ಎನ್‍ಡಿಟಿವಿಯಲ್ಲಿ ಹೆಚ್ಚುವರಿ ಶೇ. 26 ಪಾಲುದಾರಿಕೆ ಪಡೆಯಲು ‘ಓಪನ್ ಆಫರ್’ ಘೋಷಿಸಿದ ಅದಾನಿ ಸಂಸ್ಥೆ

Update: 2022-11-12 14:45 GMT

ಹೊಸದಿಲ್ಲಿ: ಸುದ್ದಿವಾಹಿನಿ ಎನ್‍ಡಿಟಿವಿಯಲ್ಲಿ (NDTV) ಹೆಚ್ಚುವರಿ ಶೇ 26 ಪಾಲುದಾರಿಕೆಯನ್ನು ಪಡೆಯಲು ಬಹಿರಂಗ ಆಫರ್  ನವೆಂಬರ್ 22 ರಿಂದ  ಆರಂಭಗೊಳ್ಳಲಿದೆ ಎಂದು ಅದಾನಿ ಗ್ರೂಪ್ (Adani Group) ಘೋಷಿಸಿದೆ. ಡಿಸೆಂಬರ್ 5 ರ ತನಕ ಈ ಆಫರ್ ಇರಲಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ ಸಲ್ಲಿಕೆಯಾಗಿರುವ ರೆಗ್ಯುಲೇಟರಿ ಫೈಲಿಂಗ್‍ನಲ್ಲಿ ತಿಳಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಗೌತಮ್ ಅದಾನಿ ನೇತೃತ್ವದ ಅದಾನಿ ಎಂಟರ್‍ಪ್ರೈಸಸ್ ತಾನು ಎನ್‍ಡಿಟಿವಿ ಅಂಗಸಂಸ್ಥೆ ವಿಶ್ವ ಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಮೂಲಕ ಎನ್‍ಡಿಟಿವಿಯಲ್ಲಿ ಶೇ 29.18 ಪಾಲುದಾರಿಕೆ ಪಡೆಯುತ್ತಿರುವುದಾಗಿ ತಿಳಿಸಿತ್ತು. ಈ ಪಾಲನ್ನು ಎನ್‍ಡಿಟಿವಿ ಸಹ-ಸ್ಥಾಪಕರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರು ರಾಧಿಕಾ ರಾಯ್ ಪ್ರಣಯ್ ರಾಯ್ ಪ್ರೈವೇಟ್ ಲಿಮಿಟೆಡ್ ಮೂಲಕ ಹೊಂದಿದ್ದರು.

ಸೆಬಿ ನಿಯಮಗಳ ಪ್ರಕಾರ ಒಂದು ಕಂಪೆನಿಯಲ್ಲಿ ಶೇ 25 ಕ್ಕಿಂತ ಹೆಚ್ಚು ಪಾಲು ಪಡೆಯುವ ಸಂಸ್ಥೆಯು ಷೇರುದಾರರಿಗೆ ಬಹಿರಂಗ ಆಫರ್ ಘೋಷಿಸುವ ಹಕ್ಕು ಹೊಂದಿರುತ್ತದೆ.

ಎನ್‍ಡಿಟಿವಿಯಲ್ಲಿ ಸಾರ್ವಜನಿಕ ಷೇರುದಾರರು ಶೇ 38.55 ಪಾಲುದಾರಿಕೆ ಹೊಂದಿದ್ದು ಇವುಗಳನ್ನು ಪಡೆಯುವ ಉದ್ದೇಶದಿಂದ ಅದಾನಿ ಎಂಟರ್‍ಪ್ರೈಸಸ್ ಓಪನ್ ಆಫರ್ ಘೋಷಿಸಿದೆ. 1.67 ಕೋಟಿಗೂ ಅಧಿಕ ಮೌಲ್ಯದ ಈಕ್ವಿಟಿ ಶೇರುಗಳು ಆಫರ್ ಬೆಲೆಯಾದ ತಲಾ ಷೇರಿಗೆ ರೂ 294 ರಂತೆ ಪಡೆಯುವ ಉದ್ದೇಶವನ್ನು ಅದಾನಿ ಸಂಸ್ಥೆ ಹೊಂದಿದೆ.

Similar News