ಅಸದುದ್ದೀನ್ ಉವೈಸಿ ಕಾರಿನತ್ತ ಗುಂಡು ಹಾರಿಸಿದ್ದ ಇಬ್ಬರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Update: 2022-11-11 13:59 GMT

ಹೊಸದಿಲ್ಲಿ,ನ.11: ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿಯವರ ಕಾರಿಗೆ ಗುಂಡು ಹಾರಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಇಬ್ಬರು ಆರೋಪಿಗಳಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಮಂಜೂರು ಮಾಡಿದ್ದ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ರದ್ದುಗೊಳಿಸಿದೆ.

ಫೆ.3ರಂದು ಉವೈಸಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗಾಗಿ ಮೀರತ್ನಲ್ಲಿ ಪ್ರಚಾರ ಕಾರ್ಯಕ್ರಮದ ಬಳಿಕ ದಿಲ್ಲಿಗೆ ವಾಪಸಾಗುತ್ತಿದ್ದಾಗ ಹಾಪುರದಲ್ಲಿ ಅವರ ಕಾರಿನತ್ತ ಹಲವಾರು ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎಂ.ಎಂ.ಸುಂದರೇಶ ಅವರ ಪೀಠವು ಆರೋಪಿಗಳಿಗೆ ಶರಣಾಗಲು ಒಂದು ವಾರ ಕಾಲಾವಕಾಶವನ್ನು ನೀಡಿತು.

ದಾಳಿಯಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಸಚಿನ ಶರ್ಮಾ,ಶುಭಂ ಗುರ್ಜರ್ ಮತ್ತು ಆಲಿಮ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದರು. ಆಲಿಮ್ಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೆಪ್ಟಂಬರ್ನಲ್ಲಿ ವಜಾಗೊಳಿಸಿತ್ತು.

ಶರ್ಮಾ ಮತ್ತು ಗುರ್ಜರ್ಗೆ ಜಾಮೀನು ನೀಡಲು ಯಾವುದೇ ಕಾರಣವನ್ನು ಉಚ್ಚ ನ್ಯಾಯಾಲಯವು ಉಲ್ಲೇಖಿಸಿಲ್ಲ ಎಂದು ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಗಮನಿಸಿದ ಸರ್ವೋಚ್ಚ ನ್ಯಾಯಾಲಯವು, ಮೇಲ್ನೋಟದ ಸಾಕ್ಷ್ಯಗಳನ್ನಾಗಲೀ ದೋಷಾರೋಪ ಪಟ್ಟಿಯನ್ನಾಗಲೀ ಪರಿಗಣಿಸಲಾಗಿಲ್ಲ ಎಂದು ಹೇಳಿತು.

Similar News