ಶಾಂತಿ ಪ್ರಕಾಶನದ ಕೃತಿಗಳು ಹೃದಯಗಳನ್ನು ಬೆಸೆಯುತ್ತಿವೆ: ಮುಹಮ್ಮದ್ ಕುಂಞಿ

Update: 2022-11-13 12:24 GMT

ಶಾರ್ಜಾ: ಇಂದಿನ ಕಲುಷಿತ ವಾತಾವರಣದಲ್ಲಿ ಮನುಷ್ಯರ ಮಧ್ಯೆ ಗೋಡೆಗಳನ್ನು ನಿರ್ಮಿಸಿ ಹೃದಯವನ್ನು ಬೇರ್ಪಡಿಸುತ್ತಿರುವಾಗ ಅವರನ್ನು ಒಗ್ಗೂಡಿಸಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಶಾಂತಿ ಪ್ರಕಾಶನ ಮಾಡುತ್ತಿದೆ. ಪ್ರಕಾಶನ ಪ್ರಕಟಿಸಿದ ಸುಮಾರು ಮುನ್ನೂರಕ್ಕೂ ಹೆಚ್ಚಿನ ಕೃತಿಗಳು ಮನುಷ್ಯರ ಹೃದಯವನ್ನು ಪರಸ್ಪರ ಬೆಸೆಯುವ ಕೆಲಸವನ್ನು ಮಾಡುತ್ತಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹೇಳಿದರು.

ಶಾರ್ಜಾದ ಎಕ್ಸ್‌ಪೋ ಸೆಂಟರ್‌ನಲ್ಲಿ ನಡೆದ ಶಾರ್ಜಾ ಅಂತರ್‌ ರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಇಸ್ಲಾಮೋಫೋಬಿಯಾ ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಇಸ್ಲಾಮಿನ ಮೌಲ್ಯಗಳನ್ನು ಮತ್ತು ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜೀವನ ಸಂದೇಶಗಳನ್ನು ಜನರಿಗೆ ತಿಳಿಸುವ ಅಗತ್ಯವಿದೆ ಮತ್ತು ಅದನ್ನು ಶಾಂತಿ ಪ್ರಕಾಶನವು ಮಾಡುತ್ತಿದೆ ಎಂದು ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ, ಬ್ಯಾರೀಸ್ ವೆಲ್ಫೇರ್ ಫೋರಮ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ, ಅಬುಧಾಬಿ ನಿಹಾಲ್ ರೆಸ್ಟೋರೆಂಟ್‌ನ ಮಾಲಕ ಸುಂದರ್ ಶೆಟ್ಟಿ, ಹಿದಾಯ ಫೌಂಡೇಶನ್ ಯುಎಇ ಅಧ್ಯಕ್ಷ ಅಹ್ಮದ್ ಬಾವ, ಲೇಖಕರಾದ ಮನೋಹರ್ ತೋನ್ಸೆ, ಇರ್ಷಾದ್ ಮೂಡುಬಿದಿರೆ, ಯಾಕೂಬ್ ಖಾದರ್ ಗುಲ್ವಾಡಿ, ಅನ್ಸಾರ್ ತೋನ್ಸೆ ಉಪಸ್ಥಿತರಿದ್ದರು.

Similar News