ಆರೋಗ್ಯ ಸೇವಾ ಕ್ಷೇತ್ರದಲ್ಲಿ ಯೆನೆಪೊಯ ಸಂಸ್ಥೆಗಳಿಂದ ಮಾದರಿ ಸೇವೆ: ಸಚಿವ ಶ್ರೀಪಾದ್ ನಾಯ್ಕ್ ಶ್ಲಾಘನೆ

► ಯೆನೆಪೊಯ ಫಾರ್ಮಸಿ ಕಾಲೇಜು ಕಟ್ಟಡ ಉದ್ಘಾಟನೆ ► ಯೆನೆಪೊಯ ಆಯುರ್ವೇದ ಕಾಲೇಜಿನ ಆಸ್ಪತ್ರೆ ಕಟ್ಟಡವನ್ನು ದಿ.ವಿಜಯ ಶ್ರೀಪಾದ್ ನಾಯ್ಕ್ ಹೆಸರಿಗೆ ಅರ್ಪಣೆ

Update: 2022-11-14 16:14 GMT

ಮಂಗಳೂರು, ನ.14: ಗುಣಮಟ್ಟದ ಆರೋಗ್ಯ ಸೇವೆಯ ಮೂಲಕ ಯೆನೆಪೊಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಾದರಿಯಾಗಿದೆ ಎಂದು ಭಾರತ ಸರಕಾರದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ್ ನಾಯ್ಕ್ ತಿಳಿಸಿದ್ದಾರೆ.

ಯೆನೆಪೊಯ ಪರಿಗಣಿತ ವಿವಿಯ ಅಂಗ ಸಂಸ್ಥೆಯಾದ ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನೂತನವಾಗಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನೆ ಮತ್ತು ನರಿಂಗಾನದ ಆಯುಷ್ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಂಡ ಯೆನೆಪೊಯ ಆಯುರ್ವೇದ ಕಾಲೇಜಿನ ಆಸ್ಪತ್ರೆ ಕಟ್ಟಡವನ್ನು ದಿ. ವಿಜಯ ಶ್ರೀಪಾದ್ ನಾಯ್ಕ್ ಅವರ ನೆನಪಿಗೋಸ್ಕರ ಕೇಂದ್ರ ಸಚಿವರು ಅರ್ಪಣೆ ಮಾಡಿ ಮಾತನಾಡುತ್ತಿದ್ದರು.

"ಗೋವಾ ನಾನು ಬೆಳೆದ ಊರಾದರೂ ನನ್ನ ದಿ. ಪತ್ನಿಯ ಹೆಸರಿನಲ್ಲಿ ವೈದ್ಯಕೀಯ ಸೇವೆ ಜನರಿಗೆ ದೊರೆಯುವ ಸ್ಮರಣೀಯ ಕಾರ್ಯವನ್ನು ಕೈಗೊಂಡ ಯೆನೆಪೊಯ ಸಂಸ್ಥೆಯ ಕಾರ್ಯಕ್ರಮ ನನ್ನ ಬದುಕಿನಲ್ಲಿ ಅವಿಸ್ಮರಣೀಯ ದಿನವಾಗಿದೆ" ಎಂದು ಸಚಿವ ಶ್ರೀಪಾದ ನಾಯ್ಕ್ ಯೆನಪೊಯ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ವಿಧಾನ ಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಮಾತನಾಡುತ್ತಾ, ವೈದ್ಯಕೀಯ ಕ್ಷೇತ್ರದಲ್ಲಿ ವಿಭಿನ್ನ ವೈದ್ಯಕೀಯ ಪದ್ಧತಿಗಳಿದ್ದರೂ ರೋಗಿಗಳ ಹಿತದ ದೃಷ್ಟಿಯಿಂದ ಅಲೋಪತಿ, ಆಯುರ್ವೇದ ಎರಡೂ ಪದ್ಧತಿಗಳ ಸೌಲಭ್ಯವನ್ನು ಸಾರ್ವಜನಿಕರಿಗೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಯೆನೆಪೊಯ ಫಾರ್ಮಸಿ ಕಾಲೇಜು ಇನ್ನೊಂದು ಹೆಜ್ಜೆಯಾಗಿದೆ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ವಹಿಸಿ ಯೆನೆಪೊಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಚಿವ ಶ್ರೀಪಾದ್ ನಾಯ್ಕ್ ಅವರ ದಿವಂಗತ ಪತ್ನಿಯ ನೆನಪಿನಲ್ಲಿ ಆರೋಗ್ಯ ಸೇವೆ ನೀಡುವ ಅವಕಾಶ ಕಲ್ಪಿಸಿದ ಸಚಿವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಗ್ರಾಮ ಯೋಜನೆಯ ಅಂಗವಾಗಿ ಯೆನೆಪೊಯ ಸಂಸ್ಥೆಯ ವತಿಯಿಂದ ಕಿನ್ಯ ಗ್ರಾಮದ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.

ಸಚಿವರ ಜೊತೆ ಡಾ. ಯೆನೆಪೊಯ ಅಬ್ದುಲ್ಲ ಕುಂಞಿಯವರ 75ನೆ ಜನ್ಮ ದಿನಾಚರಣೆಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು.

ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಕುಂಞಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕುಲಪತಿ ಡಾ.ವಿಜಯ ಕುಮಾರ್, ಸಹ ಕುಲಪತಿ ಶ್ರೀ ಪತಿರಾವ್, ಕುಲಸಚಿವ ಗಂಗಾಧರ ಸೋಮಯಾಜಿ, ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಎಚ್. ಸ್ವಾಗತಿಸಿದರು. ಯೆನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಮುಹಮ್ಮದ್ ಗುಲ್ಝಾರ್ ಅಹ್ಮದ್ ವಂದಿಸಿದರು.

Similar News