು ಕಂತುಗಳ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕಾಗಿತ್ತು. ಅವುಗಳ ಸ್ಥಾನದಲ್ಲಿ ಈಗ ಹೊಸ ಮಾರ್ಗದರ್ಶಿ ಸೂತ್ರಗಳು ಬಂದಿವೆ ಎಂದು ಕೇಂದ್ರ ಪ್ರಸಾರ ಮತ್ತು ವಾರ್ತಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ನೂತನ ನಿಯಮಗಳ ಪ್ರಕಾರ, ಕಾರ್ಯಕ್ರಮಗಳ ನೇರಪ್ರಸಾರ ಮಾಡಲು ಹಿಂದಿನಂತೆ ಪೂರ್ವಾನುಮತಿ ಪಡೆಯಬೇಕಾಗಿಲ್ಲ. ಆದರೆ, ನೇರಪ್ರಸಾರದ ಕಾರ್ಯಕ್ರಮಗಳನ್ನು ಟಿವಿ ಚಾನೆಲ್‌ಗಳು ಮೊದಲೇ ನೋಂದಾಯಿಸಕೊಳ್ಳಬೇಕು. ಹೊಸ ನಿಯಮಗಳ ಪ್ರಕಾರ, ಸುದ್ದಿ ಸಂಸ್ಥೆಗಳು ಇನ್ನು ಒಂದು ವರ್ಷದ ಬದಲಿಗೆ ಐದು ವರ್ಷಗಳ ಅವಧಿಗೆ ಅನುಮತಿ ಕೋರಬಹುದಾಗಿದೆ.