ಎಲಾನ್ ಮಸ್ಕ್ ಸಾರಥ್ಯದ ಬಳಿಕ ಟ್ವಿಟರ್ ನಲ್ಲಿ ದ್ವೇಷಭಾಷಣದ ಪ್ರಸಾರದಲ್ಲಿ ತೀವ್ರ ಹೆಚ್ಚಳ

Update: 2022-11-11 17:19 GMT

ನ್ಯೂಯಾರ್ಕ್,ನ.11: ಎಲಾನ್ ಮಸ್ಕ್(Elon Musk) ಅವರು ಪ್ರಭಾವಿ ಜಾಲತಾಣ ವೇದಿಕೆ ಟ್ವಿಟರ್ (Twitter)ಅನ್ನು ಖರೀದಿಸಿದ ಬಳಿಕ ಅದರಲ್ಲಿ ಜನಾಂಗೀಯ ನಿಂದನೆಗಳ ಪೋಸ್ಟ್ ಗಳಲ್ಲಿ ಭಾರೀ ಏರಿಕೆಯಾಗಿವೆ ಎಂದು ಡಿಜಿಟಲ್ ನಾಗರಿಕ ಹಕ್ಕುಗಳ ಸಮೂಹವು ಗುರುವಾರ ತಿಳಿಸಿದೆ.

ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಕರಿಯ ಜನಾಂಗೀಯರನ್ನು ದೂಷಣೆಗೆ ಬಳಸುವ ವಿಶೇಷಣ ಪದವೊಂದನ್ನು 26 ಸಾವಿರ ಬಾರಿ ಬಳಸಲಾಗಿದ್ದು, 2022ರಲ್ಲಿ ಇದು ಸರಾಸರಿಗಿಂತ ಮೂರು ಪಟ್ಟು ಅಧಿಕವಾಗಿತ್ತೆಂದು ವರದಿ ತಿಳಿಸಿದೆ. ಲಿಂಗಾಂತರಿಗಳ ವಿರುದ್ಧದ ನಿಂದನೆಯು 53 ಶೇಕಡದಷ್ಟು ಏರಿಕೆಯಾಗಿದೆ.

ಇದೇ ವೇಳೆ ಸಲಿಂಗಿಗಳ ವಿರುದ್ಧ ದೂಷಣೆಳ ಪ್ರಮಾಣ ಕೂಡಾ ವಾರ್ಷಿಕ ಸರಾಸರಿಗಿಂತ 39 ಶೇಕಡದಷ್ಟು ಅಧಿಕವಾಗಿದೆ. ಯಹೂದಿಗಳನ್ನು ಹಾಗೂ ಹಿಸ್ಪಾನಿಕ್ ಗುರಿಯಿರಿಸಿ ನಿಂದನಾತ್ಮಕ ಪದಗಳ ಬಳಕೆಯಲ್ಲಿ 39 ಶೇಕಡ ಏರಿಕೆಯಾಗಿದೆ.

   

ಈ ಅಧ್ಯಯನ ವರದಿಗಾಗಿ ತಜ್ಞರು ಜಗತ್ತಿನಾದ್ಯಂತ ಟ್ವಿಟರ್ನಲ್ಲಿ ಪ್ರಸಾರವಾದಂತಹ ಸುಮಾರು 80 ಸಾವಿರ ಆಂಗ್ಲ ಭಾಷಾ ಟ್ವೀಟ್ ಗಳು ಹಾಗೂ ರೀಟ್ವಿಟ್ ಗಳನ್ನು ಪರಿಶೀಲಿಸಿದ್ದರು ಎಂದು ವರದಿಹೇಳಿದೆ. ಟ್ವಿಟರ್ನಲ್ಲಿ ದ್ವೇಷಭಾಷಣದ ಪ್ರಸಾರವನ್ನು ಕಡಿಮೆಗೊಳಿಸುವಲ್ಲಿ ಸಾಮಾಜಿಕ ಜಾಲತಾಣವು ಯಶಸ್ವಿಯಾಗಿದೆ ಎಂದು ಟ್ವಿಟ್ಟರ್ ನ ವಿಶ್ವಸನೀಯತೆ ಹಾಗೂ ಸುರಕ್ಷತೆ ವಿಭಾಗದ ವರಿಷ್ಠ ಯೊಯೆಲ್ ರೀತ್ ಇತ್ತೀಚೆಗೆ ಘೋಷಿಸಿದ್ದರು.

ಆದರೆ ಟ್ವಿಟ್ಟರ್ನ ಪುಟಗಳಲ್ಲಿ ಕಂಡುಬಂದಿರುವ ದ್ವೇಷ ಭಾಷಣಗಳು ಪ್ರಸಾರ ಸಂಖ್ಯೆ ಹಾಗೂ ದ್ವೇಷಯುತ ಟ್ವೀಟ್ ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಡಿಜಿಟಲ್ ನಾಗರಿಕ ಹಕ್ಕುಗಳ ಸಮೂಹ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಗುರುವಾರ ರೋತ್ ಕೂಡಾ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿದ ಬಳಿಕ ಸಾವಿರಾರು ಮಂದಿ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ ಅಥವಾ ವಜಾಗೊಂಡಿದ್ದಾರೆ. ಅದಾಗ್ಯೂ ಬುಧವಾರ ರೋತ್ ಅವರು ಟ್ವಿಟರ್ ನಲ್ಲಿ ದ್ವೇಷಭಾಷಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಒಪ್ಪಿಕೊಂಡಿದ್ದರು. ಆದಾಗ್ಯೂ ಅವುಗಳ ಸಂಖ್ಯೆಯನ್ನು ಕಡಿಮೆಗೊಳಿಸವಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆಯೆಂದು ಹೇಳಿದ್ದರು.

Similar News