ಕೊಲಿಜಿಯಂ ಶಿಫಾರಸುಗಳನ್ನು ತಡೆಹಿಡಿಯುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ

Update: 2022-11-11 16:04 GMT

ಹೊಸದಿಲ್ಲಿ,ನ.11: ಕೊಲಿಜಿಯಂ (Chandacollegium)ನ  ಮರುಶಿಫಾರಸುಗಳು  ಸೇರಿದಂತೆ ಉನ್ನತ  ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿಗಳಿಗಾಗಿ ಶಿಫಾರಸು ಮಾಡಿರುವ ಹೆಸರುಗಳನ್ನು ಬಾಕಿಯಿರಿಸಿದ್ದಕ್ಕಾಗಿ ಶುಕ್ರವಾರ ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯ(Supreme Court)ವು,ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿತು. 

ಕೊಲಿಜಿಯಂ ಎರಡನೇ ಬಾರಿಗೆ ಶಿಫಾರಸು ಮಾಡಿದ ಬಳಿಕ ನ್ಯಾಯಾಧೀಶರ ನೇಮಕಾತಿ ಆದೇಶಗಳನ್ನು ಹೊರಡಿಸಲೇಬೇಕು. ಹೆಸರುಗಳನ್ನು ತಡೆಹಿಡಿಯುವ ಪರಿಪಾಠವು ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗಿ ನೇಮಕಾತಿಗಾಗಿ ಹೆಸರುಗಳನ್ನು ಶಿಫಾರಸು ಮಾಡಲಾಗಿರುವವರು ಅದಕ್ಕೆ ತಮ್ಮ ಸಮ್ಮತಿಯನ್ನು ಹಿಂದೆಗೆದುಕೊಳ್ಳವಂತೆ ಮಾಡುವ ತಂತ್ರವಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್(SK Kaul) ಮತ್ತು ಎ.ಎಸ್.ಓಕಾ(A. S. Oka) ಅವರನ್ನೊಳಗೊಂಡ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಕಳೆದ ವರ್ಷದ ಎ.20ರ ಸವೋಚ್ಚ ನ್ಯಾಯಾಲಯದ ಆದೇಶದಲ್ಲಿ ನ್ಯಾಯಾಧೀಶರ ಸಕಾಲಿಕ ನೇಮಕಾತಿಗೆ ನಿಗದಿಗೊಳಿಸಿರುವ ಗಡುವಿಗೆ ‘ಉದ್ದೇಶಪೂರ್ವಕ ಅವಿಧೇಯತೆ ’('Willful Disobedience')ಯನ್ನು ತೋರಿಸಿದ್ದಕ್ಕಾಗಿ ಕೇಂದ್ರ ಕಾನೂನು ಸಚಿವಾಲಯದ ಹಾಲಿ ಕಾರ್ಯದರ್ಶಿ (ಕಾನೂನು)ಗಳಿಗೆ ನೋಟಿಸನ್ನೂ ಪೀಠವು ಹೊರಡಿಸಿತು.

ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿಗಳಲ್ಲಿ ಅಸಾಧಾರಣ ವಿಳಂಬಗಳನ್ನು ಮತ್ತು ಹೆಸರುಗಳ ಪ್ರತ್ಯೇಕತೆಯನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.

ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನ.28ಕ್ಕೆ ನಿಗದಿಗೊಳಿಸಿದೆ.

Similar News