ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ಚಿಲುಮೆ ಏಜೆಂಟರುಗಳಿಂದ BBMP ವ್ಯಾಪ್ತಿಯ ಮನೆಗಳ ಭೇಟಿ: ‘ಮತದಾರರ ಪಟ್ಟಿ ಪರಿಷ್ಕರಣೆ?

ಎನ್‌ಜಿಓದಿಂದ ಮತದಾರರ ಮಾಹಿತಿ ಕಳವು !

Update: 2022-11-17 05:44 GMT

ಬೆಂಗಳೂರು, ನ.16: ಖಾಸಗಿ ಎನ್‌ಜಿಒ ಸಂಸ್ಥೆಯೊಂದು, ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ತನ್ನ ಏಜೆಂಟರ ಮೂಲಕ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿರುವುದು ಈಗ ಬಯಲಾಗಿದೆ. ಅಚ್ಚರಿಯೆಂದರೆ ಸರಕಾರದ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡು ಈ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆಯೆಂಬ ವಿಚಾರ ಈಗ ಬಯಲಾಗಿದೆಯೆಂದು thenewsminute.com ವರದಿ ಮಾಡಿದೆ.

ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ವಿವಾದಕ್ಕೆ ಸಿಲುಕಿರುವ ಎನ್‌ಜಿಒ ಆಗಿದೆ. ಚಿಲುಮೆ ಎನ್‌ಜಿಒ ಸಂಸ್ಥೆಯು ತನ್ನ ನಿರ್ದೇಶಕರೊಬ್ಬರ ಮೂಲಕ ಚುನಾವಣಾ ನಿರ್ವಹಣಾ ಕಂಪೆನಿಯೊಂದರ ಜೊತೆ ನಂಟು ಹೊಂದಿದೆಯೆನ್ನಲಾಗಿದೆ. ಈ ದತ್ತಾಂಶವನ್ನು ಯಾಕೆ ಸಂಗ್ರಹಿಸಲಾಗಿದೆ ಹಾಗೂ ಇದರಿಂದ ಯಾರಿಗೆ ಪ್ರಯೋಜನವಾಗಲಿದೆ ಎಂಬ ಗಂಭೀರ ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟುಹಾಕಿದೆ. ‘thenewsminute.com’  ಹಾಗೂ ಕನ್ನಡ ಸುದ್ದಿಜಾಲತಾಣ ‘ಪ್ರತಿಧ್ವನಿ’ಯ 6 ಪತ್ರಕರ್ತರು ಸುಮಾರು ತಿಂಗಳುಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸಿ, ಈ ಕರ್ಮಕಾಂಡವನ್ನು ಭೇದಿಸಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಸ್ವೀಪ್ (ಮತದಾರರಿಗೆ ವ್ಯವಸ್ಥಿತ ಅರಿವು ಹಾಗೂ ಚುನಾವಣಾ ಪಾಲ್ಗೊಳ್ಳುವಿಕೆ) ಎಂಬ ವಿಶೇಷ ಮತದಾರ ಜಾಗೃತಿ ಅಭಿಯಾನವನ್ನು ನಡೆಸಲು ‘ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆಯು ಈ ಆದೇಶವನ್ನು ದುರುಪಯೋಗಪಡಿಸಿಕೊಂಡಿತು. ತನ್ನ ನೂರಾರು ಕ್ಷೇತ್ರೀಯ ಏಜೆಂಟರುಗಳಿಗೆ ಅವರನ್ನು ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಗಳೆಂಬಂತೆ ಬಿಂಬಿಸುವ ನಕಲಿ ಗುರುತುಕಾರ್ಡ್‌ಗಳನ್ನು ನೀಡಿ, ಕಾರ್ಯನಿರ್ವಹಿಸಿತ್ತು.

Photo: Thenewsminute.com

ಚಿಲುಮೆ ಸಂಸ್ಥೆಯ ಕ್ಷೇತ್ರೀಯ ಕಾರ್ಯಕರ್ತರು ಬಿಬಿಎಂಪಿ ವ್ಯಾಪ್ತಿಯ ಮನೆಮನೆಗಳಿಗೆ ಭೇಟಿ ನೀಡಿ, ಮತದಾರರಿಂದ ಅವರ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿಗತಿ, ವಯಸ್ಸು, ಲಿಂಗ, ಉದ್ಯೋಗ ಹಾಗೂ ಶೈಕ್ಷಣಿಕ ವಿವರಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮತದಾರರ ಆಧಾರ್ ಸಂಖ್ಯೆ,ದೂರವಾಣಿ ಸಂಖ್ಯೆ, ವಿಳಾಸ, ಮತದಾರರ ಐಡಿ ಸಂಖ್ಯೆ ಹಾಗೂ ಇಮೇಲ್ ವಿಳಾಸವನ್ನು ಕೂಡಾ ಸಂಗ್ರಹಿಸಿದ್ದರು.

ಮಹಾದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಬಿಬಿಎಂಪಿಗೆ ನೆರವಾಗಲು ಅನುಮತಿ ನೀಡಿದ ಆದೇಶದಲ್ಲಿ ಸಂಸ್ಥೆಯು ಯಾವುದೇ ರಾಜಕೀಯ ಸಂಘಟನೆಯ ಜೊತೆ ನಂಟನ್ನು ಹೊಂದಿರಬಾರದೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಆದರೆ ಈ ಎನ್‌ಜಿಒ ಸಂಸ್ಥೆಯಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರಗನ್ನು ನಿರ್ವಹಿಸಿದ್ದಾರೆಂಬುದನ್ನು ನ್ಯೂಸ್‌ಮಿನಿಟ್ ಬಯಲಿಗೆಳೆದಿದೆ.

ಚಿಲುಮೆ ಸಂಸ್ಥೆಯ ಪೂರ್ವಾಪರಗಳನ್ನು ಸಮಗ್ರವಾಗಿ ಪರಿಶೀಲಿಸದೆಯೇ ಈ ವರ್ಷದ ಆಗಸ್ಟ್ 20ರಂದು ಆ ಸಂಸ್ಥೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಚುನಾವಣೆ, ಮತದಾರ ಪಟ್ಟಿಯಲ್ಲಿ ನೋಂದಾವಣೆ ಹಾಗೂ ಆಧಾರ್ ಕಾರ್ಡನ್ನು ಮತದಾರರ ಗುರುತಿನ ಕಾರ್ಡ್ ಜೊತೆ ಜೋಡಿಸುವ ಬಗ್ಗೆ ಅರಿವು ಮೂಡಿಸುವಿಕೆಯ ಕಾರ್ಯವನ್ನು ವಹಿಸಲಾಗಿತ್ತು.

ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ತಮ್ಮನ್ನು ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಜನರ ಗುಂಪೊಂದು ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ನೆಪದಲ್ಲಿ ಮನೆಮನೆಗಳಿಗೆ ಭೇಟಿ ನೀಡಿ ಆಧಾರ್ ಸಂಖ್ಯೆ ಹಾಗೂ ಮತದಾರರ ಗುರುತು ಚೀಟಿ ಮತ್ತಿತರ ವಿವರಗಳನ್ನು ಪಡೆದುಕೊಂಡಿದ್ದರೆಂದು ಶಿವಾಜಿನಗರದ ನಿವಾಸಿಗಳು ಆರೋಪಿಸಿದ್ದಾರೆಂದು ಸ್ಥಳೀಯ ಆಶಾ ಕಾರ್ಯಕರ್ತೆ ಗೀತಾ ವಿ. ಅವರು ನ್ಯೂಸ್‌ಮಿನಿಟ್‌ಗೆ ತಿಳಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಲೋಪಗಳಿರುವುದಾಗಿ ಹೇಳಿಕೊಂಡುಆಕ್ಟೋಬರ್ 11ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದೂರನ್ನೇ ನೆಪ ಮಾಡಿಕೊಂಡು ಈ ಖಾಸಗಿ ಎನ್‌ಜಿಓ ಸಂಸ್ಥೆಯಿಂದ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಪ್ರತಿಪಕ್ಷಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಕೆಲವು ನಿರ್ದಿಷ್ಟ ಪ್ರದೇಶಗಳ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದುಹಾಕುವ ದುರುದ್ದೇಶದಿಂದಲೇ ಸಮೀಕ್ಷೆಯನ್ನು ನಡೆಸಲಾಗಿದೆಯೆಂದು ಪ್ರತಿಪಕ್ಷ ಕಾಂಗ್ರೆಸ್ ಆಪಾದಿಸಿದೆ.

''ಬಿಬಿಎಂಪಿಯ ಅಧಿಕಾರಿಗಳೆಂದು ಹೇಳಿಕೊಂಡ ಈ ವ್ಯಕ್ತಿಗಳು ನಮ್ಮ ಮನೆಗೆ ಬಂದು, ಮತದಾರರ ಪಟ್ಟಿಯಿಂದ ನಮ್ಮ ಹೆಸರುಗಳನ್ನು ತೆಗೆದುಹಾಕುವುದಾಗಿ ಹೇಳಿದ್ದರು. ಈಗ ನಮಗೆ ನಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆಯೇ ಇಲ್ಲವೇ ಎಂಬುದು ತಿಳಿದಿಲ್ಲ''

- ಝರೀನಾ ತಾಜ್, ಶಿವಾಜಿ ನಗರದ ನಿವಾಸಿ

''ನನ್ನ ಮನೆಗೆ ದೃಢೀಕರಣಕ್ಕಾಗಿ ಆಗಮಿಸಿದ ವ್ಯಕ್ತಿಗಳು ನನ್ನ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದರು''

ಅಫ್ರೋಝ್ ಪಾಶಾ, ಶಿವಾಜಿನಗರದ ನಿವಾಸಿ

--------------------

''ಮತದಾರರ ದೃಢೀಕರಣಕ್ಕಾಗಿ ಬಂದ ವ್ಯಕ್ತಿಗಳು ನಮ್ಮ ಪ್ರದೇಶಕ್ಕೆ ನಿಯಮಿತವಾಗಿ ಭೇಟಿ ನೀಡುವ ಬಿಎಲ್‌ಒ ಅಧಿಕಾರಿಗಳಾಗಿರಲಿಲ್ಲ. ಅವರು ನನ್ನ ಪತಿ, ಸಹೋದರ ಹಾಗೂ ತಂದೆ ಇಲ್ಲಿಯೇ ನೆಲೆಸಿದ್ದು, ಕೆಲಸಕ್ಕಾಗಿ ಹೊರಹೋಗಿದ್ದಾರೆಂದು ಹೇಳಿದ ಹೊರತಾಗಿಯೂ ಮತದಾ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದರು''

ಸಲ್ಮಾ ಸುಲ್ತಾನ, ಶಿವಾಜಿನಗರ ನಿವಾಸಿ

-----------------

''ಬಿಎಲ್‌ಒ ಅಧಿಕಾರಿಗಳಿಗಿಂತ ಹೊರತಾದವರು ಮತದಾರರ ದೃಢೀಕರಣಕ್ಕಾಗಿ ಆಗಮಿಸಿರುವ ಬಗ್ಗೆ ಈವರೆಗೆ ನಮಗೆ ಯಾವುದೇ ದೂರುಬಂದಿಲ್ಲ. ಮತದಾರರ ಔಪಚಾರಿಕ ದೃಢೀಕರಣ ಪ್ರಕ್ರಿಯೆ ಈ ವಾರದಿಂದ ಆರಂಭವಾಗಲಿದೆ''

ಸುಹೈಲ್ ಅಹ್ಮದ್, ಮುಖ್ಯ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ), ಶಿವಾಜಿ ನಗರ

-----------------------------

''ಚಿಲುಮೆ ಸಂಸ್ಥೆಯಿಂದ ಯಾವುದೇ ಲೋಪವಾಗಿಲ್ಲ. ಮತದಾರರ ದತ್ತಾಂಶಗಳನ್ನು ಸಂಗ್ರಹಿಸಲು ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡುವುದಕ್ಕಾಗಿ ಫಾರಂ 6 ಹಾಗೂ 7ರಲ್ಲಿ ತಿದ್ದುಪಡಿ ಮಾಡಲಾಗಿದೆ''

ರವಿಕುಮಾರ್ ಕೃಷ್ಣಪ್ಪ, ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ

----------------------------

► ಮತದಾರ ಪಟ್ಟಿ ಪರಿಷ್ಕರಣೆ: ಚಿಲುಮೆಗೆ ಅನುಮತಿ ರದ್ದು

ಈ ಎಲ್ಲಾ ವಿವಾದದ ನಡುವೆ, ಬಿಬಿಎಂಪಿ ವ್ಯಾಪ್ತಿಯ ಮತದಾರರಲ್ಲಿ ಜಾಗೃತಿ ಮೂಡಿಸುವ  ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಯ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿರುವುದಾಗಿ ಬಿಬಿಎಂಪಿ ಬುಧವಾರ ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ. 

ಕೃಪೆ: Thenewsminute.com

Similar News