ಮೂಡಬಿದಿರೆ | ರೈತರ ಬೇಡಿಕೆ ಈಡೇರದಿದ್ದರೆ ನ.28ರಂದು ಕಿಸಾನ್ ಘಟಕದಿಂದ ಪ್ರತಿಭಟನೆ: ಮಿಥುನ್ ರೈ

Update: 2022-11-11 07:00 GMT

ಮಂಗಳೂರು, ನ.11: ಮೂಡಬಿದ್ರೆಯಲ್ಲಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನ. 10ರಂದು ಪಕ್ಷಾತೀತ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯ ಸರಕಾರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸದಿದ್ದರೆ ನ. 28ರಂದು ಮೂಡಬಿದ್ರೆ ಕಿಸಾನ್ ಘಟಕದ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗುರುವಾರ ಮೂಡಬಿದಿರೆ ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ ಎಂದರು.

ಅಕ್ರಮ ಸಕ್ರಮೀಕರಣ ಕಾಯಿದೆಯಡಿ ಅರ್ಜಿ ನಮೂನೆ 50,53, 57ರಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೆ ತಕ್ಷಣ ತಮ್ಮ ಸ್ವಾಧೀನದ ಕೃಷಿ ಭೂಮಿಯನ್ನು ಒದಗಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. 94 ಸಿ, 94 ಸಿಸಿ ಯಡಿ ಅರ್ಜಿ ಸಲ್ಲಿಸಿರುವ ಬಡವರಿಗೆ ಮನೆಯ ಹಕ್ಕು ಪತ್ರ ಒದಗಿಸಬೇಕು. ಮನಪಾ, ಪಟ್ಟಣ ಪಂಚಾಯತ್, ನಗರ ಪಂಚಾಯತ್, ಪುರಸಭೆ ವ್ಯಾಪ್ತಿಯ 3 ಕಿ.ಮೀ. ವ್ಯಾಪ್ತಿಯ ಒಳಗೆ ಅಕ್ರಮ- ಸಕ್ರಮ ಅರ್ಜಿ ಸಲ್ಲಿಸಿರುವ ರೈತರಿಗೆ ತಮ್ಮ ಸ್ವಾಧೀನದ ಭೂಮಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟಿಸಿದ್ದು, ಈ ಬೇಡಿಕೆಯನ್ನು ಸರಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.

ರೈತರ ಜಮೀನಿನಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವ ರೈತ ವಿರೋಧಿ ಕೃತ್ಯಗಳ ವಿರುದ್ಧ ರೈತರ ಪರವಾಗಿ ಕಾಂಗ್ರೆಸ್ ಹೋರಾಟವನ್ನು ನಿರಂತವಾಗಿ ಮುಂದುವರಿಸಲಿದೆ. ಬಳ್ಕುಂಜೆಯ 1000 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ ವಿಚಾರದ ಬಗ್ಗೆಯೂ ಕಾಂಗ್ರೆಸ್ ರೈತರ ಪರ ಹೋರಾಡಲಿದೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರೈತರ ಹೋರಾಟವನ್ನು ಬೆಂಬಲಿಸುವುದಲ್ಲದೆ, ಜಿಲ್ಲೆ, ರಾಜ್ಯ ಮಟ್ಟದಲ್ಲಿಯೂ ಪ್ರತಿಭಟನೆ ಮುಂದುವರಿಯಲಿದೆ ಎಂದರು.

ಸುರತ್ಕಲ್ ಟೋಲ್ ತೆರವು: ಸಂಸದ ನಳಿನ್ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ

ಕಳೆದ 15 ದಿನಗಳಿಂದ ಸುರತ್ಕಲ್ ಟೋಲ್ ತೆರವು ಹೋರಾಟ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಡೆಯುತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲು 15 ದಿನಗಳಲ್ಲಿ ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ ಗಡುವು ನ. 7ಕ್ಕೆ ಕೊನೆಗೊಂಡಿದೆ. ಆದರೆ ಟೋಲ್ ತೆರವು ಆಗಿಲ್ಲ. ಅವರ ಮಾತಿನಲ್ಲಿ ಸತ್ಯಾಂಶ ಇಲ್ಲ. ಸರಕಾರವೇ ಸುಳ್ಳಿನ ಸರಕಾರ. ಇದು ತುಳುನಾಡಿನ ಜನರ ಹೋರಾಟವಾಗಿದ್ದು, ಟೋಲ್ ತೆರವುಗೊಳ್ಳುವವರೆಗೆ ಮುಂದುವರಿಯಲಿದೆ ಎಂದು ಮಿಥುನ್ ರೈ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ವಲೇರಿಯನ್ ಸಿಕ್ವೇರಾ, ರಾಜೇಶ್ ಕಡಲ್ಕೆರೆ ಉಪಸ್ಥಿತರಿದ್ದರು.

Similar News