ಗುಜರಾತ್ ಮಾಜಿ ಸಿಎಂ, ಅವರ ಸಂಪುಟದ ಮೂವರು ಸಚಿವರಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ವರದಿ

Update: 2022-11-10 02:19 GMT

ಗಾಂಧಿನಗರ: ಗುಜರಾತ್‍ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Former CM Vijay Rupani) ಮತ್ತು ಅವರ ಸಂಪುಟ ಸಹೋದ್ಯೋಗಿ ಗಳಾಗಿದ್ದ ಮೂವರು ಸಚಿವರು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಇತರರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿರಿಯ ಪದಾಧಿಕಾರಿಗಳನ್ನು ಈ ಬಾರಿ ಕಣಕ್ಕೆ ಇಳಿಸುವುದಿಲ್ಲ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮತ್ತು ಪಕ್ಷದ ಅಭ್ಯರ್ಥಿಗಳನ್ನು ಅಂತಿಮಪಡಿಸಲು ಪಕ್ಷದ ಸಂಸದೀಯ ಮಂಡಳಿ ದೆಹಲಿಯಲ್ಲಿ ಸಭೆ ಸೇರಿದ್ದ ದಿನವೇ  ಈ ಮುಖಂಡರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ರೂಪಾನಿ ಜತೆಗೆ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಮಾಜಿ ಸಚಿವ ಭೂಪೇಂದ್ರ ಸಿಂಗ್ ಚೂಡಾಸಮ ಮತ್ತು ಪ್ರದೀಪ್ ಸಿನ್ಹ ಜಡೇಜಾ ಕೂಡಾ ಚುನಾವಣಾ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ರೂಪಾನಿಯವರು 2016ರಿಂದ 2021ರವರೆಗೆ ಸಿಎಂ ಆಗಿದ್ದರು. ನರೇಂದ್ರ ಮೋದಿಯವರು ಗೆದ್ದಿದ್ದ ಪ್ರತಿಷ್ಠಿತ ರಾಜಕೋಟ್ (ಪಶ್ಚಿಮ) ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. 

ಪಕ್ಷದ ಟಿಕೆಟ್‍ಗಾಗಿ ತಮ್ಮ ಹೆಸರನ್ನು ಪರಿಗಣಿಸದಂತೆ ಪಕ್ಷದ ಮುಖಂಡರಿಗೆ ಐದು ದಿನಗಳ ಹಿಂದೆ ಪತ್ರ ಬರೆದಿರುವುದಾಗಿ ರೂಪಾನಿ ವಿವರಿಸಿದರು. "ನಾನು ಐದು ವರ್ಷ ಕಾಲ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ ಹಾಗೂ ಪಕ್ಷದ ಸಂಸದ ಹಾಗೂ ಶಾಸಕನೂ ಆಗಿದ್ದೆ. ಪಕ್ಷ ನನ್ನ ಬದಲು ಬೇರೆ ಅಭ್ಯರ್ಥಿಯನ್ನು ಪರಿಗಣಿಸಬಹುದು ಹಾಗೂ ನನ್ನನ್ನು ಇತರ ರಾಜ್ಯಗಳಿಗೆ ಸಮಘಟನಾ ಕಾರ್ಯಕ್ಕೆ ನಿಯೋಜಿಸಬಹುದು" ಎಂದು ವಿವರಿಸಿದ್ದಾರೆ.

Similar News