×
Ad

ಮುಕ್ಕ ಟೋಲ್‌ಗೇಟ್ ರದ್ದು ಕುರಿತು ಶೀಘ್ರ ಅಧಿಸೂಚನೆ ಬರುವ ನಿರೀಕ್ಷೆ ಇದೆ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್

Update: 2022-11-11 22:59 IST

ಮಂಗಳೂರು: ಮುಕ್ಕ ಟೋಲ್‌ಗೇಟ್ ರದ್ದು ಮಾಡುವ ಕುರಿತು ಈಗಾಗಲೇ ಸಂಸದರು ಕೇಂದ್ರ ಭೂಸಾರಿಗೆ ಸಚಿವರಿಗೆ ಒತ್ತಾಯ ಮಾಡಿದ್ದಾರೆ, ಹಾಗಾಗಿ ಶೀಘ್ರ ಈ ಕುರಿತು ಅಂತಿಮ ಅಧಿಸೂಚನೆ ಬರುವ ನಿರೀಕ್ಷೆ ಇದೆ ಎಂದು ನೂತನ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳು ಕೊರತೆ ವಿಚಾರವಾಗಿ ನ.14ರಂದು ಸೋಮವಾರ ಜಿಲ್ಲೆಯ 7 ಸದಸ್ಯರ ಸಮಿತಿಯ ಸಭೆಯನ್ನು ಕರೆಯಲಾಗಿದೆ. ಅದರಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮರಳಿನ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಈ ಬಗ್ಗೆ ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಸದನ ಸಮಿತಿ ಮಟ್ಟದಲ್ಲಿ ಸಭೆ ಕೂಡಾ ನಡೆಸಲಾಗಿದೆ. ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇಲ್ಲಿ ನಡೆಯುವ ಕಾನೂನು ಸಮ್ಮತವಾದ ಹಾಗೂ ಕಾನೂನುಬಾಹಿರ ಎರಡೂ ಮರಳುಗಾರಿಕೆ ಬಗ್ಗೆ ಪ್ರಸ್ತಾಪ ಆಗಿದೆ. ಕಾನೂನು ಸಮ್ಮತವಾದ ಮರಳುಗಾರಿಕೆ ಸರಿಯಾಗಿ ನಡೆದರೆ ಕಾನೂನು ಬಾಹಿರ ಮರಳುಗಾರಿಕೆ ಕಡಿಮೆಯಾಗಬಹುದು, ಈ ನಿಟ್ಟಿನಲ್ಲಿ ನ.14ರಂದು ಸಭೆ ನಡೆಸಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಽಕರಣದ ಚೆನ್ನೈ ಪೀಠ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧ ಮಾಡಿತ್ತು. ಅದನ್ನು ನಮ್ಮ ಜಿಲ್ಲೆಗೂ ಅನ್ವಯಿಸಿರುವ ದ.ಕ ಜಿಲ್ಲಾಡಳಿತದ ನಿರ್ಣಯವನ್ನು ಕೆಲವು ಮರಳುಗುತ್ತಿಗೆದಾರರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ಜಿಲ್ಲಾಡಳಿತದ ನಿರ್ಣಯವನ್ನು ತಿರಸ್ಕರಿಸಲಾಗಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸುವ ಇರಾದೆ ಇಲ್ಲ, ಜಿಲ್ಲೆಯಲ್ಲಿ ನ್ಯಾಯಯುತವಾಗಿ ಪಾರಂಪರಿಕವಾಗಿ ಮರಳು ತೆಗೆಯುವವರಿಗೆ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

Full View

Similar News