×
Ad

​ದಿಲ್ಲಿ ಮನಪಾ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲವೆಂದು ದೂರವಾಣಿ ಟವರ್ ಹತ್ತಿ ಕುಳಿತ ಆಪ್ ನಾಯಕ

Update: 2022-11-13 19:41 IST

ಹೊಸದಿಲ್ಲಿ,ನ.13: ಮುಂಬರುವ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಗೆ ತನಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಕುಪಿತ ಆಪ್‌ನ ಮಾಜಿ ಕೌನ್ಸಿಲರ್ ಹಸೀಬ್-ಅಲ್-ಹಸನ್ ನಗರದ ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯ ದೂರವಾಣಿ ಟವರ್ ಹತ್ತಿ ಕುಳಿತ ಘಟನೆ ರವಿವಾರ ಇಲ್ಲಿ ನಡೆದಿದೆ. ಫೇಸ್‌ಬುಕ್‌ನಲ್ಲಿ ಲೈವ್ ಆಗಿಯೂ ಬಂದಿದ್ದ ಹಸನ್ ಆಪ್ ನಾಯಕರಾದ ಆತಿಶಿ ಮತ್ತು ದುರ್ಗೇಶ ಪಾಠಕ್ ಬಳಿ ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ತನ್ನ ಮೂಲ ದಾಖಲೆಗಳಿವೆ. ನಾಮಪತ್ರಗಳನ್ನು ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ. ಆದರೆ ಈ ನಾಯಕರು ತನ್ನ ದಾಖಲೆಗಳನ್ನು ಮರಳಿಸುತ್ತಿಲ್ಲ ಎಂದು ಆರೋಪಿಸಿದ್ದರು. ತಾನು ಟವರ್‌ನಿಂದ ಬಿದ್ದು ಸತ್ತರೆ ಅದಕ್ಕೆ ಆಪ್ ಮತ್ತು ಈ ಇಬ್ಬರು ನಾಯಕರೇ ಹೊಣೆ ಎಂದೂ ಅವರು ಹೇಳಿದ್ದರು.ಹಸನ್ ಆರೋಪಗಳಿಗೆ ಆಪ್ ನಾಯಕರು ಪ್ರತಿಕ್ರಿಯಿಸಿಲ್ಲ.

ಪಕ್ಷವು ತನಗೆ ಟಿಕೆಟ್ ನೀಡುತ್ತದೆಯೇ ಇಲ್ಲವೇ ಎಂಬ ಬಗ್ಗೆ ತಾನು ತಲೆಕೆಡಿಸಿಕೊಂಡಿಲ್ಲ,ಆದರೆ ತನಗೆ ದಾಖಲೆಗಳು ವಾಪಸ್ ಬೇಕು ಎಂದು ಹಸನ್ ಹೇಳಿದ್ದಾರೆ.ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಸನ್‌ರ ಮನವೊಲಿಸಿ ಟವರ್‌ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.4ರಂದು ನಡೆಯಲಿರುವ ಎಂಸಿಡಿ ಚುನಾವಣೆಗೆ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಆಪ್ ಶನಿವಾರ ಬಿಡುಗಡೆಗೊಳಿಸಿತ್ತು.

Similar News