ಗುಜರಾತ್ ಸೇತುವೆ ದುರಂತ: ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Update: 2022-11-15 07:09 GMT

ಅಹಮದಾಬಾದ್: ಅಕ್ಟೋಬರ್ 30 ರಂದು ಕುಸಿದು 130 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿ ತೂಗು ಸೇತುವೆಯ ನವೀಕರಣದ ಗುತ್ತಿಗೆಯನ್ನು  ನೀಡಿದ ರೀತಿಗೆ  ಗುಜರಾತ್ ಹೈಕೋರ್ಟ್ ಇಂದು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

"ಸಾರ್ವಜನಿಕ ಸೇತುವೆಯ ದುರಸ್ತಿ ಕಾಮಗಾರಿಗೆ ಟೆಂಡರ್ ಏಕೆ ಕರೆದಿಲ್ಲ? ಏಕೆ ಬಿಡ್‌ಗಳನ್ನು ಆಹ್ವಾನಿಸಿಲ್ಲ?"  ಎಂದು ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ರಾಜ್ಯದ ಉನ್ನತ ಅಧಿಕಾರಿಯಾದ ಮುಖ್ಯ ಕಾರ್ಯದರ್ಶಿಗೆ ಪ್ರಶ್ನಿಸಿದರು.

ಅಜಂತಾ ಬ್ರಾಂಡ್‌  ಗೋಡೆ ಗಡಿಯಾರಗಳ ಹೆಸರುವಾಸಿಯಾದ ಒರೆವಾ ಗ್ರೂಪ್‌ಗೆ ಮೊರ್ಬಿ ಪುರಸಭೆಯು 15 ವರ್ಷಗಳ ಗುತ್ತಿಗೆಯನ್ನು ನೀಡಿತ್ತು.

"ಇಂತಹ ಮಹತ್ವದ ಕೆಲಸದ ಅಗ್ರಿಮೆಂಟ್ ಕೇವಲ ಒಂದೂವರೆ ಪುಟಗಳಲ್ಲಿ ಹೇಗೆ ಪೂರ್ಣಗೊಂಡಿತು?. ಯಾವುದೇ ಟೆಂಡರ್‌ ಕರೆಯದೇ ರಾಜ್ಯದ ದೊಡ್ಡ ಮೊತ್ತವನ್ನು ಅಜಂತಾ ಕಂಪನಿಗೆ ನೀಡಲಾಗಿದೆಯೇ? ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದ್ದಾರೆ.

2008 ರಲ್ಲಿ ಸಹಿ ಮಾಡಿದ ಒಪ್ಪಂದ  2017 ರ ನಂತರ ನವೀಕರಿಸದಿದ್ದರೂ ಕೂಡ ಸೇತುವೆಯನ್ನು ಕಂಪನಿಯು ಯಾವ ಆಧಾರದ ಮೇಲೆ ನಿರ್ವಹಿಸುತ್ತಿದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಕೇಳಿದೆ.

ದುರಂತದ ಬಗ್ಗೆ ಆರು ಇಲಾಖೆಗಳಿಂದ ಉತ್ತರವನ್ನು ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ. ಶಾಸ್ತ್ರಿ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

Similar News