ಆರಾಧನಾ ಸ್ಥಳಗಳ ಕಾಯ್ದೆ ಡಿ.12ರ ಮೊದಲು ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Update: 2022-11-14 17:06 GMT

ಹೊಸದಿಲ್ಲಿ, ನ. 14: ಆರಾಧನಾ ಸ್ಥಳಗಳ (ವಿಶೇಷ ವಿಧಿಗಳ) ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಲು ಸುಪ್ರೀಂ ಕೋರ್ಟ್ (Supreme Court)ಸೋಮವಾರ ಕೇಂದ್ರ ಸರಕಾರಕ್ಕೆ ಡಿಸೆಂಬರ್ 12ರವರೆಗೆ ಕಾಲಾವಕಾಶ ನೀಡಿದೆ.

ಭಾರತಕ್ಕೆ ಸ್ವಾತಂತ್ರ ಸಿಕ್ಕಿದಾಗ ಆರಾಧನಾ ಸ್ಥಳಗಳ ಸ್ವರೂಪ ಹೇಗಿತ್ತೋ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕು; ಅದಕ್ಕೆ ಯಾವುದೇ ಬದಲಾವಣೆಯನ್ನು ತರುವಂತಿಲ್ಲ ಎಂದು ಕಾನೂನು ಹೇಳುತ್ತದೆ.

ಬಾಬರಿ ಮಸೀದಿ(Babri Masjid) ವಿವಾದ ಉತ್ತುಂಗದಲ್ಲಿದ್ದಾಗ, ಆರಾಧನಾ ಸ್ಥಳಗಳಿಗೆ ಸಂಬಂಧಿಸಿ ಭವಿಷ್ಯದಲ್ಲಿ ಅಂಥದೇ ಕೋಮು ಸಂಘರ್ಷಗಳು ನಡೆಯುವುದನ್ನು ತಪ್ಪಿಸುವುದಕ್ಕಾಗಿ ಆ ಕಾಯ್ದೆಯನ್ನು ತರಲಾಗಿತ್ತು.

ಆದಾಗ್ಯೂ, ಆ ಕಾಯ್ದೆಯು ಬಾಬರಿ ಮಸೀದಿಗೆ ವಿನಾಯಿತಿ ನೀಡಿತ್ತು.

ಈ ಕಾನೂನನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ (Ashwini Kumar)ಉಪಾಧ್ಯಾಯ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿದ್ದಾರೆ.

ಈ ವಿಷಯದಲ್ಲಿ ನನಗೆ ಸರಕಾರದೊಂದಿಗೆ ಸಮಾಲೋಚನೆ ನಡೆಸಲು ಸಾಧ್ಯವಾಗುವಂತೆ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ ಮೊದಲ ವಾರಕ್ಕೆ ನಿಗದಿಪಡಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta)ಸೋಮವಾರ ನ್ಯಾಯಾಲಯಕ್ಕೆ ಮನವಿ ಮಾಡಿದರುಎಂದು ‘ಬಾರ್ ಆ್ಯಂಡ್ ಬೆಂಚ್’('Bar and Bench') ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್(D.Y. Chandrachud) ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ (Ny. JB Pardiwala)ಅವರನ್ನೊಳಗೊಂಡ ಪೀಠವು ಈ ಮನವಿಯನ್ನು ಅಂಗೀಕರಿಸಿತು.

‘‘ಪ್ರತಿ ಅಫಿದಾವಿತನ್ನು ಡಿಸೆಂಬರ್ 12ರಂದು ಅಥವಾ ಅದಕ್ಕೆಮೊದಲುಸಲ್ಲಿಸಬೇಕು. ನಾವು ಪ್ರಕರಣದ ಮುಂದಿನ ವಿಚಾರಣೆಯನ್ನು 2023 ಜನವರಿ ಮೊದಲ ವಾರದಲ್ಲಿ ನಡೆಸುತ್ತೇವೆ’’ ಎಂದು ನ್ಯಾಯಾಲಯಹೇಳಿತು.

Similar News