ಅಫ್ಘಾನಿಸ್ತಾನದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಆರೋಪಿಸಿ ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ

Update: 2022-11-11 17:42 GMT

ನ್ಯೂಯಾರ್ಕ್,ನ.11: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (The Taliban)ಆಡಳಿತವು ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿದೆಯೆಂದು ಆರೋಪಿಸುವ ನಿರ್ಣಯವನ್ನು ವಿಶ್ವಸಂಸ್ಥೆ(WHO)ಯ ಸಾಮಾನ್ಯ ಸಬೆಯು ಗುರುವಾರ ಅಂಗೀಕರಿಸಿದೆ. ಪ್ರಾತಿನಿಧಿಕ ಸರಕಾರವನ್ನು ಸ್ಥಾಪಿಸಲು ವಿಫಲವಾಗಿರುವ ತಾಲಿಬಾನ್, ಅಫ್ಘಾನಿಸ್ತಾನವನ್ನು ಭೀಕರವಾದ ಆರ್ಥಿಕ, ಮಾನವೀಯ ಹಾಗೂ ಸಾಮಾಜಿಕ ದುಸ್ಥಿತಿಯೆಡೆಗೆ ದೂಡಿದೆಯೆಂದು ನಿರ್ಣಯವು ಹೇಳಿದೆ.

  15 ತಿಂಗಳುಗಳ ಹಿಂದೆ ತಾಲಿಬಾನ್ ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಹಿಂಸಾಚಾರವು ನಿರಂತರವಾಗಿ ಮುಂದುವರಿದಿರುವ ಬಗ್ಗೆಯೂ ನಿರ್ಣಯವು ಬೆಟ್ಟು ಮಾಡಿದೆ. ಅಲ್ಖಾಯಿದಾ, ಐಸಿಸ್ನಂತಹ ಭಯೋತ್ಪಾದಕ ಗುಂಪುಗಳು ಹಾಗೂ ವಿದೇಶಿ ಉಗ್ರರ ಉಪಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

   ಜರ್ಮನಿಯ ಮುತುವರ್ಜಿಯಲ್ಲಿ ಮಂಡಿಸಲಾದ ಈ ನಿರ್ಣಯವನ್ನು ವಿಶ್ವಸಂಸ್ಥೆಯು 116-0 ಮತಗಳಿಂದ ಅಂಗೀಕರಿಸಲಾಯಿತು. ಆದರೆ ರಶ್ಯ, ಚೀನಾ,ಬೆಲಾರಸ್, ಬುರುಂಡಿ ಉತ್ತರ ಕೊರಿಯ, ಇಥಿಯೋಪಿಯ, ಗಿನಿಯಾ, ನಿಕಾರಗುವಾ, ಪಾಕಿಸ್ತಾನ ಹಾಗೂ ಝಿಂಬಾಬವೆ ಮತದಾನಕ್ಕೆ ಗೈರು ಹಾಜರಾಗಿದ್ದವು. ಇತರ 67 ದೇಶಗಳು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

Similar News