ವಿದ್ಯುನ್ಮಾನ ಸಾಧನಗಳ ಜಪ್ತಿ ಕುರಿತು ಅರ್ಜಿಗೆ ಉತ್ತರಿಸದ ಕೇಂದ್ರಕ್ಕೆ ದಂಡ ವಿಧಿಸಿದ ಸುಪ್ರೀಂಕೋರ್ಟ್

Update: 2022-11-14 10:40 GMT

ಹೊಸದಿಲ್ಲಿ,ನ.14: ಡಿಜಿಟಲ್ ಮತ್ತು ವಿದ್ಯುನ್ಮಾನ ಸಾಧನಗಳು ಹಾಗೂ ಅವುಗಳ ಕಂಟೆಂಟ್‌ಗಳ ವಶ, ಪರಿಶೀಲನೆ ಮತ್ತು ಸಂರಕ್ಷಣೆ ಕುರಿತು ಮಾರ್ಗಸೂಚಿಗಳನ್ನು ನಿರ್ದಿಷ್ಟಗೊಳಿಸಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ನಿರ್ದೇಶನಗಳನ್ನು ಕೋರಿರುವ ಅರ್ಜಿಗೆ ಉತ್ತರಿಸದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು (Supreme Court) ಕೇಂದ್ರಕ್ಕೆ (Union Govt) 25,000 ರೂ.ಗಳ ದಂಡವನ್ನು ವಿಧಿಸಿದೆ.

ಎರಡು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿರುವ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎ.ಎಸ್.ಓಕಾ ಅವರ ಪೀಠವು,ಕೇಂದ್ರವು ದಂಡವನ್ನು ಪಾವತಿಸಿದ ಬಳಿಕವೇ ಉತ್ತರವನ್ನು ದಾಖಲಿಸಿಕೊಳ್ಳುವುದಾಗಿ ತಿಳಿಸಿದೆ.

ಶಿಕ್ಷಣ ತಜ್ಞರಾದ ಜೆಎನ್‌ಯುದ ಪ್ರೊ.ರಾಮ ರಾಮಸ್ವಾಮಿ, ಸಾವಿತ್ರಿಬಾಯಿ ಫುಲೆ ಪುಣೆ ವಿವಿಯ ಪ್ರೊ.ಸುಜಾತಾ ಪಟೇಲ್, ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿವಿಯ ಪ್ರೊ.ಮಾಧವ ಪ್ರಸಾದ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ.ಮುಕುಲ್ ಕೇಶವನ್ ಮತ್ತು ಸೈದ್ಧಾಂತಿಕ ಪರಿಸರ ಅರ್ಥಶಾಸ್ತ್ರಜ್ಞ ದೀಪಕ ಮಲ್ಘಾನ್ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ನ.11ರಂದು ಕೈಗೆತ್ತಿಕೊಂಡಿದ್ದ ಸಂದರ್ಭ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ವಿದ್ಯುನ್ಮಾನ ಸಾಧನಗಳನ್ನು ಪ್ರವೇಶಿಸುವ ಅಥವಾ ವಶಪಡಿಸಿಕೊಳ್ಳುವ ಮುನ್ನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯುವುದು ಮತ್ತು ಅವು ಆರೋಪಿತ ಅಪರಾಧಕ್ಕೆ ಹೇಗೆ ಸಂಬಂಧಿಸಿವೆ ಎನ್ನುವುದನ್ನು ನಿರ್ದಿಷ್ಟ ಪಡಿಸುವುದು ಸೇರಿದಂತೆ ಹಲವಾರು ನಿರ್ದೇಶನಗಳನ್ನು ತನಿಖಾ ಸಂಸ್ಥೆಗಳು ಮತ್ತು ಪೊಲೀಸರಿಗೆ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.

ಆ.5ರಂದು ಹಿಂದಿನ ವಿಚಾರಣೆಯ ಸಂದರ್ಭ ಪ್ರತಿ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರವು ಅರ್ಜಿಯು ಅಂಗೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿತ್ತು. ಆದರೆ ಸರಕಾರದ ಉತ್ತರದಿಂದ ತೃಪ್ತಿಗೊಳ್ಳದ ನ್ಯಾಯಾಲಯವು ಹೊಸದಾಗಿ ಉತ್ತರವನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.
ಪ್ರಕರಣದ ಮುಂದಿನ ವಿಚಾರಣೆಯು ಡಿ.5ರಂದು ನಡೆಯಲಿದೆ.

Similar News