ಹೆಜಮಾಡಿ: ಶಾಲೆಗಳಿಗೆ ನುಗ್ಗಿ ನಗದು ಕಳವು

Update: 2022-11-09 16:51 GMT

ಪಡುಬಿದ್ರಿ: ಹೆಜಮಾಡಿಯ ಸರಕಾರಿ ಪ್ರೌಢಶಾಲೆ, ಖಾಸಗಿ ಶಾಲೆಯೊಂದರ ಬಾಗಿಲುಗಳ ಬೀಗವನ್ನು ಒಡೆದು ಒಳ ಪ್ರವೇಶಿಸಿ ಒಟ್ಟು ಸುಮಾರು 91,020 ರೂ. ನಗದು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಹೆಜಮಾಡಿಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿ ಅಲ್ಲಿದ್ದ ಅಕ್ಷರದಾಸೋಹ ಆಹಾರ ವಸ್ತು ಸಾಮಗ್ರಿ ಖರೀದಿಗೆಂದು ಇರಿಸಿದ್ದ 15000 ರೂ. ನಗದನ್ನು ಕಳವುಗೈದಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜು ಕೊಠಡಿಯ ಬಾಗಿಲನ್ನೂ ಒಡೆದು ಕಳ್ಳತನಕ್ಕೆ ಯತ್ನ ನಡೆಸಿರುವ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಹೆಜಮಾಡಿಯ ಅಲ್ ಅಝ್‍ಹರ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಕಚೇರಿಯ ಬೀಗ ಒಡೆದು ಒಳ ಪ್ರವೇಶಿಸಿ ಕಚೇರಿಯಲ್ಲಿದ್ದ ದಾಖಲೆಗಳನ್ನೆಲ್ಲಾ ಚಲ್ಲಾಪಿಲ್ಲಿಗೊಳಿಸಿ, ಖುರ್ಚಿ ಖರೀದಿಗೆ ಇಟ್ಟಿದ್ದ 45000 ರೂ., ಶೈಕ್ಷಣಿಕ ಪ್ರವಾಸಕ್ಕೆಂದು ಸಂಗ್ರಹಿಸಿಟ್ಟಿದ್ದ 11,000 ರೂ. ಮತ್ತು ಶಾಲಾ ಶುಲ್ಕವಾಗಿ ಸಂಗ್ರಹಿಸಿದ್ದ 20,020ರೂ. ಸೇರಿದಂತೆ ಒಟ್ಟು 76020ರೂ. ಕಳವುಗೈದಿದ್ದಾರೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ  ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Similar News