ಒಕ್ಕೂಟ ವ್ಯವಸ್ಥೆಗೆ ಘಾಸಿ ಮಾಡಬಲ್ಲ ರಾಜ್ಯಪಾಲರ ಹಸ್ತಕ್ಷೇಪ

Update: 2022-11-10 03:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಸೋಲನ್ನು ಒಪ್ಪಿ, ಮತದಾರನ ನಿಲುವಿಗೆ ತಲೆಬಾಗುವುದು ಪಕ್ಷ ವೊಂದು ಪ್ರಜಾಸತ್ತೆಗೆ ನೀಡಬಹುದಾದ ಅತಿ ದೊಡ್ಡ ಗೌರವ. ಪ್ರಜಾಸತ್ತಾತ್ಮಕವಾಗಿ ಅಧಿಕಾರ ಹಿಡಿಯಲು ವಿಫಲವಾದಾಗ, ಪ್ರಜಾಸತ್ತೆಯನ್ನೇ ದುರ್ಬಲಗೊಳಿಸಿ, ತಪ್ಪುದಾರಿಯಲ್ಲಿ ಅಧಿಕಾರ ಹಿಡಿಯಲು ಯತ್ನಿಸುವುದು ಸಂವಿಧಾನಕ್ಕೆ ಬಗೆಯುವ ದ್ರೋಹ. ಮತ ನೀಡಿದ ಮತದಾರರಿಗೆ ಮಾಡುವ ವಂಚನೆ. ಪ್ರಜಾಸತ್ತಾತ್ಮಕವಾಗಿ ಗೆಲ್ಲಲು ಸಾಧ್ಯವಾಗದೇ ಇದ್ದಾಗ, ಹಣಬಲವನ್ನು ಬಳಸಿಕೊಂಡು ಸಂವಿಧಾನಬದ್ಧವಾಗಿ ಆಯ್ಕೆಯಾದ ಸರಕಾರವನ್ನು ಉರುಳಿಸುವುದನ್ನು ‘ಚಾಣಕ್ಯ ತಂತ್ರ’ ಎಂದು ಮಾಧ್ಯಮಗಳು ಬಣ್ಣಿಸಲು ಆರಂಭಿಸಿವೆ. ಪ್ರಜಾಸತ್ತೆಯ ವಿರುದ್ಧದ ಕುತಂತ್ರವನ್ನೇ ರಾಜಕೀಯ ಮುತ್ಸದ್ದಿತನವಾಗಿ ಬಿಂಬಿಸಲು ಯತ್ನಿಸುತ್ತಿವೆ. ಆದುದರಿಂದಲೇ, ಶಾಸಕರನ್ನು ಹಣ ಕೊಟ್ಟುಕೊಂಡುಕೊಳ್ಳುವಾಗ ಅಥವಾ ಹಣಕ್ಕಾಗಿ ಶಾಸಕರು ಮಾರಾಟವಾಗುವಾಗ ಯಾವ ಲಜ್ಜೆಯೂ ಅವರನ್ನು ಕಾಡುವುದಿಲ್ಲ.

ಮೋದಿ ನೇತೃತ್ವದ ಬಿಜೆಪಿ ಇಂದು ತನ್ನ ಪಕ್ಷ ಅಧಿಕಾರದಲ್ಲಿಲ್ಲದೇ ಇರುವ ರಾಜ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಂತಹ ಹತ್ತು ಹಲವು ‘ಕುತಂತ್ರ’ಗಳ ಮೊರೆ ಹೋಗಿದೆ. ‘ಆಪರೇಷನ್ ಕಮಲ’ ಅದರಲ್ಲಿ ಮೊದಲ ಹಂತ. ಅದರಲ್ಲಿ ಯಶಸ್ವಿಯಾಗದೇ ಇದ್ದರೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿ ಪಾಳೆಯದ ನಾಯಕರನ್ನು ಬೆದರಿಸಲು, ಬ್ಲಾಕ್‌ಮೇಲ್ ಮಾಡಲು ಯತ್ನಿಸುತ್ತದೆ. ಇದರಲ್ಲೂ ವಿಫಲವಾದಾಗ, ರಾಜ್ಯಪಾಲರನ್ನು ಬಳಸಿಕೊಂಡು, ರಾಜ್ಯ ಸರಕಾರದೊಳಗೆ ಹಸ್ತಕ್ಷೇಪ ಮಾಡ ತೊಡಗುತ್ತದೆ. ಲೆಫ್ಟಿನೆಂಟ್ ಗವರ್ನರ್ ಅವರನ್ನು ಬಳಸಿಕೊಂಡು ದಿಲ್ಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರಕಾರಕ್ಕೆ ಗರಿಷ್ಠಮಟ್ಟದಲ್ಲಿ ಕೇಂದ್ರ ಸರಕಾರ ಕಿರುಕುಳವನ್ನು ನೀಡಿತು. ದಿಲ್ಲಿ ಪೂರ್ಣ ಪ್ರಮಾಣದಲ್ಲಿ ರಾಜ್ಯದ ಸ್ಥಾನಮಾನ ಪಡೆಯದೇ ಇರುವುದರಿಂದ ಕೇಂದ್ರ ಸರಕಾರ ಅದನ್ನು ಪೂರಕವಾಗಿ ಬಳಸಿಕೊಂಡಿತು. ಇದೀಗ ತನ್ನ ನಿಯಂತ್ರಣಕ್ಕೆ ಸಿಗದ ದಕ್ಷಿಣ ಭಾರತದ ದ್ರಾವಿಡ ರಾಜ್ಯಗಳನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರಕಾರ ರಾಜ್ಯಪಾಲರನ್ನು ದುರುಪಯೋಗಪಡಿಸುತ್ತಿದೆ ಎನ್ನುವ ವ್ಯಾಪಕ ಆಕ್ರೋಶ ತಮಿಳುನಾಡು, ಕೇರಳ ಮತ್ತು ಆಂಧ್ರಪದೇಶದಿಂದ ವ್ಯಕ್ತವಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ ಮತ್ತು ಕೇಂದ್ರ ಸರಕಾರ ನೇಮಿಸಿದ ರಾಜ್ಯಪಾಲರ ನಡುವೆ ನೇರನೇರ ಸಂಘರ್ಷ ಏರ್ಪಟ್ಟಿದೆ.

ರಾಜ್ಯಪಾಲರು ತಮ್ಮ ಲಕ್ಷ್ಮಣ ರೇಖೆಯನ್ನು ದಾಟಿ ಸರಕಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಈ ರಾಜ್ಯಗಳು ಆರೋಪಿಸುತ್ತಿವೆ. ರಾಜ್ಯಪಾಲರು ಸರಕಾರದ ಕಣ್ಗಾವಲಾಗಿ ಕೆಲಸ ಮಾಡಬೇಕು. ಆಯಾ ಸರಕಾರಗಳು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆಯೆ? ಎನ್ನುವುದನ್ನು ಪರಿಶೀಲಿಸುತ್ತಾ, ಪ್ರಜಾಸತ್ತೆಗೆ ಧಕ್ಕೆಯಾದಲ್ಲಿ ಅದಕ್ಕೆ ಸಂಬಂಧಿಸಿದ ವರದಿಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಸಲ್ಲಿಸಬೇಕು. ಒಂದು ರೀತಿಯಲ್ಲಿ ಸರಕಾರಕ್ಕೆ ಪೂರಕವಾಗಿ ಮಾರ್ಗದರ್ಶನದ ಕೆಲಸವನ್ನಷ್ಟೇ ರಾಜ್ಯಪಾಲರು ಮಾಡಬೇಕು. ಸರಕಾರ ದಾರಿತಪ್ಪಿದಾಗ ಅದನ್ನು ಎಚ್ಚರಿಸಬೇಕು. ಮತ್ತು ತೀರಾ ಸಾಂವಿಧಾನಿಕ ಬಿಕ್ಕಟ್ಟು ಏರ್ಪಟ್ಟಾಗ ಸರಕಾರದ ವಿರುದ್ಧ ರಾಜ್ಯಪಾಲರು ಶಿಫಾರಸು ಮಾಡಬಹುದು. ಆದರೆ ಕೇರಳ, ತಮಿಳುನಾಡಿನಲ್ಲಿ ನಡೆಯುತ್ತಿರುವುದೇ ಬೇರೆ. ಇಲ್ಲಿ ರಾಜ್ಯಪಾಲರು ರಾಜಕಾರಣಿಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮಿಳುನಾಡಿನಲ್ಲಿ, ರಾಜ್ಯಪಾಲ ಆರ್. ಎನ್ ರವಿ ತಮಿಳರ ಭಾವನೆಗಳನ್ನು ಕೆರಳಿಸುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯಪಾಲರು ವಿಭಜನಾತ್ಮಕ ರೀತಿಯ ಮಾತುಗಳನ್ನಾಡಿ ತನ್ನ ಸ್ಥಾನದ ಘನತೆಯನ್ನು ಕೆಡಿಸಿದ್ದಾರೆ ಎಂದು ಸರಕಾರ ಆರೋಪಿಸುತ್ತಿದೆ. ಅಷ್ಟೇ ಅಲ್ಲ, ರಾಜ್ಯಪಾಲರನ್ನು ವಜಾಗೊಳಿಸಿ ಎಂದು ರಾಷ್ಟ್ರಪತಿಯವರಿಗೆ ಪತ್ರವನ್ನೂ ಬರೆದಿದೆ.

ತಮಿಳುನಾಡಿನಲ್ಲಿ 20ಕ್ಕೂ ಅಧಿಕ ಮಸೂದೆಗಳು ರಾಜ್ಯಪಾಲರ ಅಂಕಿತಕ್ಕಾಗಿ ಕಾಯುತ್ತಿವೆ. ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ಅಂಗೀಕಾರಗೊಂಡಿದ್ದರೂ ನೀಟ್ ವಿನಾಯಿತಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸದ್ದಕ್ಕಾಗಿ ಡಿಎಂಕೆ ನಾಯಕರು ಆರ್.ಎನ್.ರವಿ ವಿರುದ್ಧ ಪ್ರತಿಭಟನೆಗಳನ್ನು ದಾಖಲಿಸಿದ್ದಾರೆ. ತೆಲಂಗಾಣದ ರಾಜ್ಯಪಾಲ ಸುಂದರ ರಾಜನ್ ಅವರು ತಮಿಳು ಅಸ್ಮಿತೆಯ ಕುರಿತಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಉಭಯ ರಾಜ್ಯಗಳ ನಡುವೆ ತಂದಿಡಲು ಯತ್ನಿಸಿದ್ದಾರೆ ಎಂದು ತಮಿಳು ನಾಡಿನ ರಾಜಕೀಯ ನಾಯಕರು ಆರೋಪಿಸುತ್ತಿದ್ದಾರೆ. ಇತ್ತ ಕೇರಳದಲ್ಲಂತೂ ರಾಜ್ಯಪಾಲ ಆರಿಫ್ ಖಾನ್, ತಮ್ಮ ಸ್ಥಾನದ ಎಲ್ಲ ಘನತೆಗಳನ್ನು ಗಾಳಿಗೆ ತೂರಿದ್ದಾರೆ. ರಾಜಕಾರಣಿಗಳ ಜೊತೆಗೆ ಸ್ಪರ್ಧೆಗಿಳಿದಿದ್ದಾರೆ. ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಎರಡು ನಿರ್ದಿಷ್ಟ ಮಾಧ್ಯಮಗಳನ್ನು ಹೊರ ನಡೆಯಲು ಹೇಳಿ, ಇನ್ನಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರೂ ಅವರ ವಿರುದ್ಧ ಬೀದಿಗಿಳಿಯುವಂತಾಗಿದೆ. ಅವರಿಡುತ್ತಿರುವ ಪ್ರತೀ ಹೆಜ್ಜೆಯೂ ರಾಜ್ಯ ಸರಕಾರಕ್ಕೆ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

 ಕೇಂದ್ರ ಮತ್ತು ರಾಜ್ಯಗಳ ನಡುವಿನ ಸೇತುವೆಯಾಗಿ ಕೆಲಸ ಮಾಡುವ ಮಹತ್ತರ ಹೊಣೆಗಾರಿಕೆ ರಾಜ್ಯಪಾಲರಿಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಗಳಲ್ಲಿ ಒಂದು. ದಕ್ಷಿಣದ ರಾಜ್ಯಗಳು ಈಗಾಗಲೇ ಉತ್ತರ ಭಾರತದ ಹೇರಿಕೆಗಳ ಕುರಿತಂತೆ ತೀವ್ರ ಅಸಮಾಧಾನವನ್ನು ಹೊಂದಿವೆೆ. ರಾಜ್ಯಪಾಲರ ಈ ನಿರಂಕುಶ ನಡವಳಿಕೆ, ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಬಿರುಕನ್ನು ಇನ್ನಷ್ಟು ಹಿರಿದಾಗಿಸುವ ಅಪಾಯವಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಎಲ್ಲ ಕ್ಷೇತ್ರಗಳಲ್ಲೂ ಭಾರೀ ಮುನ್ನಡೆಯನ್ನು ಸಾಧಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೇರಳ, ಆಂಧ್ರ, ಕರ್ನಾಟಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.

ಉತ್ತರ ಭಾರತದ ಅನಗತ್ಯ ಹೇರಿಕೆಗಳು ದಕ್ಷಿಣ ಭಾರತದ ಅಭಿವೃದ್ಧಿಯ ಮೇಲೆ ಪರಿಣಾಮವನ್ನು ಬೀರುವ ಸಾಧ್ಯತೆಗಳಿವೆ. ಇಲ್ಲಿರುವ ಸರಕಾರಗಳು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿವೆ. ಅವುಗಳು ಪ್ರಾದೇಶಿಕ ಭಾವನೆಗಳನ್ನು ಪ್ರತಿನಿಧಿಸುತ್ತಿವೆ. ಆ ಭಾವನೆಗಳನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರಕಾರ ನಿಯಂತ್ರಿಸಲು ಯತ್ನಿಸಿದರೆ. ಅದರ ದುಷ್ಪರಿಣಾಮ ಒಕ್ಕೂಟ ವ್ಯವಸ್ಥೆಯ ಮೇಲೆ ಬೀರುತ್ತದೆ. ಈ ಕಾರಣದಿಂದಲೇ, ಪರಿಸ್ಥಿತಿ ಕೈ ಮೀರುವ ಮೊದಲೇ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು. ರಾಜ್ಯಗಳ ಅಪೇಕ್ಷೆಯಂತೆ ರಾಜ್ಯಪಾಲರನ್ನು ವಜಾಗೊಳಿಸಿ, ಆ ಸ್ಥಾನದ ಘನತೆಯನ್ನು ಕಾಪಾಡಬಲ್ಲ ಮುತ್ಸದ್ದಿಗಳನ್ನು ನೇಮಿಸಬೇಕು.

Similar News