×
Ad

ಮಂಗಳೂರು: ನ.13ರಂದು ನೆಹರೂ ಕಪ್ ಕ್ರಿಕೆಟ್ ಪಂದ್ಯಾಟ

Update: 2022-11-12 13:30 IST

ಮಂಗಳೂರು, ನ.12: ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನ.13ರಂದು ಸೀಮಿತ ಓವರಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ನಗರದ ಉರ್ವಾ ಮಾರುಕಟ್ಟೆ ಬಳಿಯ ಮೈದಾನದಲ್ಲಿ ಈ ನೆಹರೂ ಕಪ್ ಪಂದ್ಯಾಟ ನಡೆಯಲಿದೆ. ಐದು ಓವರ್‌ಗಳ ಪಂದ್ಯಾಟ ಇದಾಗಿದ್ದು, ಅಂತಿಮ ಪಂದ್ಯವು 8 ಓವರ್‌ಗಳಲ್ಲಿ ನಡೆಯಲಿದೆ ಎಂದು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಕಾಶ್ ಬಿ. ಸಾಲಿಯಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

15 ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಕ್ಕೆ ಪ್ರಥಮ 55,555 ರೂ., ದ್ವಿತೀಯ 33,333 ರೂ. ನಗದು ಬಹುಮಾನ ನೀಡಲಾಗುವುದು. ಉತ್ತಮ ಎಸೆತಗಾರ, ದಾಂಡಿಗ, ಕ್ಷೇತ್ರ ರಕ್ಷಕ, ಪಂದ್ಯಶ್ರೇಷ್ಠ ಪ್ರಶಸ್ತಿ  ನೀಡಲಾಗುವುದು ಎಂದು ಅವರು ಹೇಳಿದರು.

ಯುವ ಪೀಳಿಗೆ ಸುಳ್ಳು ಸುದ್ದಿ, ಮೋಸ, ಅಪಪ್ರಚಾರ, ಕೋಮು ದ್ವೇಷದ ಭಾವನೆಗಳಿಗೆ ಬಲಿಯಾಗದೆ, ಕ್ರೀಡಾ ಸ್ಫೂರ್ತಿಯೊಂದಿಗೆ ಶಾರೀರಿಕವಾಗಿ, ಮಾನಸಿಕವಾಗಿ ಸದೃಢಗೊಳ್ಳುವ ನಿಟ್ಟಿನಲ್ಲಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದ ನೆಹರೂ ಅವರನ್ನು ನೆನಪಿಸುವ ಸಲುವಾಗಿ ಈ ಪಂದ್ಯಾಟ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರ ಬ್ಲಾಕ್ ಯುವ ಅಧ್ಯಕ್ಷ ರಾಕೇಶ್ ದೇವಾಡಿಗ, ಗಿರೀಶ್ ಶೆಟ್ಟಿ, ಯೋಗೀಶ್ ನಾಯಕ್, ಅನ್ಸರುದ್ದೀನ್ ಸಾಲ್ಮರ, ಸಮರ್ಥ್ ಭಟ್ ಉಪಸ್ಥಿತರಿದ್ದರು.

Similar News