ಮತದಾರರ ಕರಡು ಪಟ್ಟಿ ಪರಿಶೀಲಿಸಲು ಯು.ಟಿ. ಖಾದರ್ ಮನವಿ

Update: 2022-11-11 15:45 GMT

ಮಂಗಳೂರು: ವಿಧಾನಸಭೆಯ ಚುನಾವಣೆಯ ನಿಮಿತ್ತ ದ.ಕ.ನೂತನ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ಶುಕ್ರವಾರ ಪ್ರಕಟಿಸಿದ ‘ಮತದಾರರ ಕರಡು ಪಟ್ಟಿ’ಯನ್ನು ಪರಿಶೀಲಿಸುವಂತೆ ರಾಜ್ಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.

ಮತದಾರರ ಕರಡು ಪಟ್ಟಿಗೆ ಸಂಬಂಧಿಸಿ ಡಿಸೆಂಬರ್ 8ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಹಾಗಾಗಿ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಸಲುವಾಗಿ ನ.12, ನ.20, ಡಿ.3, ಡಿ.4ರಂದು ನಡೆಯುವ ವಿಶೇಷ ನೋಂದಣಿ ಅಭಿಯಾನದಲ್ಲಿ ಕೈಜೋಡಿಸಬೇಕು. 2023ರ ಜನವರಿ 3ರಂದು ಪ್ರಕಟಿಸಲಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗುವಂತೆ ಅರ್ಹ ಮತದಾರರು ನೋಡಿಕೊಳ್ಳಬೇಕು ಎಂದು ಯು.ಟಿ. ಖಾದರ್ ಸೂಚಿಸಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ)ರನ್ನು ನೇಮಕ ಮಾಡಲು ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮತ್ತು ತೆಗೆದು ಹಾಕಿರುವ ಹೆಸರುಗಳು ಹಾಗೂ ಉಂಟಾಗಿರುವ ಬದಲಾವಣೆಗಳ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು ಕ್ಷೇತ್ರದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಮತದಾರರು ಪಟ್ಟಿ ಪರಿಷ್ಕರಣೆಯ ಸಂದರ್ಭ ಹೊರಗುಳಿದಿದ್ದಾರೆ. ಹಾಗಾಗಿ ಕ್ಷೇತ್ರ ವ್ಯಾಪ್ತಿಯ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಟ್ಟಿಯಲ್ಲಿ ತಮ್ಮ ಹೆಸರು ನಮೂದಾಗಿದೆಯೇ? ಕೈಬಿಡಲಾಗಿದೆಯೇ ಎಂಬುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಪರಿಶೀಲಿಸಬೇಕು ಎಂದು ಯು.ಟಿ.ಖಾದರ್ ಮನವಿ ಮಾಡಿದ್ದಾರೆ.

Similar News