​ಮಿಕ್ಸೋಪತಿ ವಿರುದ್ಧ ಧ್ವನಿ ಎತ್ತಿ: ವೈದ್ಯರಿಗೆ ಡಾ.ಶಾಂತಾರಾಮ ಶೆಟ್ಟಿ ಸಲಹೆ

Update: 2022-11-13 13:31 GMT

ಮಂಗಳೂರು: ಅಲೋಪತಿ ಜತೆಗೆ ಯಾವುದೇ ವೈದ್ಯಪದ್ಧತಿಗಳನ್ನು ಸೇರಿಸುವ ಪ್ರಯತ್ನ ಬೇಡ. ಇಂಥ ಹುನ್ನಾರವನ್ನು ವೈದ್ಯರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಹಿರಿಯ ವೈದ್ಯ ಡಾ.ಶಾಂತಾರಾಮ ಶೆಟ್ಟಿ ವೈದ್ಯ ಸಮುದಾಯಕ್ಕೆ ಕರೆ ನೀಡಿದರು.

ಶುಕ್ರವಾರ ರಾತ್ರಿ ನಗರದ ಐಎಂಎ ಭವನದಲ್ಲಿ ಮಂಗಳೂರು ಐಎಂಎ ಹೊಸ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, "ಅಲೋಪತಿ ಜತೆಗೆ ಆಯುರ್ವೇದ ಹಾಗೂ ಇತರ ವೈದ್ಯ ಪದ್ಧತಿಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಇದು ಆರೋಗ್ಯವಂತ ಸಮಾಜಕ್ಕೆ ಮಾರಕ. ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅವಕಾಶ ನೀಡುವುದು ಅಪಾಯಕಾರಿ" ಎಂದು ಸ್ಪಷ್ಟಪಡಿಸಿದರು.

"ಪ್ರತಿ ವೈದ್ಯ ಪದ್ಧತಿಗೂ ಅದರದ್ದೇ ಆದ ಮಹತ್ವ ಇದೆ. ಆಯುರ್ವೇದಕ್ಕೆ ನಮ್ಮ ವಿರೋಧ ಇಲ್ಲ; ಅದು ಕೂಡಾ ಒಂದು ಶ್ರೇಷ್ಠ ವಿಜ್ಞಾನ. ಆದರೆ ಈ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಜ್ಞಾನ ಪರಂಪರೆ ತಂದೆಯಿಂದ ಮಗ ಅಥವಾ ಇತರ ಸಂಬಂಧಿಕರಿಗೇ ಸೀಮಿತವಾಗಿದೆ. ಆದ್ದರಿಂದ ಅದರ ಸಾಮರ್ಥ್ಯಗಳು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆ ಕ್ಷೇತ್ರದಲ್ಲೂ ಸಂಶೋಧನೆಗಳು ನಡೆದು ಅದರ ಚಿಕಿತ್ಸಕ ಗುಣಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಂತಾಗಬೇಕು" ಎಂದು ವಿಶ್ಲೇಷಿಸಿದರು.

ದೇಶದ ವೈದ್ಯಕೀಯ ರಂಗ ಇಂದು ಸಂಕಷ್ಟದ ಸನ್ನಿವೇಶವನ್ನು ಎದುರಿಸುತ್ತಿದ್ದು, ದೇಶಿ ಭಾಷೆಗಳಲ್ಲಿ ವೈದ್ಯ ಶಿಕ್ಷಣ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ಬೋಧಿಸುವ ಪ್ರಯತ್ನಗಳೂ ನಡೆದಿವೆ. ಆದರೆ ವೈದ್ಯ ಶಿಕ್ಷಣಕ್ಕೆ ಇಂಗ್ಲಿಷ್ ಸೂಕ್ತ ಭಾಷೆ. ಇದರಲ್ಲಿ ಯಾವುದೇ ಬದಲಾವಣೆ ಸಲ್ಲದು ಎಂದು ಪ್ರತಿಪಾದಿಸಿದರು.

ದೇಶ ಭಾಷೆಗಳಿಗೆ ಅದರದ್ದೇ ಆದ ಮಹತ್ವ ಇದೆ. ಆದರೆ ವೈದ್ಯ ಶಿಕ್ಷಣದಂಥ ವಿಚಾರ ಬಂದಾಗ ಇಂಗ್ಲಿಷ್ ಸೂಕ್ತ ಭಾಷೆ. ನೆಲ್ಸನ್ ಮಂಡೇಲಾ ಹೇಳುವಂತೆ ಇಂಗ್ಲಿಷ್‍ನಲ್ಲಿ ಬೋಧಿಸಿದರೆ ವಿಚಾರ ತಲೆಗೆ ಹೋಗುತ್ತದೆ. ದೇಶಭಾಷೆಯಲ್ಲಿ ಬೋಧಿಸಿದರೆ ಹೃದಯಕ್ಕೆ ತಟ್ಟುತ್ತದೆ. ಬೋಧಕ ವಿಚಾರಗಳು ಮೆದುಳಿಗೆ ಮುಟ್ಟಬೇಕೇ ವಿನಃ ಹೃದಯಕ್ಕಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮಾಹೆ ವಿವಿಯ ಸಹ ಕುಲಾಧಿಪತಿ ಡಾ.ವೆಂಕಟರಾಯ ಪ್ರಭು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೈದ್ಯರು ವೃತ್ತಿಯಲ್ಲಿ ಉನ್ನತಿ ಸಾಧಿಸುವ ಮತ್ತು ಒಗ್ಗೂಡುವ ನಿಟ್ಟಿನಲ್ಲಿ ಹೊಸ ತಂಡ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಅವರು ಸಲಹೆ ಮಾಡಿದರು.

ನೂತನ ಅಧ್ಯಕ್ಷ ಡಾ.ವೇಣುಗೋಪಾಲ್, ಕಾರ್ಯದರ್ಶಿ ಡಾ.ಅರ್ಚಿತ್ ಬೋಳೂರು, ಖಜಾಂಚಿ ಡಾ.ನಂದಕಿಶೋರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಡಾ.ಸತ್ಯಮೂರ್ತಿ ಐತಾಳ್, ನಿರ್ಗಮಿತ ಕಾರ್ಯದರ್ಶಿ ಸದಾನಂದ ಪೂಜಾರಿ, ನಿರ್ಗಮಿತ ಖಜಾಂಚಿ ಡಾ.ಜಿ.ಕೆ.ಭಟ್ ಸಂಕಬಿತ್ತಿಲು ಮತ್ತಿತರರು ಉಪಸ್ಥಿತರಿದ್ದರು.

Similar News