ಕೊರೆಯುವ ಚಳಿಯಲ್ಲಿ ವಿದ್ಯಾರ್ಥಿಗಳ ಬಟ್ಟೆಬಿಚ್ಚಿಸಿ ರ‍್ಯಾಗಿಂಗ್‌ !

Update: 2022-11-16 02:24 GMT

ಡೆಹ್ರಾಡೂನ್: ಎಂಬಿಬಿಎಸ್ (MBBS) ಪದವಿಯ 2019-20ನೇ ಬ್ಯಾಚ್‍ನ ಏಳು ವಿದ್ಯಾರ್ಥಿಗಳು ಕೆಲ ದಿನಗಳ ಹಿಂದೆ 40 ಮಂದಿ ಕಿರಿಯ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್‌ (Ragging) ಮಾಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಶ್ರೀನಗರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.

ನವೆಂಬರ್ 11ರಂದು ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗುರುತು ಮರೆಮಾಚಿಕೊಳ್ಳಲು ಮುಖಗಳನ್ನು ಮುಚ್ಚಿಕೊಂಡು ಬಂದ ಹಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‍ನ ಟೆರೇಸ್‍ನಲ್ಲಿ ಕೊರೆಯುವ ಚಳಿಯಲ್ಲಿ ಕಿರಿಯ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ರ‍್ಯಾಗಿಂಗ್‌ ನಡೆಸಿದರು ಎಂದು ಆಪಾದಿಸಲಾಗಿದೆ.

ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿಯೊಬ್ಬರ ಪೋಷಕರು ಮರುದಿನ ಕಾಲೇಜು ಆಡಳಿತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ನೀಡಿರುವ ವಿವರಗಳು ಸತ್ಯ ಎನ್ನುವುದು ಕಾಲೇಜು ತನಿಖಾ ಸಮಿತಿಯ ವಿಚಾರಣೆಯಿಂದಲೂ ದೃಢಪಟ್ಟಿದೆ. ವಿವಿಧ ಹಂತಗಳಲ್ಲಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಸಿಎಂಎಸ್ ರಾವತ್ ಹೇಳಿದ್ದಾರೆ.

30-40 ಕಿರಿಯ ವಿದ್ಯಾರ್ಥಿಗಳನ್ನು ಕರೆಸಿ ಲಿಖಿತ ಹೇಳಿಕೆ ಪಡೆಯಲಾಗಿದೆ ಹಾಗೂ ಅದನ್ನು ವಿವಿಧ ಆಯಾಮಗಳಲ್ಲಿ ಮರು ಪರಿಶೀಲಿಸಲಾಗಿದೆ. ಈ ಕೃತ್ಯ ಎಸಗಿದ್ದರು ಎನ್ನಲಾದ ಏಳು ವಿದ್ಯಾರ್ಥಿಗಳು ಹಿಂದೆ ಕೂಡಾ ಅಶಿಸ್ತು ಪ್ರದರ್ಶಿಸಿದ್ದರು. ಇವರು ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದ ಅಂಶಗಳನ್ನೂ ಸಂಗ್ರಹಿಸಲಾಗಿದೆ. ಸಮಿತಿ ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದ್ದಾರೆ.

ಈ ಏಳು ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ತರಗತಿಗಳಿಗೆ ಹಾಜರಾಗದಂತೆ ಡಿಬಾರ್ ಮಾಡಲಾಗಿದೆ. ಮತ್ತೆ ಇವರನ್ನು ತರಗತಿಗೆ ಸೇರಿಸುವ ಮುನ್ನ ಸಮಿತಿ ಇವರ ನಡವಳಿಕೆಯ ಮೌಲ್ಯಮಾಪನ ಮಾಡಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News