ರಾಜ್ಯದ ಪಾಲನ್ನು ಬಿಡುಗಡೆಗೊಳಿಸದಿದ್ದರೆ ಜಿಎಸ್ಟಿ ಪಾವತಿ ಸ್ಥಗಿತ: ಕೇಂದ್ರಕ್ಕೆ ಮಮತಾ ಎಚ್ಚರಿಕೆ
Update: 2022-11-15 23:17 IST
ಕೋಲ್ಕತಾ,ನ.15: ಕೇಂದ್ರವು ರಾಜ್ಯಕ್ಕೆ ಸಲ್ಲಬೇಕಿರುವ ಬಾಕಿಗಳನ್ನು ಪಾವತಿಸದಿದ್ದರೆ ಜಿಎಸ್ಟಿಯನ್ನು ಪಾವತಿಸುವುದನ್ನು ನಿಲ್ಲಿಸಬೇಕಾಗಬಹುದು ಎಂದು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಜಾರಗ್ರಾಮದಲ್ಲಿ ಆದಿವಾಸಿ ಸಂಪರ್ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ಯಾನರ್ಜಿ,ಕೇಂದ್ರ ಸರಕಾರವು ನರೇಗಾ ನಿಧಿಯನ್ನು ಬಿಡುಗಡೆಗೊಳಿಸುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರದ ವಿರುದ್ಧ ಪ್ರತಿಭಟಿಸುವಂತೆ ರಾಜ್ಯದ ಆದಿವಾಸಿಗಳಿಗೆ ಅವರು ಕರೆ ನೀಡಿದರು.
ನರೇಗಾ ಯೋಜನೆಯಡಿ ಹಣಪಾವತಿ ಕಡ್ಡಾಯವಾಗಿದೆ. ಹಾಗಿದ್ದರೂ ಈ ಸಂಬಂಧ ವರ್ಷದ ಹಿಂದೆ ನಾನು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದೆ. ನಾನು ಅವರ ಕಾಲಿಗೆ ಬಿದ್ದು ಬೇಡಬೇಕೇ ಎಂದು ಪ್ರಶ್ನಿಸಿದ ಬ್ಯಾನರ್ಜಿ,ನರೇಗಾ ಯೋಜನೆಯಡಿ ಪಶ್ಚಿಮ ಬಂಗಾಳದ ಬಾಕಿಗಳನ್ನು ಪಾವತಿಸುವಂತೆ ಕೇಂದ್ರವನ್ನು ಆಗ್ರಹಿಸಿದರು.