ಇಸ್ರೇಲ್‍ನ ಆಕ್ರಮಣದ ಕುರಿತು ಐಸಿಜೆ ಅಭಿಪ್ರಾಯ ಕೋರಿಕೆ ನಿರ್ಣಯಕ್ಕೆ ವಿಶ್ವಸಂಸ್ಥೆ ಅಂಗೀಕಾರ

Update: 2022-11-12 17:21 GMT

ನ್ಯೂಯಾರ್ಕ್, ನ.12: ವಿಶ್ವಸಂಸ್ಥೆ(WHO)ಯ  ಪ್ರಧಾನ ಕಚೇರಿಯಲ್ಲಿ ಅನುಮೋದಿಸಲಾದ ನಿರ್ಣಯವು  ಪೆಲೆಸ್ತೀನಿಯಾದ ಸ್ವಯಂ ನಿರ್ಣಯದ ಹಕ್ಕನ್ನು ಉಲ್ಲಂಘಿಸುತ್ತಿರುವ `ಇಸ್ರೇಲ್‍ನ ದೀರ್ಘಕಾಲದ ಆಕ್ರಮಣದ'('Israel's Prolonged Occupation') ವಿಷಯದಲ್ಲಿ ಸಲಹೆ-ಅಭಿಪ್ರಾಯ ನೀಡುವಂತೆ  ಐಸಿಜೆ(ಅಂತರಾಷ್ಟ್ರೀಯ ನ್ಯಾಯಾಲಯ)ಯನ್ನು ವಿನಂತಿಸಿದೆ.

ಇಸ್ರೇಲ್‍ನ ದೀರ್ಘಕಾಲದ ಆಕ್ರಮಣ ಮತ್ತು ಪೆಲೆಸ್ತೀನ್ ಭೂಪ್ರದೇಶದ ಸ್ವಾಧೀನವನ್ನು ತುರ್ತಾಗಿ ಪರಿಶೀಲನೆ ನಡೆಸುವಂತೆ ಐಸಿಜೆಯನ್ನು ಕೋರುವ ಪೆಲೆಸ್ತೀನಿಯನ್ ಕರಡು ನಿರ್ಣಯವನ್ನು ವಿಶ್ವಸಂಸ್ಥೆ ವಸಾಹತು ವಿಮೋಚನೆ ಸಮಿತಿ ಶುಕ್ರವಾರ ಅಂಗೀಕರಿಸಿದೆ.

ನಿರ್ಣಯದಲ್ಲಿ ಉಲ್ಲೇಖಿಸಲಾದ, ಪೆಲೆಸ್ತೀನೀಯರ ಸ್ವನಿರ್ಣಯದ ಹಕ್ಕನ್ನು ಉಲ್ಲಂಘಿಸುವ   `ಇಸ್ರೇಲ್‍ನ ದೀರ್ಘಾವಧಿಯ ಆಕ್ರಮಣ'('Israel's Prolonged Occupation')ದ ಬಗ್ಗೆ ಸಲಹಾ ಅಭಿಪ್ರಾಯ ತಿಳಿಸುವಂತೆ ನಿರ್ಣಯದಲ್ಲಿ ಕೋರಲಾಗಿದೆ. ನಿರ್ಣಯವನ್ನು 98 ದೇಶಗಳು ಬೆಂಬಲಿಸಿದ್ದರೆ, 17 ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. 52 ದೇಶಗಳು ಮತದಾನದಿಂದ ದೂರ ಉಳಿದಿವೆ.

ಈ ನಿರ್ಣಯವು ಮಹತ್ವದ ರಾಜತಾಂತ್ರಿಕ ಮತ್ತು ಕಾನೂನು ಪ್ರಗತಿಯಾಗಿದ್ದು ಯುದ್ಧಾಪರಾಧಗಳಿಗೆ ಇಸ್ರೇಲ್ ಅನ್ನು ಹೊಣೆಯಾಗಿಸುವ ಹೊಸ ಯುಗಕ್ಕೆ ನಾಂದಿ ಹಾಡಲಿದೆ  ಎಂದು ಪೆಲೆಸ್ತೀನ್‍ನ ವಿದೇಶಾಂಗ ಸಚಿವ ರಿಯಾದ್ ಅಲ್ ಮಲೀಕಿ ಹೇಳಿದ್ದಾರೆ.  `ಪೆಲೆಸ್ತೀನ್ ಜನರು ಮತ್ತು ಆಕ್ರಮಿತ ಪ್ರದೇಶದ ಇತರ ಅರಬರ ಹಕ್ಕುಗಳ ಮೇಲೆ ಪರಿಣಾಮ ಬೀರುವ ಇ ಸ್ರೇಲ್‍ನ ವರ್ತನೆ ಮತ್ತು ವಸಾಹತು ಚಟುವಟಿಕೆ' ಎಂಬ ಹೆಸರಿನ ನಿರ್ಣಯದ ವಿರುದ್ಧ ಮತ ಚಲಾಯಿಸಿದ ದೇಶಗಳಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಇಟಲಿ, ಜರ್ಮನಿ, ಆಸ್ಟ್ರಿಯಾ, ಇಸ್ರೇಲ್, ಜೆಕ್ ಗಣರಾಜ್ಯ ಹಾಗೂ ಪೆಸಿಫಿಕ್ ದ್ವೀಪಸಮೂಹದ ಹಲವು ದೇಶಗಳು ಸೇರಿವೆ.  ರಶ್ಯ, ಬಹ್ರೇನ್, ಈಜಿಪ್ಟ್, ಉಕ್ರೇನ್, ಯುಎಇ ಸಹಿತ 98 ದೇಶಗಳು ನಿರ್ಣಯವನ್ನು ಬೆಂಬಲಿಸಿವೆ.

1967ರಲ್ಲಿ 6 ದಿನದ ಯುದ್ಧದ ಬಳಿಕ ಇಸ್ರೇಲ್ ಪಶ್ಚಿಮ ದಂಡೆ, ಗಾಝಾ ಮತ್ತು ಪೂರ್ವ ಜೆರುಸಲೇಂಗಳನ್ನು ವಶಪಡಿಸಿಕೊಂಡಿತ್ತು. ಈ ಪ್ರದೇಶಗಳನ್ನು ತನ್ನ ದೇಶವಾಗಿ ಮಾಡಿಕೊಳ್ಳಬೇಕೆಂದು ಪೆಲೆಸ್ತೀನ್ ಬಯಸಿತ್ತು. ಈ ಬಿಕ್ಕಟ್ಟನ್ನು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ಸನದಿನ ಆಧಾರದಲ್ಲಿ ತೂಗಿ ನೋಡಿ ಸಲಹೆ ನೀಡಬೇಕೆಂದು ನಿರ್ಣಯದಲ್ಲಿ ಕೋರಲಾಗಿದೆ.

ಈ ವಿಷಯದಲ್ಲಿ ಸಿಜೆಐ ಒಳಗೊಳ್ಳುವುದು ಉಭಯ ದೇಶಗಳ ನಡುವಿನ ಸಾಮರಸ್ಯದ ಯಾವುದೇ ಅವಕಾಶವನ್ನೂ ನಾಶಪಡಿಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್(Gilad Erdan) ಹೇಳಿದ್ದಾರೆ. ಪೆಲೆಸ್ತೀನ್ ಪ್ರತಿಯೊಂದು ಶಾಂತಿ ಉಪಕ್ರಮವನ್ನೂ ತಿರಸ್ಕರಿಸಿದೆ ಮತ್ತು ಈಗ ಸಂಘರ್ಷವನ್ನು ಪರಿಹರಿಸಲಾಗಿಲ್ಲ ಎಂಬ ಕಾರಣದೊಂದಿಗೆ ಬಾಹ್ಯ ಸಂಸ್ಥೆಯೊಂದನ್ನು ಇದರಲ್ಲಿ ಸೇರಿಸಿಕೊಳ್ಳಲು ಬಯಸಿದೆ ಎಂದು ಎರ್ಡನ್ ಹೇಳಿದ್ದಾರೆ.

ಐಸಿಜೆ ಸಲಹೆಯು ಪ್ರತಿಕೂಲ ಪರಿಣಾಮ ಬೀರಲಿದೆ ಮತ್ತು `ಎರಡು ದೇಶ' ಉದ್ದೇಶದ ಮಾತುಕತೆಯಿಂದ ದೇಶಗಳನ್ನು ಇನ್ನಷ್ಟು ದೂರ ಕೊಂಡೊಯ್ಯಲಿದೆ ಎಂದು ಅಮೆರಿಕದ ಸಹಾಯಕ ರಾಯಭಾರಿ ರಿಚರ್ಡ್ ಮಿಲ್ಸ್ ಹೇಳಿದ್ದಾರೆ.

ಸಂಘರ್ಷದ ಕುರಿತು ಐಸಿಜೆ ನೀಡಿದ ಕೊನೆಯ ಸಲಹಾ ಅಭಿಪ್ರಾಯವೆಂದರೆ 2004ರಲ್ಲಿ ನೀಡಿದ `ಇಸ್ರೇಲ್‍ನ ಪ್ರತ್ಯೇಕ ತಡೆಗೋಡೆ ರಚನೆ ಕಾನೂನುಬಾಹಿರ' ಎಂಬ  ತೀರ್ಪು ಆಗಿದ್ದು ಇದನ್ನು ಇಸ್ರೇಲ್ ಆಕ್ಷೇಪಿಸಿತ್ತು.

Similar News