ಸೋನಭದ್ರದಲ್ಲಿ ಆದಿತ್ಯನಾಥ್ ಕಾರ್ಯಕ್ರಮ : ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸುಕಾಲೊ ಗೊಂಡ ವಶಕ್ಕೆ

Update: 2022-11-15 17:26 GMT

ಲಕ್ನೋ (ಉ.ಪ್ರ.), ನ. 15: ಪರಿಶಿಷ್ಟ ಪಂಗಡಗಳನ್ನು ಗೌರವಿಸುವ ಹಾಗೂ ಅವರಿಗೆ ಭೂಮಿ ಹಕ್ಕಿನ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ಸೋನಭದ್ರ ಜಿಲ್ಲೆಯ ಬಭನಿ ಪ್ರದೇಶಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಭೇಟಿ ನೀಡಲಿದ್ದ ಹಿನ್ನೆಲೆಯಲ್ಲಿ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸುಕಾಲೊ ಗೊಂಡ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸುಕಾಲೊ ಅವರು ಆಲ್ ಇಂಡಿಯಾ ಯೂನಿಯನ್ ಆಫ್ ಫಾರೆಸ್ಟ್ ವರ್ಕಿಂಗ್ ಪೀಪಲ್ (ಎಐಯುಎಫ್‌ಡಬ್ಲ್ಯುಪಿ)ಯ ಅಧ್ಯಕ್ಷ. ಈ ವಲಯದ 22 ಗ್ರಾಮಗಳ ಗ್ರಾಮಸ್ಥರ ಭೂಮಿ ಹಕ್ಕನ್ನು ವಿವರಿಸುವ ಮನವಿಯನ್ನು ನೀಡುವ ಉದ್ದೇಶದಿಂದ ಅವರು ಆದಿತ್ಯನಾಥ್ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. 

ಆದರೆ, ಅವರನ್ನು ಕಾರ್ಯಕ್ರಮದ ಮುನ್ನ ಬೆಳಗ್ಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ‘‘ಅವರು ಈಗಲೂ ಪೊಲೀಸ್ ವಶದಲ್ಲಿ ಇದ್ದಾರೆ. ನಾವು ಒಟ್ಟಿಗೆ ಇದ್ದೇವೆ. ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕಳುಹಿಸಿದರು. ಪೊಲೀಸ್ ಠಾಣೆಯಲ್ಲಿ ನಮ್ಮನ್ನು ಭೇಟಿಯಾಗಲು ಯಾರೊಬ್ಬರಿಗೂ ಅವಕಾಶ ನೀಡಿಲ್ಲ’’ ಎಂದು ಸುಕಾಲೊ ಅವರ ಜೊತಗಿರುವ ಆದಿವಾಸಿ ಹಕ್ಕುಗಳ ಹೋರಾಟಗಾರ ಕಿಸ್ಮತಿ ಗೊಂಡ ಅವರು ತಿಳಿಸಿದ್ದಾರೆ.

ಶೇ. 70 ಬುಡಕಟ್ಟು ಜನಸಂಖ್ಯೆ ಇರುವ ಸೋನಭದ್ರ ಪ್ರದೇಶದಲ್ಲಿ ಬುಡಕಟ್ಟು ಜನರ ಭೂಮಿ ಹಕ್ಕಿಗಾಗಿ ಸುಕಾಲೊ ಅವರು ಸಕ್ರಿಯ ಹೋರಾಟ ನಡೆಸುತ್ತಿದ್ದಾರೆ. ಕನ್ಹರ್ ಅಣೆಕಟ್ಟು ಯೋಜನೆಯ ಕಾಮಗಾರಿ ನಿಲ್ಲಿಸುವಂತೆ ಅಭಿಯಾನ ನಡೆಸುತ್ತಿರುವ ನಡುವೆ 2015ರಲ್ಲಿ ಅವರು ಒಂದು ತಿಂಗಳು ಕಾರಾಗೃಹದಲ್ಲಿ ಇದ್ದರು. 
ಸುಕಾಲೊ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ  ಪ್ರತಿಕ್ರಿಯಿಸಿರುವ ಪೊಲೀಸ್ ಅಧೀಕ್ಷಕ ಯಶ್ವೀರ್ ಸಿಂಗ್ ಅವರ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಸುಕಾಲೊ ಗೊಂಡ ಅವರನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಅವರನ್ನು ಮೊದಲೇ ಯಾಕೆ ಬಂಧಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿಲ್ಲ.

Similar News