×
Ad

ನ.14ರಿಂದ ಉಡುಪಿ ಜಿಲ್ಲೆಯಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ: ರಾಜೇಂದ್ರ ಕುಮಾರ್‌ಗೆ ಸಹಕಾರಿಗಳಿಂದ ಅಭಿನಂದನೆ

Update: 2022-11-10 20:00 IST

ಉಡುಪಿ, ನ.10: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನ.14ರಿಂದ 20ರವರೆಗೆ ಉಡುಪಿ ಜಿಲ್ಲಾಯಾದ್ಯಂತ ರಾಜ್ಯಮಟ್ಟದ 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ  ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ 75: ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ದೇಶದಾದ್ಯಂತ ಇದೇ ದಿನದಂದು ಆಚರಿಸಲಾಗುತ್ತಿದೆ ಎಂದರು.

ಈ ಬಾರಿಯ ಸಹಕಾರ ಸಪ್ತಾಹದ ಉದ್ಘಾಟನೆ ನ.14ರ ಸೋಮವಾರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸಮಸ್ತ ಸಹಕಾರಿಗಳ ಪರವಾಗಿ ಅಭಿನಂದನಾ ಕಾರ್ಯಕ್ರಮವೂ ನಡೆಯಲಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ನ.14ರಂದು ಬೆಳಗ್ಗೆ 7:30ಕ್ಕೆ ಉಡುಪಿ ಜಿಲ್ಲೆಯಲ್ಲಿರುವ 800ಕ್ಕೂ ಅಧಿಕ ಸಹಕಾರ ಸಂಸ್ಥೆಗಳಲ್ಲಿ ಸಹಕಾರ ಧ್ವಜಾರೋಹಣ ನಡೆದು ಬಳಿಕ ಸಹಕಾರ ಗೀತೆ ಮತ್ತು ನಾಡಗೀತೆಯನ್ನು ಹಾಡಲಾಗುತ್ತದೆ ಎಂದು ಹೇಳಿದರು. ಅನಂತರ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ನೌಕರರು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಕಾಪು ಮೂಳೂರಿಗೆ ಆಗಮಿಸಲಿದ್ದಾರೆ ಎಂದರು.

ಬೆಳಗ್ಗೆ 10ಗಂಟೆಗೆ ಮೂಳೂರಿನಿಂದ ಉಚ್ಚಿಲದ ಉದ್ಘಾಟನಾ ಸಮಾರಂಭ ನಡೆಯುವ ಸಭಾಭವನದವರೆಗೆ ವಾಹನಗಳ ಜಾಥಾ ಮತ್ತು ಮೆರವಣಿಗೆ ಮೂಲಕ ಡಾ.ರಾಜೇಂದ್ರಕುಮಾರ್ ಹಾಗೂ ಇತರ ಅತಿಥಿಗಳನ್ನು ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನಕ್ಕೆ ಕರೆತರಲಾಗುವುದು ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ 10,000ಕ್ಕೂ ಅಧಿಕ ಸಹಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಯಕರ ಶೆಟ್ಟಿ, ಡಾ.ರಾಜೇಂದ್ರಕುಮಾರ್ ಅವರು ಸಹಕಾರ ಸಪ್ತಾಹವನ್ನು ಉದ್ಘಾಟಿಸಿದರೆ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಚಿವರಾದ ಎಸ್.ಅಂಗಾರ, ವಿ.ಸುನಿಲ್‌ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಸಂಸದರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಬಳಿಕ ಸಹಕಾರಿ ಸಪ್ತಾಹದ ಕಾರ್ಯಕ್ರಮಗಳು ನ.15ರಂದು ಪಡುಬಿದ್ರಿ ಯಲ್ಲಿ, ನ.16ರಂದು ಕಾರ್ಕಳದಲ್ಲಿ, ನ.17ರಂದು ಉಡುಪಿಯ ಅಲೆವೂರಿನಲ್ಲಿ ಕೆಎಂಎಫ್‌ನ ಸಹಯೋಗದೊಂದಿಗೆ ನಡೆಯಲಿದೆ. ನ.18ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಈ ಬಾರಿಯ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ನ.19ರಂದು ಸಹಕಾರ ಸಪ್ತಾಹ ಕಾರ್ಯಕ್ರಮವು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಸಹಯೋಗದೊಂದಿಗೆ ನಗರದ ಪುರಭವನದಲ್ಲಿ ನಡೆದರೆ, ನ.20ರಂದು ಸಪ್ತಾಹದ ಸಮಾರೋಪ ಸಮಾರಂಭ ಕುಂದಾಪುರ ತಾಲೂಕು ಕಂಬದಕೋಣೆಯ ಉಪ್ಪುಂದದಲ್ಲಿ ಅಪರಾಹ್ನ 3:00ಗಂಟೆಗೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ದ.ಕ.ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಹಕಾರಿಗಳಾದ ಹರೀಶ್ ಕಿಣಿ, ಸುಧೀರ್‌ ಕುಮಾರ್ ಪಡುಬಿದ್ರಿ, ರಾಜೇಶ್ ರಾವ್ ಪಾಂಗಾಳ, ಅಶೋಕ್‌ಕುಮಾರ್ ಶೆಟ್ಟಿ, ಶ್ರೀಧರ ಪಿ.ಎಸ್. ಮುಂತಾದವರು ಉಪಸ್ಥಿತರಿದ್ದರು.

Similar News