ಡಲ್ಲಾಸ್ ಏರ್‌ ಶೋ ವೇಳೆ ವಿಮಾನಗಳ ಢಿಕ್ಕಿ; 6 ಮಂದಿ ಮೃತ್ಯು

Update: 2022-11-13 05:03 GMT

ಡಲ್ಲಾಸ್: ಡಲ್ಲಾಸ್ ವೈಮಾನಿಕ ಪ್ರದರ್ಶನದ ವೇಳೆ ಎರಡನೇ ಮಹಾಯುದ್ಧ ಕಾಲದ ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗಿ ಸುಟ್ಟು ಭಸ್ಮವಾದ ಘಟನೆ ಶನಿವಾರ ನಡೆದಿದೆ.

ಈ ವಿಮಾನಗಳು ಭಯಾನಕವಾಗಿ ಢಿಕ್ಕಿಯಾಗಿ ಬೆಂಕಿ ಹತ್ತಿಕೊಂಡು ಸುಟ್ಟು ಬೂದಿಯಾಗುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್‍ರೆಸ್ ಮತ್ತು ಬೆಲ್ ಪಿ-63 ಕಿಂಗ್‍ ಕೋಬ್ರಾ ಎಂಬ ವಿಮಾನಗಳು ದುರ್ಘಟನೆಯಲ್ಲಿ ಸುಟ್ಟು ಹೋಗಿವೆ. ಈ ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ವೀಡಿಯೊ ಚಿತ್ರೀಕರಣ ನಡೆಯುತ್ತಿತ್ತು ಹಾಗೂ ಇಡೀ ಘಟನೆ ವೀಡಿಯೊದಲ್ಲಿ ದಾಖಲಾಗಿದೆ. ಘಟನೆಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಆದರೆ ವಿಮಾನಗಳಲ್ಲಿ ಕನಿಷ್ಠ ಆರು ಮಂದಿ ಇದ್ದು, ಎಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ಕಣ್ಣೆದುರೇ ಈ ಭಯಾನಕ ದುರ್ಘಟನೆ ಸಂಭವಿಸಿದ್ದಕ್ಕೆ ಏರ್ ಶೋ ನೋಡಲು ಬಂದಿದ್ದ ವೀಕ್ಷಕರು ಸಾಕ್ಷಿಯಾಗಿದ್ದು, ಭಯಾನಕ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

"ನಾನು ಅಲ್ಲಿ ನಿಂತಿದ್ದೆ. ಘಟನೆ ಬಳಿಕ ನನಗೆ ಆಘಾತವಾಗಿದ್ದು, ಕಣ್ಣಿಂದ ಕಂಡರೂ ನಂಬಲು ಸಾಧ್ಯವಾಗಲಿಲ್ಲ" ಎಂದು 27 ವರ್ಷದ ಮೊಂಟೊಯೊ ಹೇಳಿದ್ದಾರೆ. "ಸುತ್ತಮುತ್ತ ಎಲ್ಲರೂ ಏದುಸಿರು ಬಿಡುತ್ತಿದ್ದರು. ಪ್ರತಿಯೊಬ್ಬರಿಗೂ ಕಣ್ಣೀರು ಕಟ್ಟೆಯೊಡೆಯಿತು. ಎಲ್ಲರೂ ಆಘಾತಕ್ಕೆ ಒಳಗಾದರು" ಎಂದು ವಿವರಿಸಿದ್ದಾರೆ.

ಅಪಘಾತದ ವೀಡಿಯೊಗಳು ಹೃದಯ ವಿದ್ರಾವಕ ಎಂದು ಡಲ್ಲಾಸ್ ಮೇಯರ್ ಎರಿಕ್ ಜಾನ್ಸನ್ ಹೇಳಿದ್ದಾರೆ. ಅಪಘಾತ ನಡೆದ ಸ್ಥಳವನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ನಿಯಂತ್ರಣಕ್ಕೆ ಪಡೆದಿದ್ದು, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೆರವಾಗಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.

ಕಿಂಗ್ ಕೋಬ್ರಾ ವಿಮಾನ ಬಿ-17ಗೆ ಢಿಕ್ಕಿ ಹೊಡೆದಾಗ ಆದ ಆಘಾತವನ್ನು ವೀಡಿಯೊ ಸೆರೆ ಹಿಡಿಯಲಾಗಿದೆ. ಎದುರಿನಿಂದ ಬಂದ ಕಿಂಗ್ ಕೋಬ್ರಾ ವಿಮಾನ ಬಿ-17ಗೆ ಡಿಕ್ಕಿ ಹೊಡೆದಾಗ ಬೆಂಕಿ ಹಾಗೂ ಹೊಗೆಯ ದೊಡ್ಡ ಉಂಡೆ ಕಾಣಿಸಿಕೊಂಡಿತು. ಕಿಂಗ್‍ ಕೋಬ್ರಾ ಅಮೆರಿಕದ ಯುದ್ಧ ವಿಮಾನವಾಗಿದ್ದು, ಎರಡನೇ ಮಹಾಯುದ್ಧದ ವೇಳೆ ಸೋವಿಯತ್ ಪಡೆಗಳು ಬಹುತೇಕ ಇದನ್ನು ಬಳಸುತ್ತಿದ್ದವು. ಬಿ-17 ನಾಲ್ಕು ಎಂಜಿನ್ ಹೊಂದಿದ ಬಾಂಬರ್ ಆಗಿದ್ದು, ಜರ್ಮನಿಯ ಮೇಲಿನ ದಾಳಿ ವೇಳೆ ಇದು ಬಳಕೆಯಾಗಿತ್ತು. ಇಷ್ಟು ವರ್ಷಗಳ ಬಳಿಕವೂ ಎರಡೂ ವಿಮಾನಗಳು ಹಾರಾಡುವ ಸ್ಥಿತಿಯಲ್ಲಿದ್ದುದು ಅಚ್ಚರಿ ಎಂದು ತಜ್ಞರು ಹೇಳಿದ್ದಾರೆ.

Similar News