ಬೆಂಗಳೂರು | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ: ಕುಲಪತಿ ವಿರುದ್ಧ ಮೊಕದ್ದಮೆ ದಾಖಲಿಸಲು ಆಗ್ರಹ

Update: 2022-11-11 15:30 GMT

ಬೆಂಗಳೂರು, ನ.11: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ( Babasaheb Ambedkar) ಅವರ ಭಾವಚಿತ್ರಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕಲುಪತಿ ಮತ್ತು ಕುಲಸಚಿವರು ಅವಮಾನ ಮಾಡಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ.

ಈ ಸಂಬಂಧ ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿರುವ ಒಕ್ಕೂಟದ ಪ್ರಧಾನ ಸಂಚಾಲಕ ವೇಣುಗೋಪಾಲ್ ಮೌರ್ಯ, ಇಂತಹ ನಿರ್ಲಕ್ಷ್ಯತೆವಹಿಸಿ ಅಪಮಾನ ಮಾಡಿರುವ ತಪ್ಪಿತಸ್ಥರ ವಿರುದ್ಧ ಎಸ್ಸ, ಎಸ್ಟಿ ದೌರ್ಜನ್ಯ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೆಂಟ್ರಲ್ ಕಾಲೇಜು ಆವರಣದ ಆಡಳಿತ ಕಚೇರಿಯ ರಾಜಾಜಿ ಹಾಲ್‍ನ ಮೂಲೆಯೊಂದರಲ್ಲಿ ಬೇಜವಾಬ್ದಾರಿಯಿಂದ ಅನುಪಯುಕ್ತ ವಸ್ತುಗಳು ಮತ್ತು ಕಸದ ಮಧ್ಯದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು  ಎಸೆಯಲಾಗಿತ್ತು. ಇದನ್ನು ಕಂಡು ವಿಚಾರಿಸಿದಾಗ ಎ.14ರ ಅಂಬೇಡ್ಕರ್ ಜಯಂತಿ ದಿನದಂದು ತೆಗೆದಿದ್ದ ಫೋಟೋ ಎಂಬುದು ಗೊತ್ತಾಗಿದೆ.

ಈ ಕುರಿತು ಕುಲಪತಿ ಅವರನ್ನು ವಿಚಾರಿಸಿದಾಗ ಬಹಳ ಬೇಜವಾಬ್ದಾರಿಯ ಮತ್ತು ಉಡಾಫೆಯ ಉತ್ತರಗಳನ್ನು ನೀಡುತ್ತಾರೆ. ಸುಮಾರು 8 ತಿಂಗಳಿಂದ ವಿಶ್ವವಿದ್ಯಾಲಯದ ಮುಖ್ಯ ಆಡಳಿತ ಕಚೇರಿಯ ಮೂಲೆಯಲ್ಲಿ ಕಸದ ನಡುವೆ ಎಸೆದಿರುವುದು ತಿಳಿದುಬಂದಿದೆ ಎಂದು ಅವರು ಆರೋಪಿಸಿದ್ದಾರೆ.

Similar News