ರಾಜಕೀಯ ಒತ್ತಡದಿಂದ ತರಾತುರಿಯಲ್ಲಿ ಕೋವ್ಯಾಕ್ಸಿನ್ ಮಾರುಕಟ್ಟೆಗೆ: ‘ಸ್ಟಾಟ್’ ವರದಿ

Update: 2022-11-16 16:37 GMT

ಹೊಸದಿಲ್ಲಿ, ನ. 16: ಹೈದರಾಬಾದ್ ನ ಭಾರತ್ ಬಯೋಟೆಕ್ Bharat Biotech)ಕಂಪೆನಿಯು ಕೊರೋನ ವೈರಸ್ ಲಸಿಕೆ ‘ಕೋವ್ಯಾಕ್ಸಿನ್’'Covaxin')ನ್ನು ಅಭಿವೃದ್ಧಿಪಡಿಸುವ ಹಂತದಲ್ಲಿ, ಲಸಿಕೆಯನ್ನು ಶೀಘ್ರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಭರದಲ್ಲಿ ಹಲವು ಪ್ರಕ್ರಿಯೆಗಳನ್ನು ಉಪೇಕ್ಷಿಸಿತು ಹಾಗೂ ಭಾರತದ ಔಷಧ ನಿಯಂತ್ರಕ ಸಂಸ್ಥೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ)ಯು ಅದನ್ನು ನೋಡಿಯೂ ನೋಡದಂತೆ ಮಾಡಿತು ಎಂದು ಅಮೆರಿಕದ ಆರೋಗ್ಯ ಕೇಂದ್ರಿತ ಸುದ್ದಿ ವೆಬ್ಸೈಟ್ ‘ಸ್ಟಾಟ್’ 'stat')ತನ್ನ ತನಿಖಾ ವರದಿಯಲ್ಲಿ ಹೇಳಿದೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಂಪೆನಿಯ ಓರ್ವ ನಿರ್ದೇಶಕರು ಲಸಿಕೆ ಅಭಿವೃದ್ಧಿಯಲ್ಲಿನ ಲೋಪಗಳನ್ನು ಒಪ್ಪಿಕೊಂಡರು. ಸ್ವದೇಶಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಬೇಕೆನ್ನುವ ‘ರಾಜಕೀಯ ಒತ್ತಡ’ದಿಂದಾಗಿ ಕೆಲವೊಂದು ನಿರ್ದಿಷ್ಟ ಪ್ರಕ್ರಿಯೆಗಳನ್ನು ಕೈಬಿಡಲಾಯಿತು ಹಾಗೂ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ‘ವೇಗ’ವಾಗಿ ನಡೆಸಲಾಯಿತು ಎಂದು ಹೇಳಿದರು.

ಕಂಪೆನಿಯ ವಿರುದ್ಧದ ಆರೋಪಗಳಿಗೆ ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿರುವುದು ಇದೇ ಮೊದಲ ಬಾರಿಯಾಗಿದೆ.

ಡಬ್ಲುಎಚ್ಒನಿಂದ ಕೋವ್ಯಾಕ್ಸಿನ್ ಗೆ ನಿಷೇಧ

ಎಪ್ರಿಲ್ ನಲ್ಲಿ, ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯಲ್ಲಿ ಮಾದರಿ ತಯಾರಿಕಾ ಪರಿಪಾಠವನ್ನು ಪಾಲಿಸಲಾಗಿಲ್ಲ ಎಂದು ಹೇಳಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಸಂಸ್ಥೆಯ ಘಟಕ ಸಂಸ್ಥೆಗಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಪೂರೈಸುವುದನ್ನು ಸ್ಥಗಿತಗೊಳಿಸಿತು. 

ಕೋವ್ಯಾಕ್ಸಿನ್ ಗೆ ತುರ್ತು-ಬಳಕೆಯ ಪರವಾನಿಗೆ ಪಡೆದ ಬಳಿಕ, ಲಸಿಕೆಯ ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾರತ್ ಬಯೋಟೆಕ್ ಕೆಲವು ಬದಲಾವಣೆಗಳನ್ನು ತಂದಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ, ಆ ಬದಲಾವಣೆಗಳು ಯಾವುವು ಎನ್ನುವುದನ್ನು ಕಂಪೆನಿ ತಿಳಿಸಲಿಲ್ಲ ಮತ್ತು ಆ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೂ ಉತ್ತರಿಸಲಿಲ್ಲ.
ಆದರೆ, ಭಾರತ್ ಬಯೋಟೆಕ್ ನ ಸುಧಾರಣಾ ಕ್ರಿಯಾ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ತಿರಸ್ಕರಿಸಿತ್ತು ಹಾಗೂ ಇದೇ ಕಾರಣಕ್ಕಾಗಿ ಲಸಿಕೆಗಳ ಮೇಲಿನ ನಿಷೇಧ ಮುಂದುವರಿದಿತ್ತು ಎನ್ನುವುದನ್ನು ‘ದ ವಯರ್ ಸಯನ್ಸ್’ ಕಂಡುಕೊಂಡಿತು. ಈ ನಿಷೇಧದ ಬಗ್ಗೆ ಭಾರತ್ ಬಯೋಟೆಕ್ ಯಾವುದೇ ಹೇಳಿಕೆಯನ್ನು ನೀಡಲಿಲ್ಲ. ಜಗತ್ತಿನಲ್ಲಿರುವ ಎಲ್ಲಾ ಕೋವಿಡ್-19 ಲಸಿಕೆಗಳ ಪೈಕಿ ವಿಶ್ವ ಆರೋಗ್ಯ ಸಂಸ್ಥೆಯ ನಿಷೇಧಕ್ಕೆ ಒಳಗಾಗಿರುವ ಏಕೈಕ ಲಸಿಕೆ ಕೋವ್ಯಾಕ್ಸಿನ್ ಆಗಿದೆ.

ವೈದ್ಯಕೀಯ ಪ್ರಯೋಗಗಳಲ್ಲಿ ಅವ್ಯವಹಾರ

ಲಸಿಕೆಯ ಮೂರು ಹಂತಗಳ ವೈದ್ಯಕೀಯ ಪ್ರಯೋಗಗಳಲ್ಲಿ ಹಲವಾರು ಅವ್ಯವಹಾರಗಳು ನಡೆದಿದ್ದವು ಎಂದು ‘ಸ್ಟಾಟ್’ ಹೇಳಿದೆ. ಮೊದಲ ಮತ್ತು ಎರಡನೇ ಹಂತಗಳ ವೈದ್ಯಕೀಯ ಪ್ರಯೋಗಗಳಲ್ಲಿ ಭಾಗವಹಿಸಿದವರ ಸಂಖ್ಯೆಯಲ್ಲಿ ವ್ಯತ್ಯಾಸವಿರುವುದನ್ನು ಅದು ಪತ್ತೆಮಾಡಿದೆ. ಲಸಿಕೆಯ ವೈದ್ಯಕೀಯ ಪ್ರಯೋಗಗಳಿಗೆ ಸಂಬಂಧಿಸಿ ‘ದ ಲ್ಯಾನ್ಸೆಟ್ ಇನ್ಫೆಕ್ಶಿಯಸ್ ಡಿಸೀಸಸ್’ನಲ್ಲಿ ಪ್ರಕಟಗೊಂಡಿರುವ ಪ್ರಬಂಧಗಳಲ್ಲಿ ಒಂದು ಸಂಖ್ಯೆಯಿದ್ದರೆ, ಪ್ರಯೋಗ ಶಿಷ್ಟಾಚಾರ ದಾಖಲೆ (ಟ್ರಯಲ್ ಪ್ರೊಟೊಕಾಲ್ ಡಾಕ್ಯುಮೆಂಟ್)ಯಲ್ಲಿ ನಮೂದಾಗಿರುವ ಸಂಖ್ಯೆಯೇ ಬೇರೆಯಾಗಿದೆ ಎನ್ನುವುದನ್ನು ವರದಿಗಾರ ಎಡ್ ಸಿಲ್ವರ್ಮನ್ ನೇತೃತ್ವದಲ್ಲಿ ‘ಸ್ಟಾಟ್’ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

‘‘ದಾಖಲೆಗಳನ್ನು ಪರಿಶೀಲಿಸುವಾಗ, ಪ್ರಯೋಗಗಳಲ್ಲಿ ಪಾಲ್ಗೊಂಡವರ ಸಂಖ್ಯೆಯಲ್ಲಿ ವ್ಯತ್ಯಾಸ ಇರುವುದು ಗಮನಕ್ಕೆ ಬಂತು’’ ಎಂಬುದಾಗಿ ಸಿಲ್ವರ್ಮನ್ ಬರೆದಿದ್ದಾರೆ.


ಮೊದಲ ಹಂತದ ಫಲಿತಾಂಶಕ್ಕೆ ಮೊದಲೇ 2ನೇ ಹಂತಕ್ಕೆ ಅನುಮತಿ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಹಂತದ ವೈದ್ಯಕೀಯ ಪ್ರಯೋಗದ ಫಲಿತಾಂಶ ಕೈಸೇರುವ ಮೊದಲೇ ಎರಡನೇ ಹಂತದ ಪ್ರಯೋಗವನ್ನು ನಡೆಸಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಭಾರತ್ ಬಯೋಟೆಕ್ಗೆ ಅನುಮತಿ ನೀಡಿರುವುದನ್ನು ‘ಸ್ಟಾಟ್’ ಪತ್ತೆಹಚ್ಚಿದೆ.
ವೈದ್ಯಕೀಯ ಪ್ರಯೋಗ ಪೂರ್ವದ ಅಧ್ಯಯನಗಳ ಆಧಾರದಲ್ಲಿ ಅದು ಈ ಅನುಮತಿಯನ್ನು ನೀಡಿತ್ತು. ಆ ಅಧ್ಯಯನಗಳನ್ನು ಪ್ರಾಣಿಗಳ ಮೇಲೆ ನಡೆಸಲಾಗಿತ್ತು. ಮೊದಲ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಲಸಿಕೆಯನ್ನು ಮೊದಲ ಬಾರಿಗೆ ಮಾನವರಿಗೆ ನೀಡಲಾಗಿತ್ತು.

Similar News