‘ಕಾಂತಾರ’ದಲ್ಲಿ ಪರಿಶಿಷ್ಟ ಜಾತಿಯನ್ನು ಕೀಳಾಗಿ ಚಿತ್ರಿಸಲಾಗಿದೆ: ಸಮತಾ ಸೈನಿಕ ದಳ ಆರೋಪ

Update: 2022-11-11 15:02 GMT

ಮಂಗಳೂರು: ಕನ್ನಡ ಚಲನ ಚಿತ್ರ ‘ಕಾಂತಾರ’ದಲ್ಲಿ ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ಅತ್ಯಂತ ಕೀಳಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ. ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ಚಲನ ಚಿತ್ರದಲ್ಲಿರುವ ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ತಕ್ಷಣವೇ ಕತ್ತರಿಸಲು ಮತ್ತು ಅಲ್ಲಿಯವರೆಗೆ ಚಿತ್ರವನ್ನು ಸಾರ್ವಜನಿಕ ಪ್ರದರ್ಶನವನ್ನು ಸ್ಥಗಿತಗೊಳಿಸಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ವ್ಯಕ್ತಿಗಳು ಮತ್ತು ಸಂಘಟನೆಗಳ ಮೂಲಕ ದ.ಕ. ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದರು.

‘ಕಾಂತಾರ’ ಚಲನಚಿತ್ರದ ಹಲವಾರು ದೃಶ್ಯಗಳಲ್ಲಿ ತುಳುನಾಡಿನ ಸಂಸ್ಕೃತಿಯ ಮಹತ್ವ ಪೂರ್ಣ ಭಾಗವಾಗಿರುವ ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ದೈವಗಳ ನರ್ತಕ ಸಮುದಾಯವನ್ನು, ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಮತ್ತು ಯುವ ಜನರನ್ನು, ಅತ್ಯಂತ ಕೀಳಾಗಿ ಚಿತ್ರೀಕರಿಸಿ ಅವಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಇದಲ್ಲದೆ, ಸಮಾಜದ ಎಲ್ಲಾ ಜಾತಿ, ಧರ್ಮಗಳ ಜನರ ಸಹಭಾಗಿತ್ವದಲ್ಲಿ ಸೌಹಾರ್ಧಯುತವಾಗಿ ನಡೆಯುವ ದೈವಾರಾಧನೆಯನ್ನು ಈ ಚಲನಚಿತ್ರದಲ್ಲಿ ವಿಕೃತಗೊಳಿಸಿ, ಮಾನವ ವಿರೋಧಿ, ಕಾನೂನು ವಿರೋಧಿ ಹಿಂಸೆಗೆ ಪ್ರಚೋದನೆ ನೀಡಲಾಗಿದೆ. ಇದರಿಂದ ದೈವ ನಿಂದನೆಯೂ ಆಗಿದೆ. ‘ಕಾಂತಾರ’ ಎಲ್ಲೆಡೆ, ಅದರಲ್ಲೂ ಮುಖ್ಯವಾಗಿ ದ.ಕ. ಜಿಲ್ಲೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವುದರಿಂದ ದಲಿತ (ಪ.ಜಾ., ಪ.ಬು.) ಸಮುದಾಯಗಳನ್ನು ಸಾರ್ವಜನಿಕರು ಅತ್ಯಂತ ಕೀಳಾಗಿ, ಅವಮಾನಕರವಾಗಿ ನೋಡುವಂತಾಗಿದೆ, ನಗುವಂತಾಗಿದೆ. ಈ ಚಲನಚಿತ್ರ ಪ್ರದರ್ಶನದಿಂದಾಗಿ ಈ ಶೋಷಿತ ಸಮುದಾಯಗಳು ತೀವ್ರ ನೋವು, ಅವಮಾನ, ಆತಂಕ ಅನುಭವಿಸುವಂತಾಗಿದೆ. ಅವರ ಶಾಂತಿ ನೆಮ್ಮದಿಯ ಬದುಕಿಗೆ ಭಂಗವುಂಟಾಗಿದೆ ಎಂದು ಅವರು ಹೇಳಿದರು.

ಪರಿಶಿಷ್ಟ ಸಮುದಾಯದ ಬದುಕನ್ನು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಯುವಜನರನ್ನು, ಅತ್ಯಂತ ಕೀಳಾಗಿ ಚಿತ್ರಿಸಿ, ಅವರನ್ನು ಅವಮಾನ ಮಾಡಿ, ಅವರ ಬದುಕಿನ ಶಾಂತಿ ನೆಮ್ಮದಿಗೆ ಭಂಗ ತಂದಿರುವ, ತರುತ್ತಲೇ ಇರುವ ಕನ್ನಡ ಚಲನಚಿತ್ರ ‘ಕಾಂತಾರ’ದಲ್ಲಿರುವ ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ನಿಯಮಾನುಸಾರ ಕತ್ತರಿಸಲು ಮತ್ತು ಅಲ್ಲಿಯವರೆಗೆ ಈ ಚಲನಚಿತ್ರದ ಸಾರ್ವಜನಿಕ ಪ್ರದರ್ಶನವನ್ನು ಸ್ಥಗಿತಗೊಳಿಸಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಆಗ್ರಹಿಸುವುದಾಗಿ ಲೋಲಾಕ್ಷ ತಿಳಿಸಿದ್ದಾರೆ.

Full View

Similar News