ಭಿನ್ನ ದನಿಗೆ ಹೆಸರಾದ ದೇಶದ ಹೊಸ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್

ತಂದೆ ಬಳಿಕ ಅದೇ ಹುದ್ದೆಗೇರಿದ ಪುತ್ರ

Update: 2022-11-10 19:30 GMT

ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 9 ರಂದು ಬುಧವಾರ ಪ್ರಮಾಣ ವಚನ ಸ್ವೀಕರಿಸಿರುವ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಎಂದೇ ಖ್ಯಾತರಾಗಿರುವವರು ಧನಂಜಯ ಯಶವಂತ ಚಂದ್ರಚೂಡ್. ದೇಶದ 16ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ.ವೈ.ವಿ.ಚಂದ್ರಚೂಡ್ ಅವರ ಪುತ್ರ. ತಾಯಿ ಪ್ರಭಾ ಚಂದ್ರಚೂಡ್ ಆಕಾಶವಾಣಿಯಲ್ಲಿ ಗಾಯಕಿಯಾಗಿದ್ದರು.

ತಂದೆಯ ಹೆಜ್ಜೆ ಜಾಡಿನಲ್ಲಿ ನಡೆದಿರುವ ನ್ಯಾ.ಚಂದ್ರಚೂಡ್, 1978ರಿಂದ 1985ರವರೆಗೆ ಅತಿ ದೀರ್ಘ ಅವಧಿಗೆ ತಂದೆ ಅಲಂಕರಿಸಿದ್ದ ಈ ಹುದ್ದೆಯನ್ನು 44 ವರ್ಷಗಳ ಬಳಿಕ ವಹಿಸಿಕೊಂಡಿದ್ದಾರೆ. ಇದರೊಂದಿಗೆ, ತಂದೆ ನಿರ್ವಹಿಸಿದ್ದ ಸಿಜೆಐ ಹುದ್ದೆಗೆ ಏರುತ್ತಿರುವ ಮೊದಲ ನ್ಯಾಯಾಧೀಶರೆಂಬ ಹೆಗ್ಗಳಿಕೆಯೂ ಅವರದಾಗಿದೆ. 2024ರ ನವೆಂಬರ್ 10ರವರೆಗೆ ಚಂದ್ರಚೂಡ್ ಅವರು ಈ ಹುದ್ದೆಯಲ್ಲಿರಲಿದ್ದಾರೆ.
ನ್ಯಾ.ಚಂದ್ರಚೂಡ್ ಅವರು ಭಿನ್ನ ದನಿಗೆ ಹೆಸರಾದವರು. ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷಾ ಕವಾಟ ಎಂಬುದು ಅವರ ವ್ಯಾಖ್ಯಾನ. ಭಿನ್ನಾಭಿಪ್ರಾಯವನ್ನು ರಾಷ್ಟ್ರವಿರೋಧಿ ಅಥವಾ ಪ್ರಜಾಪ್ರಭುತ್ವ ವಿರೋಧಿ ಎಂದು ಲೇಬಲ್ ಅಂಟಿಸುವುದರ ವಿರುದ್ಧ ಅವರು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ರಾಜ್ಯ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತದೆ. ಏಕೆಂದರೆ ಅದು ಭಯವನ್ನು ಹುಟ್ಟುಹಾಕುತ್ತದೆ ಮತ್ತು ದನಿ ತಣ್ಣಗಾಗುವಂತೆ ಮಾಡುತ್ತದೆ ಎಂಬ ಮಾತುಗಳನ್ನು ಅವರು, ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದ ಸಂದರ್ಭದಲ್ಲಿ ಹೇಳಿದ್ದರು.

ಪ್ರಶ್ನೆ ಮತ್ತು ಭಿನ್ನಾಭಿಪ್ರಾಯಗಳ ನಾಶವು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ -ಈ ಎಲ್ಲಾ ಬೆಳವಣಿಗೆಯ ಮೂಲವನ್ನೇ ನಾಶಪಡಿಸುತ್ತದೆ. ಈ ಅರ್ಥದಲ್ಲಿ, ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟವಾಗಿದೆ. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದಿದ್ದರೆ, ಅದು ಸಿಡಿಯಬಹುದು ಎಂಬ ಅಭಿಮತ ಅವರದು. ಅವರ ದೃಷ್ಟಿಯಲ್ಲಿ, ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯೆಂದರೆ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡುವ ಅದರ ಸಾಮರ್ಥ್ಯ. 1959ರ ನವೆಂಬರ್ 11ರಂದು ಜನಿಸಿದ ನ್ಯಾ. ಚಂದ್ರಚೂಡ್ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. 1979ರಲ್ಲಿ ದಿಲ್ಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದರು. ದಿಲ್ಲಿ ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪದವಿ 1982ರಲ್ಲಿ ಪೂರ್ಣಗೊಳಿಸಿದ ಅವರು ಎಲ್‌ಎಲ್‌ಎಂ ಪದವಿ ಪಡೆದದ್ದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ. ಬಳಿಕ ಅದೇ ವಿವಿಯಿಂದ ಡಾಕ್ಟರ್ ಆಫ್ ಜುರಿಡಿಕಲ್ ಸೈನ್ಸಸ್ (ಎಸ್‌ಜೆಡಿ) ಎಂಬ ಅತ್ಯುನ್ನತ ಪದವಿ ಪಡೆದರು. 1998ರಲ್ಲಿ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಯಾದರು. ಅದೇ ವರ್ಷ 1998ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕವಾದರು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು, ಮಹಿಳಾ ಜೀತ ಕಾರ್ಮಿಕರ ಹಕ್ಕುಗಳು, ಕೆಲಸದ ಸ್ಥಳದಲ್ಲಿ ಎಚ್‌ಐವಿ ಪೀಡಿತರ ಹಕ್ಕುಗಳು, ಗುತ್ತಿಗೆ ಕಾರ್ಮಿಕರ ಹಕ್ಕುಗಳು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ತೀವ್ರ ಕಾನೂನು ಹೋರಾಟಗಳಲ್ಲಿ ಭಾಗಿಯಾದವರು. 63 ವರ್ಷದ ನ್ಯಾ.ಚಂದ್ರಚೂಡ್ ಅವರು ಬಾಂಬೆ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ 2000ರ ಮಾರ್ಚ್ 29ರಂದು ನೇಮಕಗೊಂಡರು. 2013ರ ಅಕ್ಟೋಬರ್ 31ರಂದು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ. 2016ರ ಮೇ 13ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ.

ಪ್ರಮುಖ ತೀರ್ಪುಗಳು:

ಉದಾರ ಮತ್ತು ಪ್ರಗತಿಪರ ತೀರ್ಪುಗಳಿಗೆ ಹೆಸರಾದವರು ನ್ಯಾ. ಚಂದ್ರಚೂಡ್. ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯಾಧಾರಿತ ಸಮಾಜದ ಆಮೂಲಾಗ್ರ ಬದಲಾವಣೆಯ ಆಶಯವುಳ್ಳ ದೃಷ್ಟಿಕೋನ ಅವರದು. ಆಳುವವರ ವಿರುದ್ಧ ಭಿನ್ನ ತೀರ್ಪುಗಳು ಸೇರಿದಂತೆ ಹಲವು ಗಮನಾರ್ಹ ತೀರ್ಪುಗಳನ್ನು ಅವರು ನೀಡಿದ್ದಾರೆ. ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ, ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದು ‘ಅಸಾಂವಿಧಾನಿಕ’ ಎಂದು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಏಕೈಕ ನ್ಯಾಯಮೂರ್ತಿ ಅವರಾಗಿದ್ದರು. ಆಧಾರ್ ಮಸೂದೆಯನ್ನು ಹಣದ ಮಸೂದೆಯಾಗಿ ಅಂಗೀಕರಿಸುವುದು ಸಂವಿಧಾನಕ್ಕೆ ಎಸಗಿದ ವಂಚನೆಯಾಗಿದೆ, ಹಣದ ಮಸೂದೆಯು ತೆರಿಗೆ-ಸಂಬಂಧಿತ ಸಮಸ್ಯೆಗಳೊಂದಿಗೆ ಮಾತ್ರ ವ್ಯವಹರಿಸಬೇಕು, ಆದರೆ ಆಧಾರ್ ಅದರ ವ್ಯಾಪ್ತಿಯಲ್ಲಿ ವಿಶಾಲವಾಗಿದೆ ಎಂದು ಹೇಳಿದ್ದರು. ಇದಲ್ಲದೆ, ಮಾಹಿತಿ ಗೌಪ್ಯತೆ ಮತ್ತು ಡೇಟಾ ರಕ್ಷಣೆಯನ್ನು ಉಲ್ಲಂಘಿಸುವ ಮೂಲಕ, ಆಧಾರ್ ಯೋಜನೆಯಲ್ಲಿ ನಿಯೋಜಿಸಲಾದ ತಂತ್ರಜ್ಞಾನವು ವ್ಯಕ್ತಿಯ ವಿಭಿನ್ನ ಸಾಂವಿಧಾನಿಕ ಗುರುತುಗಳನ್ನು 12 ಅಂಕಿಯ ಏಕೈಕ ಗುರುತಾಗಿಸುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಸಾಮೂಹಿಕ ಸಾಮಾಜಿಕ ನೈತಿಕತೆಯ ಮೇಲೆ ವ್ಯಕ್ತಿಯ ಹಕ್ಕುಗಳಿಗೆ ಪ್ರಾಮುಖ್ಯತೆಯನ್ನು ನೀಡುವ ನ್ಯಾ. ಚಂದ್ರಚೂಡ್, ವ್ಯಕ್ತಿಯು ಸಂವಿಧಾನದ ಮೂಲ ಘಟಕ. ಸಂವಿಧಾನದ ಎಲ್ಲ ಹಕ್ಕುಗಳು ಮತ್ತು ಖಾತರಿಗಳು ವ್ಯಕ್ತಿಯ ಸ್ವಯಂ ಸಾಕ್ಷಾತ್ಕಾರದ ಗುರಿಯನ್ನು ಹೊಂದಿವೆ ಎಂದು ಶಬರಿಮಲೆ ಪ್ರಕರಣದ ತೀರ್ಪಿನಲ್ಲಿ ಬರೆದಿದ್ದಾರೆ. ಶಬರಿಮಲೆ ದೇಗುಲ ಪ್ರವೇಶ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು 10-50 ವರ್ಷದೊಳಗಿನ ಮಹಿಳೆಯರನ್ನು ಶಬರಿಮಲೆ ದೇವಸ್ಥಾನದಿಂದ ಹೊರಗಿಡುವುದು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟರು. ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶದ ಹಕ್ಕು ಎತ್ತಿಹಿಡಿದ ತೀರ್ಪು ಅದು.

ಇನ್ನೊಂದು ಮಹತ್ವದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎ.ಎಸ್. ಬೋಪಣ್ಣ ಮತ್ತು ಜೆ.ಬಿ. ಪರ್ದಿವಾಲ ಅವರ ಪೀಠವು ಅವಿವಾಹಿತ ಮಹಿಳೆಯರನ್ನು ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯ್ದೆ(ಎಂಟಿಪಿ)ಯಲ್ಲಿ ಸೇರಿಸಿತು ಮತ್ತು ಅವಿವಾಹಿತ ಮಹಿಳೆಯರನ್ನು ಕಾಯ್ದೆಯಿಂದ ಹೊರಗಿಡುವುದು ತಾರತಮ್ಯ ಎಂದು ಹೇಳಿತು. 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶವಿರುವಂತೆ ಅವಿವಾಹಿತ ಮಹಿಳೆಯರ ಹಕ್ಕನ್ನು ತೀರ್ಪು ಎತ್ತಿಹಿಡಿದಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಿದ ತೀರ್ಪಿನ ಭಾಗವಾಗಿದ್ದರು ನ್ಯಾ.ಚಂದ್ರಚೂಡ್. ಎಂಟಿಪಿ ಕಾಯ್ದೆಯು ಗಂಡನ ಲೈಂಗಿಕ ದೌರ್ಜನ್ಯ ಅಥವಾ ಬಲವಂತದ ಸಂಭೋಗವನ್ನು ತನ್ನ ಹೆಂಡತಿಯ ಮೇಲೆ ‘ಅತ್ಯಾಚಾರ’ ಎಂದು ಗುರುತಿಸುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದರು. ಲಿಂಗ ತಾರತಮ್ಯದ ವಿರುದ್ಧ ಫೆಬ್ರವರಿ 2020ರಲ್ಲಿ ಧ್ವನಿಯೆತ್ತಿದ ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು, ಸೇನೆಯಲ್ಲಿ ಮಹಿಳಾ ಅಧಿಕಾರಿಗಳು ಶಾಶ್ವತ ಆಯೋಗ ಮತ್ತು ಕಮಾಂಡ್ ಪೋಸ್ಟಿಂಗ್‌ಗಳನ್ನು ಪಡೆಯುವುದರ ಪರವಾಗಿ ತೀರ್ಪು ನೀಡಿತು.

2018ರ ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಾದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರ ಪೀಠವು, ಅಖಿಲಾ ಅಶೋಕನ್ (ತನ್ನ ಹೆಸರನ್ನು ಹಾದಿಯಾ ಎಂದು ಬದಲಾಯಿಸಿಕೊಂಡಿದ್ದಾಕೆ) ಮತ್ತು ಶಫಿನ್ ಜಹಾನ್ ಅವರ ವಿವಾಹವನ್ನು ಅಸಿಂಧು ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಈ ಪ್ರಕರಣದಲ್ಲಿ ಎನ್‌ಐಎ ತನಿಖೆಯನ್ನು ಮುಂದುವರಿಸಬಹುದು ಎಂದು ಹೇಳಿದ ನ್ಯಾಯಾಲಯ, ಮದುವೆ ಮತ್ತು ಧರ್ಮವನ್ನು ಬದಲಾಯಿಸುವ ಬಗ್ಗೆ ನಿರ್ಧರಿಸುವ ಸ್ವಾತಂತ್ರ್ಯವು ಅವರ ಖಾಸಗಿತನ ಮತ್ತು ಸ್ವಾತಂತ್ರ್ಯದ ಹಕ್ಕು ಎಂದು ಎತ್ತಿಹಿಡಿಯಿತು.

ವೈಯಕ್ತಿಕ ಸ್ವಾತಂತ್ರ್ಯ ನ್ಯಾ.ಚಂದ್ರಚೂಡ್ ಅವರ ಪ್ರಿಯವಾದ ಮೌಲ್ಯ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರ ಪೀಠದಲ್ಲಿ ಏಕೈಕ ಭಿನ್ನಾಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಸಂವಿಧಾನದ 19 ಮತ್ತು 21ನೇ ವಿಧಿಗಳು ಖಾತರಿಪಡಿಸಿದ ಮುಕ್ತ ಅಭಿವ್ಯಕ್ತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಈ ಬಂಧನದಲ್ಲಿ ಉಲ್ಲಂಘಿಸಲಾಗಿದೆಯೆ ಎಂಬ ಪ್ರಶ್ನೆಯನ್ನು ಎತ್ತಿದ್ದ ಅವರು, ಮಹಾರಾಷ್ಟ್ರ ಪೊಲೀಸರ ನಿಷ್ಪಕ್ಷತೆಯನ್ನು ಅನುಮಾನಿಸಿದ್ದರು. ಈ ಪ್ರಕರಣದಲ್ಲಿ ಸ್ವತಂತ್ರ ಮತ್ತು ನ್ಯಾಯಯುತ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯ ಅಗತ್ಯವಿದೆ ಎಂಬುದನ್ನು ಎತ್ತಿಹಿಡಿದಿದ್ದರು. ತನಿಖೆಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ಅವರು ಬಯಸಿದ್ದರು. ಜನಪ್ರಿಯವಲ್ಲದ ಕಾರಣಗಳನ್ನು ಕೈಗೆತ್ತಿಕೊಳ್ಳುವವರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಜಾಗರೂಕವಾಗಿರಬೇಕು. ವಿರೋಧದ ಧ್ವನಿಯನ್ನು ಮುಗಿಸಲು ಆಗದು. ಯಾಕೆಂದರೆ ಅದು ಭಿನ್ನವಾದದ್ದು ಎಂದು ತೀರ್ಪಿನಲ್ಲಿ ಬರೆದಿದ್ದರು.

ಸಮ್ಮತ ಸಲಿಂಗಕಾಮ ಅಪರಾಧವಲ್ಲ ಎಂಬ ಅವರ ತೀರ್ಪು, ಭಾರತೀಯ ಸಂವಿಧಾನ ಒಂದು ಶ್ರೇಷ್ಠ ಸಾಮಾಜಿಕ ದಾಖಲೆಯಾಗಿದ್ದು, ಮಧ್ಯಕಾಲೀನ, ಶ್ರೇಣೀಕೃತ ಸಮಾಜವನ್ನು ಆಧುನಿಕ, ಸಮಾನತೆಯ ಪ್ರಜಾಪ್ರಭುತ್ವವಾಗಿ ಪರಿವರ್ತಿಸುವ ಗುರಿಯಲ್ಲಿ ಬಹುತೇಕ ಕ್ರಾಂತಿಕಾರಿ ಎಂದು ಬಣ್ಣಿಸಿದೆ. ಆಗಸ್ಟ್ 2017ರ ಆ ತೀರ್ಪಿನಲ್ಲಿ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ನ್ಯಾ.ಚಂದ್ರಚೂಡ್ ಅವರಿದ್ದ ಪೀಠ ಹೇಳಿತ್ತು. ಸಂವಿಧಾನವನ್ನು, ಅಧಿಕಾರ ಪ್ರಾಬಲ್ಯದ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮತ್ತು ನಾಗರಿಕರ ಘನತೆ, ಸಮಾನತೆಯ ಮೌಲ್ಯಗಳಿಗೆ ಭದ್ರತೆಯೊದಗಿಸುವಂತೆ ವ್ಯಾಖ್ಯಾನಿಸಬೇಕು ಎಂದು ಇನ್ನೊಂದು ತೀರ್ಪಿನ ವೇಳೆ ಹೇಳಿದ್ದಾರೆ ನ್ಯಾ.ಚಂದ್ರಚೂಡ್. ನ್ಯಾ. ಚಂದ್ರಚೂಡ್ ಅವರ ಸಂವಾದಾತ್ಮಕ ನ್ಯಾಯಾಂಗ ವಿಮರ್ಶೆ ಎಂಬ ಪರಿಕಲ್ಪನೆಯು, ಸರಕಾರವನ್ನು ಅದರ ನಿರ್ಧಾರಗಳ ವಿಚಾರವಾಗಿ ಪ್ರಶ್ನಿಸುತ್ತದೆ ಮತ್ತು ಸಮರ್ಥನೆ ಒದಗಿಸುವಂತೆ ಕೇಳುತ್ತದೆ. ಕೋವಿಡ್ ಸಂಬಂಧದ ಸ್ವಯಂ ಪ್ರೇರಿತ ಪ್ರಕರಣದ ತೀರ್ಪಿನಲ್ಲಿ ನ್ಯಾಯಾಲಯವು ಸರಕಾರದ ಲಸಿಕೆ ನೀತಿ ಬಗ್ಗೆ ಸಂದೇಹ ವ್ಯಕ್ತಪಡಿಸಿತ್ತು.

ಸರಕಾರವನ್ನು ಪ್ರಶ್ನಿಸಿದ್ದ ನ್ಯಾ.ಚಂದ್ರಚೂಡ್ ನೇತೃತ್ವದ ಪೀಠ, ಲಸಿಕೆಗಳ ಖರೀದಿಗಾಗಿನ ಬಜೆಟ್ ಹಂಚಿಕೆಯ ಬಳಕೆಯ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಿದ ಬಳಿಕ ಸರಕಾರ ತನ್ನ ಲಸಿಕೆ ನೀತಿಯನ್ನು ಬದಲಿಸಿತ್ತು. ನಾಗರಿಕರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗ ನ್ಯಾಯಾಂಗವು ಸುಮ್ಮನೆ ಕೂತಿರಲು ಸಾಧ್ಯವಿಲ್ಲ, ಸರಕಾರವು ರೂಪಿಸಿದ ನೀತಿಗಳಿಗೆ ನ್ಯಾಯಾಂಗ ಪರಿಶೀಲನೆ ಮತ್ತು ಸಾಂವಿಧಾನಿಕ ಸಮರ್ಥನೆಯನ್ನು ಕೋರುವುದು ಅತ್ಯಗತ್ಯ. ಇದರ ನಿರ್ವಹಣೆಯನ್ನು ನ್ಯಾಯಾಲಯಗಳಿಗೆ ವಹಿಸಲಾಗಿದೆ ಎಂದು ಪೀಠ ಹೇಳಿತ್ತು. ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ರೂಪಾಂತರವನ್ನು ಪ್ರತಿಪಾದಿಸುವ, ಸಾಂಪ್ರದಾಯಿಕ ಏಕರೂಪತೆಯನ್ನು ಮುರಿಯುವ ಆಶಯದ, ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಒಲವುಳ್ಳ ಮತ್ತು ಭಿನ್ನಾಭಿಪ್ರಾಯದ ಶಕ್ತಿಯನ್ನು ಗೌರವಿಸುವ ಅವರೂಪದ ವ್ಯಕ್ತಿತ್ವ ನ್ಯಾ. ಚಂದ್ರಚೂಡ್ ಅವರದು. ದೇಶದ ಎದುರು ಹಲವು ಬಗೆಯ ಸವಾಲುಗಳಿರುವ ಹೊತ್ತಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿರುವ ಅವರೆದುರು ಇರುವ ಸವಾಲುಗಳು ಸಣ್ಣವಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಅದರ ಪಾತ್ರದ ಕುರಿತು ಹತ್ತು ಹಲವು ಪ್ರಶ್ನೆಗಳು ಜನರನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ನ್ಯಾಯಾಂಗದ ಕುರಿತ ನಂಬಿಕೆ ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ.

ನ್ಯಾ.ಚಂದ್ರಚೂಡ್ ಅವರ ಆದೇಶ ಮತ್ತು ಅವರು ವ್ಯಕ್ತಪಡಿಸುವ ನಿಲುವುಗಳು ಹಲವರ ಅಸಮಾಧಾನಕ್ಕೂ ಕಾರಣವಾಗಿವೆಯೆಂಬುದಕ್ಕೆ ಇತ್ತೀಚೆಗೆ ಅವರ ವಿರುದ್ಧ ಹೊರಿಸಲಾಗಿದ್ದ ಸುಳ್ಳು ಆರೋಪವೇ ಸಾಕ್ಷಿ. ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುವ ವಿಚಾರ ಬಹಿರಂಗವಾಗುತ್ತಿದ್ದಂತೆ ಅವರ ವಿರುದ್ಧ ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಹರಿದಾಡತೊಡಗಿತು. ಅವರು ಅಮೆರಿಕದಲ್ಲಿ ನೆಲೆಸಿ ಕೆಲಸ ಮಾಡಲು ಅರ್ಹತೆ ಕಲ್ಪಿಸುವ ಗ್ರೀನ್ ಕಾರ್ಡ್ ಹೊಂದಿದ್ದಾರೆ ಎಂಬ ವಿಚಾರ ಟ್ವಿಟರ್‌ನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು. ಈ ಕುರಿತು ‘ಬಾರ್ ಆ್ಯಂಡ್ ಬೆಂಚ್’ ಸುದ್ದಿಯ ನೈಜತೆ ಪರಿಶೀಲಿಸಿದ್ದು, ನ್ಯಾ. ಚಂದ್ರಚೂಡ್ ಅವರು ಗ್ರೀನ್ ಕಾರ್ಡ್ ಹೊಂದಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

Similar News