ಮೂಡಬಿದ್ರೆಯಲ್ಲಿ ರೈತರು ಸರಕಾರದ ವಿರುದ್ಧ ಪ್ರತಿಭಟಿಸಿಲ್ಲ, ಹಕ್ಕೊತ್ತಾಯ ಮಾತ್ರ

ಭಾರತೀಯ ಕಿಸಾನ್ ಸಂಘ ಹೇಳಿಕೆ

Update: 2022-11-15 11:02 GMT

ಮಂಗಳೂರು, ನ.15: ಮೂಡಬಿದ್ರೆಯಲ್ಲಿ ಇತ್ತೀಚೆಗೆ ರೈತರ ಕುಮ್ಕಿ ಭೂಮಿಗೆ ಹಕ್ಕುಪತ್ರ ನೀಡುವಂತೆ ಹಾಗೂ ರೈತರ ವಿವಿಧ ಬೇಡಿಕೆಗಲ ಈಡೇರಿಕೆಗೆ ಒತ್ತಾಯಿಸಿ ಹಕ್ಕೊತ್ತಾಯ ಮಾತ್ರವೇ ನಡೆದಿದೆ. ಅದು ಸರಕಾರದ ವಿರುದ್ಧದ ಪ್ರತಿಭಟನೆಯಲ್ಲ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕ ಹೇಳಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಮಿಥುನ್ ರೈ ಮತ್ತು ಮಾಜಿ ಶಾಸಕರಾದ ಅಭಯಚಂದ್ರ ಜೈನ್‌ರವರು ರೈತರ ಹಕ್ಕೊತ್ತಾಯ ಜಾಥವನ್ನು ಸರಕಾರದ ವಿರುದ್ಧದ ಪ್ರತಿಭಟನೆ ಎಂದು ಬಿಂಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದಾರೆ. ಅದನ್ನು ಖಂಡಿಸುವುದಾಗಿ ಹೇಳಿದರು.

ಅಭಯಚಂದ್ರ ಜೈನ್ 20 ವರ್ಷಗಳ ಕಾಲ ಶಾಸಕ, ಸಚಿವರಾಗಿದ್ದ ಸಂದರ್ಭದಲ್ಲಿ ರೈತರಿಗೆ ಕುಮ್ಕಿ ಹಕ್ಕನ್ನು ನೀಡಬೇಕೆಂಬ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿಲ್ಲ. ಯಾವುದೇ ಹೋರಾಟ ಮಾಡಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಡೀಮ್ಡ್ ಪಟ್ಟಿಯನ್ನು ಸಹ ಬಿಡುಗಡೆ ಮಾಡಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಮೂಡಬಿದ್ರೆಯಲ್ಲಿ ನಡೆದ ರೈತರ ಹಕ್ಕೊತ್ತಾಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಹೋರಾಟ ಯಶಸ್ವಿಯಾಗಿದೆ. ಇದನ್ನು ಭಾರತೀಯ ಕಿಸಾನ್ ಸಂಘ ಅಭಿನಂದಿಸುತ್ತದೆ. ಸಂಘದ ಹೋರಾಟದ ಯಶಸ್ಸು ಕಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ರೈತರಲ್ಲಿ ಗೊಂಡಲ ಮೂಡಿಸಲು ಕಾಂಗ್ರೆಸ್ ಬೆಂಬಲಿಸಿದೆ ಎಂಬ ಸುಳ್ಳು ಹೇಳಿಕೆಯನು ಕಾಂಗ್ರೆಸ್ ನಾಯಕರು ನೀಡಿದ್ದಾರೆ ಎಂದವರು ಹೇಳಿದರು.

ಭಾರತೀಯ ಕಿಸಾನ್ ಸಂಘದ ತತ್ವ ವಿಚಾರ ಒಪ್ಪಿ ರೈತ ಹೋರಾಟದಲ್ಲಿ ಯಾರೂ ಬೇಕಾದರೂ ಭಾಗವಹಿಸಬಹುದು. ಭಾರತೀಯ ಕಿಸಾನ್ ಸಂಘವು ಎ.27ರಂದು  ಮುಖ್ಯಮಂತ್ರಿ ಬಂದಿದ್ದ ಸಂದರ್ಭ ಕುಮ್ಕಿ ಹಕ್ಕು ನೀಡಬೇಕು ಮತ್ತು ಡೀಮ್ಡ್ ಫಾರೆಸ್ಟನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿತ್ತು. ಭಾರತೀಯ ಕಿಸಾನ್ ಸಂಘದ ಹೋರಾಟದ ಫಲವಾಗಿ ಡೀಮ್ಡ್‌ಗೆ ಒಳಪಟ್ಟಿರುವ ಸರ್ವೆ ನಂಬರುಗಳ ವಿವರದ ಪಟ್ಟಿಯನ್ನು ಸರಕಾರದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಉಪ ಕಾರ್ಯದರ್ಶಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಪ್ರಸ್ತುತ ಅಕ್ರಮ ಸಕ್ರಮೀಕರಣ ಕಾಯ್ದೆಯನ್ವಯ ಸಲ್ಲಿಸಿದ್ದ 94 ಸಿ, 94 ಸಿಸಿ ಮತ್ತು 57ರ ಅರ್ಜಿಗಳ ವಿಲೇವಾರಿ ಆರಂಭವಾಗಿದೆ. ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ರೈತರ ಕುಮ್ಕಿ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿ ಉಳ್ಳಾಲದಲ್ಲಿ ರೈತ ಹಕ್ಕೊತ್ತಾಯ ಜಾಥ ನಡೆಸಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕಿಸಾನ್ ಸಂಘದ ಮುಖಂಡರಾದ ಸುಖಾನಂದ ಶೆಟ್ಟಿ, ವಲೇರಿಯನ್ ಕುಟಿನ್ನೋ, ಜಯಾನಂದ ಪೂಜಾರಿ, ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Similar News